ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತ : ಸಿವಿಲ್ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್‌ನಿಂದ ಪ್ರತಿಭಟನೆ

Pinterest LinkedIn Tumblr

Sand_against_protest_1

ಮಂಗಳೂರು,ಜುಲೈ.10: ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಿಂದ ಜೂ.15ರಿಂದ ಆ.31ವರೆಗೆ ಮರಳು ತೆಗೆಯಬಾರದು ಎಂಬ ಕಾನೂನು ಜಾರಿಯಾಗಿರುವುದರಿಂದ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡು ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ. ಹಾಗಾಗಿ ಜು.15ರ ಬಳಿಕ ಮರಳುಗಾರಿಕೆಯನ್ನು ಪುನಃ ಪ್ರಾರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಂಗಳೂರಿನ ಸಿವಿಲ್ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್ ವತಿಯಿಂದ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಅಸೋಸಿಯೇಶನ್ ಅಧ್ಯಕ್ಷ ಎಂ.ಪುರುಷೋತ್ತಮ ಕೊಟ್ಟಾರಿ ಮಾತನಾಡಿ, ನೇತ್ರಾವತಿ ಹಾಗೂ ಗುರುಪುರ ನದಿಯಲ್ಲಿ ಉತ್ತಮ ಗುಣಮಟ್ಟದ ಮರಳು ಸಿಗುತ್ತಿತ್ತು. ಆದರೆ ಸರಕಾರದ ನೂತನ ನೀತಿಯಿಂದಾಗಿ ಮರಳು ದೊರೆಯುತ್ತಿಲ್ಲ. ಇತರ ಜಿಲ್ಲೆಗಳಿಗೆ ಬೇಕಾಬಿಟ್ಟಿ ಮರಳು ಪೂರೈಕೆಯಾಗುತ್ತಿದೆ. ಇದರಿಂದ ಜಿಲ್ಲೆಯ ಕಾರ್ಮಿಕರು ಕಳೆದ 20 ದಿನಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಮರಳುಗಾರಿಕೆ ಪ್ರಾರಂಭಿಸಲು ಹಾಗೂ ಜನಸಾಮನ್ಯರಿಗೂ ಮರಳು ಮುಕ್ತವಾಗಿ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Sand_against_protest_2 Sand_against_protest_3 Sand_against_protest_4 Sand_against_protest_5

ಸಿವಿಲ್ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್ ಸದಸ್ಯ ವಿಜಯ ವಿಷ್ಣು ಮಯ್ಯ ಮಾತನಾಡಿ, ಗುತ್ತಿಗೆದಾರರು, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಯನ್ನು ಜನಪ್ರತಿನಿಧಿಗಳು ಅರ್ಥೈಸಿಕೊಳ್ಳುತ್ತಿಲ್ಲ. ಮರಳು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಬ್ಯಾಂಕ್‌ನಿಂದ ಸಾಲ ಪಡೆದು ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಿದ ಸಿವಿಲ್ ಗುತ್ತಿಗೆದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಾರ್ಮಿಕರ ಬದುಕೂ ಶೋಚನೀಯವಾಗಿದೆ. ಹೊಸ ಕಾನೂನಿನ ಮೂಲಕ ಗುತ್ತಿಗೆದಾರರ ತಾಳ್ಮೆ ಪರೀಕ್ಷಿಸುವುದನ್ನು ಮುಂದುವರಿಸಿದರೆ ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಬೇಕಾಗಬಹುದು ಎಂದು ಎಚ್ಚರಿಸಿದರು.

ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಅಸೋಸಿಯೇಶನ್ ಉಪಾಧ್ಯಕ್ಷರಾದ ದಿನಕರ್ ಸುವರ್ಣ, ಮಹಾಬಲ ಕೊಟ್ಟಾರಿ, ಸೋಮಶೇಖರ ಕದ್ರಿ ಸಹಿತ ಸಿವಿಲ್ ಕಾಂಟ್ರಾಕ್ಟರ್‌ಗಳು, ಕಾರ್ಮಿಕರು ಭಾಗವಹಿಸಿದ್ದರು. ಪ್ರತಿಭಟನೆಗೆ ಮುನ್ನ ನಗರದ ನೆಹರು ಮೈದಾನ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ರ‌್ಯಾಲಿ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Write A Comment