ಕನ್ನಡ ವಾರ್ತೆಗಳು

ನೀರುಪಾಲಾಗಿದ್ದ ಎಎಸ್ಸೈ ಮೃತದೇಹ ಪತ್ತೆ.

Pinterest LinkedIn Tumblr

kumble_SI_nayak_photoa

ಮಂಗಳೂರು/ಕುಂಬಳೆ, ಜುಲೈ.22 : ನಾಲ್ಕು ದಿನಗಳ ಹಿಂದೆ ಆದೂರು ಪಲ್ಲತ್ತೂರು ಮುಳುಗು ಸೇತುವೆಯಿಂದ ಬೈಕ್ ಸಹಿತ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಕುಂಬಳೆ ಠಾಣೆಯ ಎಎಸ್ಸೈ ನಾರಾಯಣ ನಾಯ್ಕ (52) ಅವರ ಮೃತದೇಹ ಘಟನೆ ನಡೆದ ಪ್ರದೇಶದಿಂದ ಮೂರು ಕಿ.ಮೀ. ದೂರದ ಹೊಳೆಯಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಸೋಮವಾರ ಸಂಜೆ ತನಕ ಮುಳುಗು ತಜ್ಞರು, ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ನಡೆಸಿದ್ದರು. ಮುಳುಗು ತಜ್ಞರು ಮಂಗಳವಾರ ಬೆಳಗ್ಗೆ ಕಣ್ಣೂರಿಗೆ ಮರಳಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಸ್ಥಳೀಯರು ನಿರಂತರವಾಗಿ ಶೋಧ ನಡೆಸಿದ್ದು, ಕೊನೆಗೆ ಸ್ಥಳೀಯರೇ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಶನಿವಾರ ಸಂಜೆ ದುರಂತ ನಡೆದಿತ್ತು. ಮನೆಗೆ ತೆರಳಿ ಬೈಕ್‌ನಲ್ಲಿ ಪಲ್ಲತ್ತೂರು ಸೇತುವೆ ದಾಟುತ್ತಿದ್ದಾಗ ಬೈಕ್ ಸಹಿತ ನೀರಲ್ಲಿ ಕೊಚ್ಚಿ ಹೋಗಿದ್ದರು. ಭಾರೀ ಮಳೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಕಣ್ಣೂರಿನಿಂದ ಆಗಮಿಸಿದ ಮುಳುಗು ತಜ್ಞರು ಶೋಧ ನಡೆಸಿದ್ದರೂ ಎಎಸ್ಸೈಯ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಯಮುತ್ತೂರಿನ ಮುಳುಗು ತಜ್ಞರ ನೆರವನ್ನು ಪೊಲೀಸರು ಕೋರಿದ್ದರು.

1984ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡ ನಾರಾಯಣ ನಾಯ್ಕ ಬದಿಯಡ್ಕ, ಆದೂರು, ಬೇಡಡ್ಕ, ಮಂಜೇಶ್ವರ ಮತ್ತು ಕಾಸರಗೋಡು ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಭಡ್ತಿ ಲಭಿಸಿ ಕೆಲ ಸಮಯದ ಹಿಂದೆಯಷ್ಟೇ ಕುಂಬಳೆ ಠಾಣೆಯ ಎಎಸ್ಸೈಯಾಗಿ ನಿಯುಕ್ತಿಗೊಂಡಿದ್ದರು. ಎಎಸ್ಸೈ ನಾರಾಯಣ ನಾಯ್ಕರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಸರಗೋಡು ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರು ಅಂತಿಮ ದರ್ಶನ ಪಡೆದರು. ಕೆಲವೇ ನಿಮಿಷ ಮಾತ್ರ ಅಂತಿಮ ದರ್ಶನಕ್ಕಿಡಲಾಗಿದ್ದು, ಬಳಿಕ ಹುಟ್ಟೂರಾದ ಆದೂರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು.

Write A Comment