ಕನ್ನಡ ವಾರ್ತೆಗಳು

ಮಂಗಳೂರು ವಿ ವಿ ಕಾಲೇಜ್‌ ಸೇರಿದಂತೆ 19 ಕಾಲೇಜುಗಳಿಗೆ 100 ವರ್ಷಗಳ ಪಾರಂಪರಿಕ ಸ್ಥಾನ ಮಾನ .

Pinterest LinkedIn Tumblr

manglo_unvrcity_photo

ಮಂಗಳೂರು,ಜುಲೈ.06 : ನೂರು ವರ್ಷಗಳ ಹಳೆಯದ್ದಾದ ಕಾಲೇಜು ಕ್ಯಾಂಪಸ್ ಗಳ ಸಂರಕ್ಷಣೆಯ ಉದ್ದೇಶದೊಂದಿಗೆ ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (ಯು ಜಿಸಿ)ಯು ಮಂಗಳೂರಿನ “ಮಂಗಳೂರು ಯೂನಿವರ್ಸಿಟಿ ಕಾಲೇಜ್‌’ ಸೇರಿ ದಂತೆ ದೇಶದ ವಿವಿಧ ರಾಜ್ಯಗಳಲ್ಲಿನ 19 ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನವನ್ನು ಘೋಷಿಸಿದೆ.

ಪಾರಂಪರಿಕ ಸ್ಥಾನಮಾನ ನೀಡುವ ಸಂಬಂಧ ದೇಶದೆಲ್ಲೆಡೆಯಿಂದ 60 ಕಾಲೇಜುಗಳಿಂದ ಪ್ರಸ್ತಾವನೆಗಳು ಬಂದಿದ್ದವು. ಅವುಗಳ ಪೈಕಿ 19 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ

ಮಂಗಳೂರಿನ ವಿವಿ, ಮುಂಬೈಯ ಸೈಂಟ್ ಝೇವಿಯರ್ಸ್, ಕೊಟ್ಟಾಯಂನ ಸಿಎಂಎಸ್, ತಿರುಚಿಯ ಸೈಂಟ್ ಜೋಸೆಫ್, ಅಮೃತಸರದ ಖಾಲ್ಸಾ, ಶಿಮ್ಲಾದ ಸೈಂಟ್ ಬೆಡೆ, ಕಾನಪುರದ ಕ್ರೈಸ್ಟ್ ಚರ್ಚ್, ಅಗ್ರಾದ ಓಲ್ಡ್ ಆಗ್ರಾ, ಮುಕಪ್ಫರಪುರದ ಲಂಗತ್ ಸಿಂಗ್, ತಲಶ್ಛೇರಿಯ ಸರಕಾರಿ ಬ್ರೆನ್ನನ್, ಗುವಾಹಟಿಯ ಕಾಟನ್, ಪ.ಬಂಗಾಲದ ಮಿಡ್ನಾಪೂರ್, ಜಬಲ್ಲುರದ ಸರಕಾರಿ ವೈದಕೀಯ ವಿಜ್ಞಾನ ಸಂಸ್ಥೆ, ಪುಣೆಯ ಫರ್ಗ್ಯೂಸನ್, ನಾಗಪುರದ ಹಿಸ್ಲಾಪ್, ಜಮ್ಮುವಿನ ಸರಕಾರಿ ಗಾಂಧಿ ಸ್ಮಾರಕ ವಿಜ್ಞಾನ, ಜಲಂಧರ್ ನ ಕನ್ಯಾ ಮಹಾವಿದ್ಯಾಲಯ, ಕೋಲ್ಕತಾದ ಸೈಂಟ್ ಝೇವಿಯರ್ಸ್ ಮತ್ತು ಮೀರತ್ ನ ಮೀರತ್ ಕಾಲೇಜುಗಳು ಪಾರಂಪರಿಕ ಸ್ಥಾನಮಾನ ಪಡೆದುಕೊಂಡಿದೆ.

ಕರ್ನಾಟಕಕ್ಕೂ ಸ್ಥಾನ: ಈ ಬಾರಿ ಪಾರಂಪರಿಕ ಸ್ಥಾನಮಾನ ಪಡೆದ ಕಾಲೇಜುಗಳ ಪೈಕಿ 1868ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಪ್ರಸಿದ್ಧ ಮಂಗಳೂರು ಯೂನಿವರ್ಸಿಟಿ ಕಾಲೇಜು ಕೂಡಾ ಸೇರಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಬೇಕೆಂದು ಹಲವು ಮಹನೀಯರ ಕನಸಿನ ಫ‌ಲವಾಗಿ ಆರಂಭ ವಾಗಿದ್ದ ಈ ಕಾಲೇಜಿನಲ್ಲಿ ಪಂಜೆ ಮಂಗೇಶ ರಾಯರು, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ವಿದ್ಯಾಭ್ಯಾಸ ಮಾಡಿದ್ದಾರೆ.

ಪಾರಂಪರಿಕ ಸ್ಥಾನದಿಂದ ಏನು ಲಾಭ : ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ 2013ರಲ್ಲಿ ಆರಂಭಿಸಿದೆ. ಯೋಜನೆಯಲ್ಲಿ ಆಯ್ಕೆಯಾದ ಕಾಲೇಜುಗಳ ಪುನರುತ್ಥಾನ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ವಾರ್ಷಿಕ 8-10 ಕೋಟಿ ರೂ. ಯುಜಿಸಿಯಿಂದ ಒದಗಿಸಲಾಗುತ್ತದೆ. ಜತೆಗೆ ಕಾಲೇಜುಗಳಿಗೆ ವಿವಿಧ ರೀತಿಯ ಹಣಕಾಸಿನ ನೆರವು ಲಭಿಸಲಿದೆ. ಈ ಹಣವನ್ನು ಕಾಲೇಜ್‌ ಕಾಂಪಸ್‌ನ ಸಂರಕ್ಷಣೆ ಮತ್ತು ಪರಂಪರೆಗೆ ಸಂಬಂಧಿಸಿದ ವಿವಿಧ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಬಳಸಿಕೊಳ್ಳಬಹುದಾಗಿದೆ.

100 ವರ್ಷ ಇತಿಹಾಸ ಹೊಂದಿದ, ಯುಜಿಸಿಯಿಂದ ಅತ್ಯುನ್ನತ ಗುಣಮಟ್ಟದ ಅಂಕ ಪಡೆದ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ತನಿಖೆಗೆ ಒಳಪಡದ, ಆಯಾ ಭಾಗದ ಸಂಸ್ಕೃತಿ, ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿಯುವ ವಿವಿಗಳು ಮತ್ತು ಕಾಲೇಜುಗಳು ಈ ಸ್ಥಾನಮಾನಕ್ಕೆ ಅರ್ಹತೆ ಪಡೆಯುತ್ತವೆ.

Write A Comment