ಕನ್ನಡ ವಾರ್ತೆಗಳು

ಎಂಡೋಸಲ್ಫಾನ್‌ ವಿರುದ್ಧ ಹೋರಾಡಿ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡ ಶೃತಿ.

Pinterest LinkedIn Tumblr

Shruthi_endo_ptetin

ಮಂಗಳೂರು/ಕಾಸರಗೋಡು,ಜುಲೈ.03: ಕಾಸರಗೋಡು ಜಿಲ್ಲೆಯ ತೋಟಗಾರಿಕಾ ನಿಗಮವು ಗೇರು ತೋಟಕ್ಕೆ ಸಿಂಪಡಿಸಿದ ಮಾರಕ ಕೀಟನಾಶಕ ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಹುಟ್ಟಿನಿಂದಲೇ ಯಾತನೆ ಅನುಭವಿಸುತ್ತಿರುವ ಟಿ. ಶ್ರುತಿ ತನ್ನ ಇಚ್ಛಾಶಕ್ತಿಯಿಂದಲೇ ಎಂಡೋಸಲ್ಫಾನ್‌ ವಿರುದ್ಧ ಹೋರಾಡಿ ತನ್ನ ಕನಸಾಗಿದ್ದ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾಳೆ.

ಎಂಡೋ ಎಂಬ ಕರಾಳ ಜೀವನದಿಂದ ಕೈಹಿಡಿದು ಮೇಲಕ್ಕೆತ್ತಿದ ಡಾ. ವೈ.ಎಸ್‌. ಮೋಹನ್‌ ಕುಮಾರ್‌ ಮತ್ತು ಪುನರ್ನವ ಟ್ರಸ್ಟ್‌ ಮೊದಲಾದ ಸಂಸ್ಥೆಗಳ ನಿರಂತರ ನೆರವಿನಿಂದ ವೈದ್ಯಕೀಯ ಕಲಿಕೆಯ ಕನಸು ನನಸಾಗುತ್ತಿದೆ. ಕರ್ನಾಟಕ ಸರಕಾರದ ಮೆಡಿಕಲ್‌ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರು ಸರಕಾರಿ ಹೋಮಿಯೋ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

ಶ್ರುತಿಗೆ ಮೂರು ವರ್ಷ ತುಂಬಿದಾಗ ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಕ್ಯಾನ್ಸರ್‌ ಬಾಧಿಸಿ ತಾಯಿ ಮೀನಾಕ್ಷಿ ಕೊನೆ ಉಸಿರೆಳೆದಿದ್ದರು. ವಾಣೀನಗರದ ಗುಡಿಸಲೊಂದರಲ್ಲಿ ವಾಸವಾಗಿದ್ದ ಕೂಲಿಯಾಳು ತಂದೆ ತಾರಾನಾಥ ರಾವ್‌, ಚಿಕ್ಕಮ್ಮ ರೇವತಿ ಶ್ರುತಿಗೆ ಚಿಕಿತ್ಸೆಗೆ ದಾರಿ ಕಾಣದೆ ಹಲವು ಸಮಸ್ಯೆಗಳಿಗೆ ತುತ್ತಾಗಿದ್ದರು.

ಶೃತಿ ಬದುಕಲ್ಲಿ ಬೆಳಕು ತೋರಿದ ವೈದ್ಯ:
ಇದೇ ಸಂದರ್ಭದಲ್ಲಿ ಎಂಡೋ ಮಾರಕ ವಿಷ ಎಂಬುದನ್ನು ವಿಶ್ವದ ಮುಂದೆ ತೆರೆದಿಟ್ಟ ಡಾ. ವೈ.ಎಸ್‌. ಮೋಹನ್‌ ಕುಮಾರ್‌ ಅವರು ಶ್ರುತಿಯ ಪಾಲಿಗೆ ಸಾಕ್ಷಾತ್‌ ದೇವರಂತೆ ಬಂದು ಆ ಮನೆಯಲ್ಲಿ ಬೆಳಕನ್ನು ಹರಿಸಿದರು. ತನ್ನ ಸ್ವಂತ ಮಗಳೆಂದೇ ಉಪಚರಿಸಿದ ಡಾ. ಮೋಹನ್‌ ಕುಮಾರ್‌ ವಾತ್ಸಲ್ಯವನ್ನು ತೋರಿದರು. ನಾಲ್ಕು ಬೆರಳಿನ ಎಡಗೈಯಲ್ಲಿ ಪೆನ್‌ ಹಿಡಿಸಿ ಕನ್ನಡದಲ್ಲಿ ಅಕ್ಷರಭ್ಯಾಸ ಮಾಡಿಸಿದರು. ಎಂಡೋಸಲ್ಫಾನ್‌ ಭೀಕರತೆಯ ನಡುವೆಯೂ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಶ್ರುತಿಯ ಬುದ್ಧಿಶಕ್ತಿಯನ್ನು ಗಮನಿಸಿದ ಡಾ. ಮೋಹನ್‌ ಕುಮಾರ್‌ ಆಕೆಯನ್ನು ಶಾಲೆಗೆ ಸೇರಿಸಲು ಒತ್ತಡ ಹಾಕಿದರು. ಸ್ವಾಧೀನವಿಲ್ಲದ ಬಲಗಾಲಿಗೆ ಮೊಣಗಂಟಿನ ಕೆಳಗೆ ಕೃತಕ ಕಾಲನ್ನು ಜೋಡಿಸಿ ಅಂಗವೈಕಲ್ಯ ಶಾಪವಲ್ಲ. ಅಪರಾಧವೂ ಅಲ್ಲ ಎಂದು ಜಗತ್ತಿಗೇ ಸಾರಿದ ಶ್ರುತಿ ಇಂದು ಡಾಕ್ಟರ್‌ ಪದವಿಗೆ ಪ್ರವೇಶ ಪಡದಿದ್ದಾಳೆ. ಈ ಮೂಲಕ ನೂತನ ದಾಖಲೆಯ ಒಡತಿಯಾಗಿದ್ದಾಳೆ.

ಕೃತಕ ಕಾಲಿನಲ್ಲೇ 8 ಕಿ.ಮೀ. ನಡೆದು ಶಾಲೆಗೆ: 
ಎಂಟು ವರ್ಷ ತುಂಬಿದಾಗ ಪಡ್ರೆ ಶಾಲೆಯಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಂಡಳು. ಕೃತಕ ಕಾಲಿನಲ್ಲೇ 8 ಕಿ.ಮೀ. ಮಲೆನಾಡಿನಲ್ಲಿ ಹತ್ತಿ ಇಳಿದು ನಡೆದಾಡಿ ಶಾಲೆಗೆ ಹೋಗಲಾರಂಭಿಸಿದಳು. ಕೆಲಸವಿಲ್ಲದ ದಿನಗಳಲ್ಲಿ ತಂದೆ ಶ್ರುತಿ ಜತೆಗೆ ಶಾಲೆಗೆ ಹೋಗುತ್ತಿದ್ದರು. ಯಾವುದೇ ಕಷ್ಟ ಅನುಭವಿಸಿದರೂ ಕಲಿತೇ ತೀರುತ್ತೇನೆ ಎಂಬ ಇಚ್ಛಾಶಕ್ತಿ ಶ್ರುತಿಯಲ್ಲಿ ಕಂಡುಬಂತು. ತಾನು ಡಾ. ಮೋಹನ್‌ ಕುಮಾರ್‌ ಅವರಂತೆ ವೈದ್ಯೆ ಆಗಿ ಬಡಜನರ ಸೇವೆ ಮಾಡಬೇಕೆಂಬ ಆಕಾಂಕ್ಷೆ ಆಕೆಯಲ್ಲಿ ಚಿಕ್ಕಂದಿನಿಂದಲೇ ಮೊಳಕೆಯೊಡದಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ವಿಷಯಗಳಲ್ಲಿ ಎ ಪ್ಲಸ್‌ನೊಂದಿಗೆ ತೇರ್ಗಡೆಯಾದ ಶ್ರುತಿ ಇದೇ ಸಂದರ್ಭದಲ್ಲಿ ಹಲವು ಸಂಘ-ಸಂಸ್ಥೆಗಳು ಆಕೆಗೆ ನೆರವನ್ನು ನೀಡಿದ್ದವು. ಈ ಬಗ್ಗೆ ಈಗಲೂ ನೆನಪಿಸುತ್ತಿದ್ದಾರೆ ಶ್ರುತಿ.

ಮುಳ್ಳೇರಿಯ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಟು ತೇರ್ಗಡೆಯಾದ ಶ್ರುತಿಗೆ ಪ್ರವೇಶ ಪರೀಕ್ಷೆಗೆ ಎಂಡೋಸಲ್ಫಾನ್‌ ವಿಕ್ಟಿಂಸ್‌ ನ್ಪೋರ್ಟ್ಸ್ ಏಯ್ಡ ಗ್ರೂಪ್‌(ಎನ್‌ವಿಸಾಜ್‌) ನೆರವು ನೀಡಿತ್ತು. ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದ ಶ್ರುತಿ ಕರ್ನಾಟಕದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇದೀಗ ಕಾಲೇಜಿನಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾಳೆ. ಬಸ್‌ ನೌಕರನಾಗಿರುವ ಪತಿ ಜಗದೀಶ್‌ ಅವರೊಂದಿಗೆ ಮುಳ್ಳೇರಿಯದ ಕುಂಟಾರಿನಲ್ಲಿ ವಾಸ್ತವ್ಯ ಹೂಡಿರುವ ಶ್ರುತಿ ಕಾಲೇಜಿಗೆ ಸೇರಲು ಮುಂದಿನ ವಾರ ಬೆಂಗಳೂರಿಗೆ ತೆರಳಲಿದ್ದಾಳೆ.

Write A Comment