ಮಂಗಳೂರು, (ಎಸ್.ಯು.ಪಣಿಯಾಡಿ ವೇದಿಕೆ), ಜುಲೈ.25: ಸಂತ ಎಂಬುದು ಯಾವುದೇ ಧರ್ಮದ ಅಸ್ಮಿತೆಯಲ್ಲ. ಅದು ಧರ್ಮದಾಚೆಯ ಪ್ರತೀಕವಾಗಿದೆ. ಸಾಮಾಜಿಕವಾಗಿ ಬೆರೆತು ಸಂವಹನ ಕಲ್ಪಿಸುವ ಶಿಲ್ಪಿಗಳು. ಇಂತಹ ಶಿಲ್ಪಿಗಳಂತಿರುವ ಸಂತಕವಿ ಕನಕದಾಸರ ಕುರಿತ ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದಿಸಿರುವುದು ಶ್ಲಾಘನಾರ್ಹ ಎಂದು ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಹೇಳಿದರು.
ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಹೊರವಲಯದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶುಕ್ರವಾರ ನಡೆದ “ಸಂಗಮ ಸಂಭ್ರಮ 2015 “ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಕುರಿತ ಡಾ. ಚಿಕ್ಕಮಗಳೂರು ಗಣೇಶ ಕನ್ನಡದಲ್ಲಿ ರಚಿಸಿರುವ ಅತ್ರಾಡಿ ಅಮೃತಾ ಶೆಟ್ಟಿ (ತುಳು), ಬಿ.ಎಂ.ಹನೀಫ್ (ಬ್ಯಾರಿ), ಡಾ.ಗೀತಾ ಶೆಣೈ (ಕೊಂಕಣಿ), ಮುಹೇರ್ ಮನ್ಸೂರ್(ಉರ್ದು) ಭಾಷೆಯಲ್ಲಿ ಅನುವಾದಿಸಿದ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನಕದಾಸರ ಜೀವನ ಕ್ರಮ, ಆಲೋಚನಾ ಶಕ್ತಿಯನ್ನು ಕನ್ನಡ ಮಾತ್ರವಲ್ಲ, ಇತರ ಭಾಷೆಯಲ್ಲೂ ಪ್ರಕಟಗೊಳ್ಳುವ ಮೂಲಕ ಕನಕದಾಸರ ಚಿಂತನೆಯ ಲೋಕ ವಿಸ್ತೃತಗೊಳ್ಳಲಿದೆ. ಕರಾವಳಿಯ ತುಳು, ಕೊಂಕಣಿ, ಬ್ಯಾರಿ ಭಾಷಿಗರೂ ಕನಕದಾಸರ ಕುರಿತು ತಿಳಿದುಕೊಳ್ಳಲು ಸಾಧ್ಯವಾಯಿತು. ಇಂತಹ ಪ್ರಕ್ರಿಯೆ ನಿರಂತರ ವಾಗಿ ನಡೆದಾಗ ಸ್ಥಳೀಯ ಭಾಷೆಗಳ ಸಾಹಿತ್ಯ ಲೋಕ ಶ್ರೀಮಂತಗೊಳ್ಳಲಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಕನಕದಾಸರ ಕುರಿತು ಕಮ್ಮಟಗಳನ್ನು ನಡೆಸುವ ಅಗತ್ಯವಿದೆ ಎಂದು ಪ್ರೊ.ಬಿ.ಎ.ವಿವೇಕ ರೈ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ವಹಿಸಿದ್ದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಪ್ರಾಸ್ತಾವಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸ ಪ್ರೊ. ಎ.ವಿ. ನಾವಡ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ತುಳು ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್‌ಗಳಾದ ಚಂದ್ರಹಾಸ ರೈ, ಡಾ. ಬಿ.ದೇವದಾಸ ಪೈ, ಉಮರಬ್ಬ ಉಪಸ್ಥಿತರಿದ್ದರು. ತುಳು ಅಕಾಡಮಿಯ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕೊಂಕಣಿ, ಬ್ಯಾರಿ, ಉರ್ದು ಮತ್ತು ತುಳು ಅನುವಾದಿತ ಪುಸ್ತಕಗಳಿಂದ ಎಚ್ ರಾಘವೇಂದ್ರ ರಾವ್ ಮತ್ತು ತಂಡ ಆಯ್ದ ಕೀರ್ತನೆಗಳನ್ನು ಹಾಡಿತು.




