ಮಂಗಳೂರು,ಜುಲೈ.11 : `ಶ್ರವಣ ದೋಷ ಮುಕ್ತ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ಶ್ರವಣ ದೋಷ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಶನಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಶ್ರವಣ ದೋಷ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾದ ಈ ಯೋಜನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇತ್ತೀಚೆಗೆ ನಾಟೇಕಲ್ಲಿನಲ್ಲಿ ಶ್ರವಣ ದೋಷ ತಪಾಸಣಾ ಶಿಬಿರವನ್ನು ಏರ್ಪಡಿಸಿ 10 ಮಂದಿ ಮಕ್ಕಳಿಗೆ ಶ್ರವಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಲಾಗಿದೆ ಎಂದು ಹೇಳಿದರು.
ಈ ಶಿಬಿರದಲ್ಲಿ ಜಿಲ್ಲೆಯ ಒಟ್ಟು 120 ಮಂದಿ ಮಕ್ಕಳಲ್ಲಿ ಶ್ರವಣ ದೋಷ ಕಂಡು ಬಂದಿತ್ತು. ಈ ಪೈಕಿ 35 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಅಗತ್ಯವಿದ್ದು, ಇದರಲ್ಲಿ 12 ಮಕ್ಕಳು 5 ವರ್ಷ ಪ್ರಾಯಕ್ಕಿಂತ ಕೆಳಗಿನವರಾಗಿದ್ದಾರೆ. ಈ 12 ರಲ್ಲಿ 10 ಮಂದಿ ಮಕ್ಕಳಿಗೆ ಶ್ರವಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ದಕ್ಷಿಣ ಜಿಲ್ಲೆಯ ತಾಲೂಕು ಮತ್ತು ಜಿಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟುವ ಮಗುವಿಗೆ ಶ್ರವಣ ದೋಷವಿದೆಯೇ ಎಂದು ಪರೀಕ್ಷಿಸಲಾಗುವುದು ಮತ್ತು ಈ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು. ಈ ಸಂದರ್ಭದಲ್ಲಿ ಶ್ರವಣ ದೋಷ ಪತ್ತೆಯಾದ ಮಗುವಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವುದು ಎಂದು ಖಾದರ್ ಹೇಳಿದರು.
ಇದೇ ಸಂದರ್ಭದಲ್ಲಿ ಶ್ರವಣ ದೋಷ ಮುಕ್ತ ಯೋಜನೆಯಡಿ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಹಂಝ್ ಮತ್ತು ಡಾ.ವಸಂತಿ ಅವರನ್ನು ಸಚಿವರು ಸನ್ಮಾನಿಸಿದರು.
ಶಸ್ತ್ರಚಿಕಿತ್ಸೆಯನ್ನು ಹೊಸದಿಲ್ಲಿಯ ತಜ್ಞ ವೈದ್ಯರಾದ ಡಾ.ಹಂಝ್ ಮತ್ತು ಬೆಂಗಳೂರಿನ ಡಾ.ವಸಂತಿ ಮತ್ತವರ ತಂಡದವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಲಯನ್ಸ್ ಕ್ಲಬ್ ಕೂಡಾ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕೈಜೋಡಿಸಿದೆ. ಲಯನ್ಸ್ ಕ್ಲಬ್ಬಿನ ಕವಿತಾ ಶಾಸ್ತ್ರಿ, ದೇವದಾಸ್ ಭಂಡಾರಿ ಮೊದಲಾದವರು ಸಹಕಾರ ನೀಡಿದ್ದಾರೆ ಎಂದು ಖಾದರ್ ಹೇಳಿದರು.






