ಮಂಗಳೂರು, ಜು. 11 : ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮ ಪಂಚಾಯತ್‌ಗಳು ಸ್ವಚ್ಛತಾ ಗ್ರಾಮವಾಗಿ ಕೇಂದ್ರದಿಂದ ವಿಶೇಷ ಪುರಸ್ಕಾರಕ್ಕೆ ಒಳಗಾಗಿದ್ದರೂ, ಗ್ರಾಪಂಗಳ ಕೆಲವೊಂದು ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ಹಾಕಲಾಗುತ್ತಿರುವ ಬಗ್ಗೆ ಜಿಪಂನ ಸದಸ್ಯರಿಂದ ಇಂದು ನಡೆದ ವಿಶೇಷ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಅಕ್ಟೋಬರ್ 2ರೊಳಗೆ ದ.ಕ. ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಇಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸದಸ್ಯರಿಂದ ರಸ್ತೆಗಳಲ್ಲಿನ ಕಸದ ರಾಶಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಸಭೆಯಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಪಂನಿಂದ ತಯಾರಿಸಲಾದ ಕಾರ್ಯಕ್ರಮದ ಬಗ್ಗೆ ವೀಡಿಯೊ ಮೂಲಕ ಮಾಹಿತಿ ಒದಗಿಸುವಂತೆ ಜಿಪಂ ಸಿಇಒ ಶ್ರೀವಿದ್ಯಾ ಅವರು ಸ್ವಚ್ಛ ಭಾರತ್ ಮಿಶನ್ ಅಧಿಕಾರಿ ಮಂಜುಳಾ ಅವರಿಗೆ ಸೂಚಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸದಸ್ಯ ಸಂತೋಷ್ ಕುಮಾರ್, ಕುರ್ನಾಡು ಗ್ರಾಪಂ ಮಾದರಿ ಸ್ವಚ್ಛ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿ ಅಲ್ಲಿನ ಸಾರ್ವಜನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಹಾಗಿದ್ದರೂ ಮಂಜನಾಡಿ, ದೇರಳಕಟ್ಟೆ, ನೇತ್ರಾವತಿ ಸೇತುವೆ ಮೊದಲಾದ ಕಡೆಗಳಲ್ಲಿ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿಯೂ ಕಸದ ರಾಶಿಗಳನ್ನು ಹಾಕಿ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಸದಸ್ಯರಾದ ಮೆಲ್ವಿನ್ ಡಿಸೋಜ, ಸರಸ್ವತಿ ಕಾಮತ್, ಚೆನ್ನಪ್ಪ ಕೋಟ್ಯಾನ್, ಧನಲಕ್ಷ್ಮೀ ಮೊದಲಾದವರು ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಮಮತಾ ಗಟ್ಟಿ, ಪ್ರತಿ ಪ್ರೌಢಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್ ವಿತರಿಸಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಕೇವಲ ಕೈಯಲ್ಲಿ ಪೊರಕೆ ಹಿಡಿದರೆ ಸ್ವಚ್ಛತೆ ಆಗುವುದಿಲ್ಲ. ಗ್ರಾಮ ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ಆಗಬೇಕು. ಕಸ ಹಾಕುವಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಎಲ್ಲ ಮಾಂಸದಂಗಡಿಗಳು ಹಾಗೂ ಹೋಟೆಲ್‌ಗಳಿಗೆ ಕಸವನ್ನು ಸೂಕ್ತವಾಗಿ ವಿಲೇ ಮಾಡುವ ಕುರಿತು ನೋಟಿಸು ನೀಡಬೇಕು ಎಂದು ಆಗ್ರಹಿಸಿದರು.
ಕಸ ವಿಲೇವಾರಿಗೆ ಅಡಚಣೆ: ಗ್ರಾಪಂಗಳಲ್ಲಿ ಮನೆಗಳಿಂದ ಸಂಗ್ರಹಿಸಲಾಗುವ ಕಸವನ್ನು ಒಣ ಹಾಗೂ ಹಸಿ ಕಸವನ್ನಾಗಿ ಬೇರ್ಪಡಿಸಲಾಗದ ಕಾರಣ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ತೊಂದರೆಯಾಗುತ್ತಿರುವುದಾಗಿ ಸ್ವಚ್ಛ ಅಭಿಯಾನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸ್ವಚ್ಛ ಭಾರತ್ ಮಿಶನ್ ಅಧಿಕಾರಿ ಮಂಜುಳಾ ಹೇಳಿದರು.
ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಸ್ಥಳೀಯ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಸಭೆ ನಡೆಸಲಾಗುವುದು. ಪ್ರತಿ ಗ್ರಾಮದಲ್ಲಿ ಯಾವ ರೀತಿ ಸ್ವಚ್ಛತೆ ಕಾಯ್ದುಕೊಳ್ಳಬಹುದು ಎಂಬುದರ ಅರಿವು ಮೂಡಿಸಲಾಗುವುದು. ಕೋಳಿ ಫಾರಂ, ಹೋಟೆಲ್‌ಗಳು ಸೇರಿದಂತೆ ಇತರ ಅಂಗಡಿ ಮಾಲಕರು ತಮ್ಮಲ್ಲಿನ ತ್ಯಾಜ್ಯವನ್ನು ತಾವೇ ಹೇಗೆ ವಿಲೇವಾರಿ ಮಾಡಬಹುದು ಎಂಬುದರ ಬಗ್ಗೆ ತಿಳಿ ಹೇಳಲಾಗುವುದು. ಹೀಗೆ ನಿರಂತರ ಆರು ತಿಂಗಳ ಕಾಲ ಅಭಿಯಾನದ ರೀತಿಯಲ್ಲಿ ಜಾಗೃತಿ ಕಾರ್ಯ ನಡೆಯಲಿದೆ. ಆ ಬಳಿಕವೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ದಂಡ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಕಲಾ, ಬಾಲಕೃಷ್ಣ ಸುವರ್ಣ, ಮೀನಾಕ್ಷಿ ಮಂಜುನಾಥ್ ಉಪಸ್ಥಿತರಿದ್ದರು.

