ಮಂಗಳೂರು, ಜುಲೈ.14 : ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ನಿರಂತರವಾಗಿರುವಂತೆ ಕ್ರಮ ಕೈಗೊಳುವಲ್ಲಿ ಮಂಗಳೂರು ಮಹಾ ನಗರಪಾಲಿಕೆ ಮುಂದಾಗಿದ್ದು, ತುಂಬೆ ಅಣೆಕಟ್ಟೆ ಎತ್ತರವನ್ನು ಈಗಿರುವ 4.00 ಮೀ. ನಿಂದ 7.00ಮೀ.ಗೆ ಏರಿಸಲು ಅಗತ್ಯವಾಗಿರುವ 276.82 .50 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸೂಕ್ತಕ್ರಮ ಕೈಗೊಳ್ಳಲು ಜಿಲ್ಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸೂಚಿಸಿದ್ದಾರೆ.
ಅವರು ಸೋಮವಾರ ತಮ್ಮ ಕಛೇರಿಯಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರು ಸಂಗ್ರಹಿಸಲು ಹೊಸ ವೆಂಟೆಡ್ ಡ್ಯಾಂ ನಿರ್ಮಾಣ ಕಾರ್ಯವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸರಕಾರದ ಆದೇಶದಂತೆ ನೀಡಿದೆ. ಈಗಾಗಲೇ ಮಂಡಳಿಗೆ ರೂ.21.97 ಕೋಟಿಯನ್ನು ಪಾವತಿಸಲಾಗಿದೆ. ಹೊಸ ವೆಂಟೆಡ್ ಡ್ಯಾಂ ಯೋಜನೆಯಲ್ಲಿನ ಕಾಮಗಾರಿಯನ್ನು ನಿವೇಶನಕ್ಕೆ ಅನುಗುಣವಾಗಿ ಹಾಲಿ ಅನುಮೋದನೆಗೊಂಡ ಅಂದಾಜುಪಟ್ಟಿಯ ವಿನ್ಯಾಸದಲ್ಲಿ ಬದಲಾವಣೆ ಮಾಡಿ ರೂ. 75.50 ಕೋಟಿಗೆ ಪರಿಷ್ಕೃತ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ ಎಂದು ಮಹಾನಗರಪಾಲಿಕೆ ಪ್ರಭಾರ ಆಯುಕ್ತ ಗೋಕುಲದಾಸ್ ನಾಯಕ್ ಅವರು ಸಭೆಗೆ ಮಾಹಿತಿ ನೀಡಿದರು.
ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಯ ಹಳೆಯ ಮುನಿಸಿಪಲ್ ಪ್ರದೇಶದಲ್ಲಿ ಹಾಕಲಾಗಿರುವ ಭೂಗತ ಒಳಚರಂಡಿ ಜಾಲದ ಕೊಳವೆ ಮಾರ್ಗ ಮತ್ತು ಆಳಗುಂಡಿ ನಗರದ ಈಗಿನ ಜನಸಾಂದ್ರತೆಗೆ ಸ್ಪಂದಿಸದ ಕಾರಣ ಅಲ್ಲಲ್ಲಿ ಒಳಚರಂಡಿ ಸೋರುವಿಕೆ ಮತ್ತು ಹರಿಯುವಿಕೆ ನಗರದ ಬೃಹತ್ ಮಳೆ ನೀರು ಹರಿಯುವ ಚರಂಡಿಯಲ್ಲಿ ಹರಿಯುತ್ತಿರುವುದು ಸಾಮಾನ್ಯವಾಗಿದೆ, ಅದ್ದರಿಂದ ಹಳೆ ಮುನಿಸಿಪಲ್ ಪ್ರದೇಶದಲ್ಲಿ ಹಾಕಲಾಗಿರುವ ಒಳಚರಂಡಿ ಜಾಲದ ನವೀಕರಣ ಅನಿವಾರ್ಯವಾಗಿರುತ್ತದೆ. ಈ ಕಾರಣಗಳಿಂದ ನಗರದ ಹಳೆ ಮುನಿಸಿಪಲ್ ಪ್ರದೇಶದ ಒಳಚರಂಡಿ ಜಾಲದ ಸಮಗ್ರ ನವೀಕರಣಕ್ಕಾಗಿ ಎ.ಡಿ.ಬಿ. ಯೋಜನೆಯ 2 ನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾವನೆಯು ಸರಕಾರದ ಮುಂದಿದೆ. ಈ ಕುರಿತು ಈಗಾಗಲೇ ಸರ್ವೆ ಮತ್ತು ಅಧ್ಯಯನಕ್ಕಾಗಿ ಸರಕಾರವು ಮೆ||.ಜಿ.ಕೆ.ಡಬ್ಲೂ ಕನ್ಸಲ್ಟೆಂಟ್ಸ್ ಕೊಲ್ಕತ್ತಾ ಇವರರಿಗೆ ವಹಿಸಲಾಗಿದೆ. ಕುಡ್ಸೆಂಪ್ ರೂ.218 ಕೋಟಿ ಯೋಜನೆಯಲ್ಲಿ ಬಿಟ್ಟು ಹೋದ ವಾರ್ಡ್ಗಳ ಒಳಚರಂಡಿ ಜಾಲ ವಿಸ್ತರಣೆ ಅಂದಾಜು ಸುಮಾರು 100 ಕಿ.ಮೀ.ಗಳಷ್ಟು ಈ ಸರ್ವೇಯಲ್ಲಿ ಸೇರಿದೆ ಎಂದರು.
ಮುಖ್ಯಮಂತ್ರಿಗಳ 100ಕೋಟಿ ರೂ.ಗಳ ಅನುದಾನದಲ್ಲಿ 2ನೇ ಹಂತದಲ್ಲಿ 110 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 82 ಕಾಮಗಾರಿಗಳು ಪೂರ್ಣಗೊಂಡಿವೆ, ರೂ.1857ಲಕ್ಷಗಳ 9 ಕಾಮಗಾರಿಗಳು ಪ್ರಗತಿಯಲ್ಲಿವೆ ರೂ.4,425 ಲಕ್ಷಗಳ 15ಕಾಮಗಾರಿಗಳು ಟೆಂಡರ್ ಪ್ರಕ್ರ್ರಿಯೆಯಲ್ಲಿವೆ. ಇದೇ ಯೋಜನೆಯ 3ನೇಹಂತದಲ್ಲಿ ಒಟ್ಟು168 ಕಾಮಗಾರಿಗಳನ್ನು ರೂ.100 ಕೋಟಿಗಳಲ್ಲಿ ಕೈಗೊಂಡಿದ್ದು, ರೂ 2,260.10ಲಕ್ಷಗಳ 44 ಕಾಮಗಾರಿಗಳು ಪ್ರಗತಿಯಲ್ಲಿವೆ. 56 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ, 11 ಕಾಮಗಾರಿಗಳ ಅಂದಾಜು ವೆಚ್ಚ ರೂ.1,785.೦೦ ಆಗಿದ್ದು ಈ ಕಾಮಗಾರಿಗಳಿಗೆ ಇನ್ನೂ ಟೆಂಡರ್ಗಳನ್ನು ಆಹ್ವಾನಿಸಬೇಕಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ , ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ನಟರಾಜ್ ಮಹಾನಗರಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.
