ಬೆಳ್ತಂಗಡಿ,ಜುಲೈ.28 :ಉಜಿರೆ ಮುಂಡಾಜೆ ಸಮೀಪ ಸೀಟು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಸರಕಾರಿ ಬಸ್ಸಿನ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸಹಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತ ಯುವಕ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದಿ| ಕೃಷ್ಣ ಅವರ ಪುತ್ರ ಪ್ರಶಾಂತ್ ಪೂಜಾರಿ(23) ಎಂದು ಗುರುತಿಸಲಾಗಿದೆ . ಈತ ತನ್ನ ಗೆಳೆಯನ ಬೈಕಿನಲ್ಲಿ ಹಿಂದೆ ಕುಳಿತು ಸೋಮಂತಡ್ಕದಿಂದ ಉಜಿರೆ ಕಡೆ ಬರುತ್ತಿದ್ದ ವೇಳೆ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆ ಹೋಗುತ್ತಿದ್ದ ರಾಜಹಂಸ ಬಸ್ಸು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಬಿದ್ದಿದ್ದ ಪ್ರಶಾಂತ್ ಅವರನ್ನು ರಿಕ್ಷಾ ಚಾಲಕ ಮನ್ಸೂರ್ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆಗೆ ಆತ ಮೃತಪಟ್ಟಿದ್ದ.
ಮೃತ ಪ್ರಶಾಂತ್ ಧರ್ಮಸ್ಥಳ ರತ್ನಶ್ರೀ ಮುದ್ರಣಾಲಯದಲ್ಲಿ ನೌಕರಿ ಮಾಡುತ್ತಿದ್ದ ಹಾಗೂ ಕನ್ಯಾಡಿಯ ವೀರಕೇಸರಿ ಸಂಘಟನೆಯಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದ. ಬೈಕ್ ಸವಾರಿ ಮಾಡುತ್ತಿದ್ದ ಸಂದೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಾಗೂ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಅಪಘಾತವಾಗಿದ್ದು, ಬೈಕ್ ಇನ್ನೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಬಸ್ಸಿ ಚಾಲಕ ನಡೆಯುವ ಅನಾಹುತವನ್ನು ತಪ್ಪಿಸಲು ಹೋಗಿ ಬಸ್ಸನ್ನು ಚರಂಡಿಗೆ ಇಳಿಸಿದ್ದಾರೆ ಎಂದು ತಿಳಿದುಬಂದಿದೆ.





