ಮಂಗಳೂರು,ಜುಲೈ.23 : ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಜಯಂತ್ ಸಿದ್ಮಲ್ಲಪ್ಪ ಮತ್ತು ರವಿ ಸಾವ್ಕಾರ್ ಎಂಬ ಉತ್ಸಾಹಿ ತರುಣರು ಇತ್ತೀಚೆಗೆ ‘ಕಲಿ ಕನ್ನಡ’ (https://goo.gl/sd0oAU) ಎಂಬ ಟ್ವಿಟರ್ ಖಾತೆ ತೆರೆದಿದ್ದಾರೆ. ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ, ವ್ಯಾಪಕವಾಗಿ ಮತ್ತು ತಾಂತ್ರಿಕ ಸ್ನೇಹಿಯಾಗಿ ರೂಪಿಸುವುದು ಈ ಪ್ರಯತ್ನದ ಹಿಂದಿನ ಆಶಯ.
“ಕಲಿ ಕನ್ನಡ’ ಕನ್ನಡ ಕಲಿಯುವ-ಕಲಿಸುವ ಜನರನ್ನು ಜೋಡಿಸುವ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಮೇ ತಿಂಗಳಲ್ಲಿ ಆರಂಭವಾದ ಈ ಪ್ರಯತ್ನಕ್ಕೆ ಮೂರು ವಾರಗಳಲ್ಲೇ ಮುನ್ನೂರಕ್ಕೂ ಹೆಚ್ಚು ಜನರು ಹಿಂಬಾಲಕರಾಗಿರುವುದು ಗಮನೀಯ ಅಂಶ. ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ಕೇಳಿ ಪಡೆಯಬೇಕು ಮತ್ತು ಆ ಮೂಲಕ ಮಾರುಕಟ್ಟೆಯಲ್ಲಿ ಕನ್ನಡಕ್ಕೊಂದು ಆರ್ಥಿಕ ಬಲ ತಂದುಕೊಡಬೇಕು ಎಂಬ ಆಶಯದೊಂದಿಗೆ 2012ರಲ್ಲಿ ಹುಟ್ಟಿಕೊಂಡ ಸಂಘಟನೆ ಕನ್ನಡ ಗ್ರಾಹಕರ ಕೂಟ.
ಈ ಕಲಿ ಕನ್ನಡದಿಂದಾಗಿ ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ತಾಣಗಳು ಕನ್ನಡಕ್ಕೆ ಜಾಗತಿಕ ನೆಲೆ, ಬೆಲೆ ತಂದುಕೊಟ್ಟಿವೆ. ಹೀಗೆ ಕನ್ನಡ ಜನಪ್ರಿಯಗೊಂಡರೆ ಅದಕ್ಕೆ ಮಾರುಕಟ್ಟೆ ಮೌಲ್ಯ ಹೆಚ್ಚುತ್ತದೆ. ಅನ್ಯಭಾಷಿಕರು ಕನ್ನಡ ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಅಷ್ಟೇ ಅಲ್ಲ, ಹೊಸ ತಲೆಮಾರಿನ ತಾಂತ್ರಿಕ ಆವಿಷ್ಕಾರಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆಯೂ ಹೆಚ್ಚಲಿದೆ ಎನ್ನುತ್ತಾರೆ ಐಟಿ ವೃತ್ತಿಪರರಾದ ಈ ಯುವಕರು.
ಕಲಿಯಿರಿ – ಕಲಿಸಿರಿ:
‘ಅನ್ಯ ಭಾಷಿಕರಿಗೆ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದರೆ ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಹೊಣೆ ಸ್ಥಳೀಯರದ್ದೇ’ ಎನ್ನುತ್ತಾರೆ ಜಯಂತ್. ಈಗಂತೂ ಭಾಷೆಯೊಂದನ್ನು (ಕನ್ನಡ) ಕಲಿಯಲು ಮತ್ತು ಕಲಿಸಲು ಸಾಕಷ್ಟು ವೇದಿಕೆಗಳಿವೆ. ಆದರೆ, ಇವೆಲ್ಲವುಗಳಿಗಿಂತ ‘ಟ್ವಿಟರ್ ಕಲಿ ಕನ್ನಡ’ ತುಸು ಭಿನ್ನ.
ಜತೆಯಲ್ಲೇ, ಕನ್ನಡ ಕಲಿಯುವ ಮತ್ತು ಕಲಿಸುವ ಆಸಕ್ತಿ ಇರುವ ಇಬ್ಬರನ್ನೂ ಒಂದೇ ವೇದಿಕೆಯಡಿ ತರುವ ಪ್ರಯತ್ನವೂ ಈ ಖಾತೆ ಮೂಲಕ ನಡೆದಿದೆ.
