ಕೊಣಾಜೆ,ಜುಲೈ.17: ಕರ್ನಾಟಕದಲ್ಲಿ ಪ್ರತೀ ವರ್ಷ ಕೃಷಿ ಇಳುವರಿ ಕಡಿಮೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಕೃಷಿ ಚಟುವಟಿಕೆ ನಿಲ್ಲುವ ಸಾಧ್ಯತೆ ಇದ್ದು, ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿ ಕೃಷಿ ಉಳಿಸುವ ನಿಟ್ಟಿನಲ್ಲಿ ಪಣ ತೊಡುವ ಕಾರ್ಯ ಮಾಡಬೇಕು ಎಂದು ಯೇನೆಪೊಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್ ಅಬಿಪ್ರಾಯಪಟ್ಟರು.
ಅವರು ಕೊಣಾಜೆ ಗ್ರಾಮದ ಪರಂಡೆಯ ರೈತರೊಬ್ಬರ ಗದ್ದೆಯಲ್ಲಿ ಕಿಟ್ಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನೇಜಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನೇಜಿ ನಾಟಿ ಕಾರ್ಯಕ್ರಮಕ್ಕೆ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಚಾಲನೆ ನೀಡಿ ಕೃಷಿ ಜೀವನ ಉತ್ತಮವಾಗಿದ್ದು, ಕೃಷಿಯ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಕೃಷಿಯನ್ನು ಉಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಸಂಘಟಕ ಕಿಟ್ಟೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ ಎ. ಮಾತನಾಡಿ ನೇಜಿ ನಾಟಿ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಗಳಿಂದ ರೈತರಿಗೆ ಉಪಯೋಗವಾಗಲೂ ಬೇಕು ಮತ್ತು ವಿದ್ಯಾರ್ಥಿಗಳು ಇಂತಹ ಕಾರ್ಯದಿಂದ ಮನೋರಂಜನೆಯನ್ನು ಪಡೆಯುವಂತಾಗಬೇಕು ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಕಾಲೇಜಿನ ವತಿಯಿಂದ ನಡೆಯುವ ಈ ಕಾರ್ಯಕ್ರಮ ಪ್ರಾರಂಭ ಮಾತ್ರ ಮುಂದಿನ ದಿನಗಳಲ್ಲಿ ಈ ಬೆಳೆ ಸಂಪೂರ್ಣವಾಗುವವರೆಗೂ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ ಎಂದರು.
ಮಕ್ಕಳಿಗೆ ನೇಜಿ ನೆಡುವ ಕಾರ್ಯದಲ್ಲಿ ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆ ಗೋರಿಗುಡ್ಡದ ನಿವೃತ್ತ ಮುಖ್ಯೋಪಾಧ್ಯಾಯ ವಿನ್ಸೆಂಟ್ ಸ್ಯಾಮುವೆಲ್ ಕರ್ಕಡ, ಕೊಣಾಜೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸುದರ್ಶನ್ ಭಟ್ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳೊಂದಿಗೆ ನೇಜಿ ನೆಡುವ ಕಾರ್ಯದಲ್ಲಿ ತೊಡಗಿಸಿದರು. ಭಟ್ ಅವರಿಗೆ ಸ್ಥಳೀಯರಾದ ರತ್ನಾವತಿ ಶೆಟ್ಟಿಗಾರ್ ಮತ್ತು ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರೂ ಕೃಷಿಕರೂ ಆಗಿರುವ ಮುತ್ತು ಶೆಟ್ಟಿ ಪಾಡ್ದನಗಳೊಂದಿಗೆ ನೇಜಿ ನೆಡುವುದರ ಮಾಹಿತಿ ನೀಡಿದರು.ಕೃಷಿಕ ದಯಾನಂದ ಅವರು ಬಿತ್ತನೆಯನ್ನು ಯಾವ ರೀತಿ ಮಾಡಲಾಗುತ್ತಿದೆ ಎನ್ನುವ ವಿಚಾರದಲ್ಲಿ ಮಾಹಿತಿ ನೀಡಿದರು.
ಕೃಷಿಕ ರಮೇಶ್ ಪೂಜಾರಿ, ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡೋರತಿ ಅಮ್ಮನ್ನ ಉಪಸ್ಥಿತರಿದ್ದರು.
ಕಿಟ್ಟೆಲ್ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳು ಪರಂಡೆಯ ಧನಂಜಯ ಬಂಗೇರ ಅವರ ಎರಡು ಗದ್ದೆಗಳಲ್ಲಿ ಬೆಳಗ್ಗಿನಿಂದ ನೇಜಿ ನಾಟಿಯನ್ನು ನಡೆಸಿದ್ದು, ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ, ಕಾಲೇಜಿನ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು.






