ಕನ್ನಡ ವಾರ್ತೆಗಳು

ಲೇಡಿ ಘೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು – ಅಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ, ಆರೋಪ

Pinterest LinkedIn Tumblr

ladygoshan_baby_Dide_1

ಮಂಗಳೂರು : ನಗರದ ಲೇಡಿ ಘೋಷನ್ ಆಸ್ಪತ್ರೆಯಲ್ಲಿ ಇಂದು ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಅಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮಗುವಿನ ಕುಟುಂಬ ಸದಸ್ಯರು ಹಾಗೂ ಸ್ಥಳಿಯರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬಾನುವಾರ ನಡೆದಿದೆ.

ಕುಂಜತ್‍ಬೈಲ್‌ನ ಅಮನ್ ಎಂಬವರ ಪತ್ನಿ ಪ್ರಭಾವತಿ ಎಂಬವರು ಹೆರಿಗೆಗಾಗಿ ಜೂನ್ 25ರಂದು ಲೇಡಿಘೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದಿನಿಂದ ಇಂದು ಮಧ್ಯಾಹ್ನ ಎರಡು ಗಂಟೆಯವರೆಗೆ ಮಗು ಅರೋಗ್ಯವಾಗಿತ್ತು. ಆದರೆ ಇಂದು ಮಧ್ಯಾಹ್ನ . 2.30ಕ್ಕೆ ಇದ್ದಕ್ಕಿದ್ದ ಹಾಗೆ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ಉಸಿರಾಡಲು ಕಷ್ಟ ಪಡುತ್ತಿರುವದನ್ನು ಗಮನಿಸಿದ ಅಸ್ಪತ್ರೆಯ ವೈದ್ಯರು ತಕ್ಷಣ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆಗೊಳಿಸಿದರಾದರೂ ಸ್ವಲ್ಪ ಹೊತ್ತಿನ ಬಳಿಕ ಮಗು ಮೃತ ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ladygoshan_baby_Dide_2 ladygoshan_baby_Dide_3 ladygoshan_baby_Dide_4 ladygoshan_baby_Dide_5 ladygoshan_baby_Dide_6 ladygoshan_baby_Dide_7 ladygoshan_baby_Dide_8

ಮಗುವಿಗೆ ಎದೆ ಹಾಲು ನೀಡುವ ಸಂದರ್ಭ ಉಸಿರಾಟದ ಸಂದರ್ಭ ಈ ರೀತಿ ಆಗಿರ ಬಹುದು ಎಂದು ಡಾ. ರಾಜೇಶ್ ಅವರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಗುವಿನ ಸಂಬಧಿಕರು ಹಾಗೂ ಸ್ಥಳಿಯರು ವೈದ್ಯರ ನಿರ್ಲಕ್ಷದಿಂದ ಮಗು ಮೃತ ಪಟ್ಟಿದೆ ಎಂದು ಆರೋಪಿಸಿ ಅಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ಆರೋಗ್ಯ ಸಚಿವ ಯು. ಟಿ. ಖಾದರ್ ಸ್ಥಳಕ್ಕೆ ಆಗಮಿಸಿ, ಈ ಬಗ್ಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.

ಪ್ರಕರಣದ ಸಂಪೂರ್ಣ ವಿವರ :(Updated)

ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ಇಂದು ನವಜಾತ ಶಿಶುವೊಂದು ಸಾವಿಗೀಡಾದ ಹಿನ್ನೆಲೆಯಲ್ಲಿ ಮಗುವಿನ ಹೆತ್ತವರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್‌ನ ಪ್ರಭಾವತಿ ಹಾಗೂ ಅಮ್ಮನ್ ದಂಪತಿಯ ಮಗು ಜೂನ್ 25ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನಿಸಿತ್ತು. 2.5 ಕೆ.ಜಿ. ತೂಕವಿದ್ದ ಮಗುವನ್ನು ಸುರಕ್ಷತೆಯ ದೃಷ್ಟಿಯಿಂದ ನವಜಾತ ಶಿಶುಗಳ ಸಂರಕ್ಷಣಾ ಕೇಂದ್ರದಲ್ಲಿ ಇಡಲಾಗಿತ್ತು. ಮಗು ರವಿವಾರ ಮಧ್ಯಾಹ್ನದ ವೇಳೆಗೆ ಅಸುನೀಗಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ವೈದ್ಯರ ಸ್ಪಷ್ಟನೆ:  ಮಗು ಮಧ್ಯಾಹ್ನ 2 ಗಂಟೆಯ ತನಕ ಆರೋಗ್ಯವಾಗಿತ್ತು. ಹಾಲು ಶ್ವಾಸಕೋಶಕ್ಕೆ ಹೋಗಿ ಉಸಿರಾಟಕ್ಕೆ ಸಾಧ್ಯವಾಗದೆ ಮೃತಪಟ್ಟಿದೆ. ಲಂಗ್ಸ್‌ಗೆ ಪೈಪ್ ಹಾಕಿದಾಗ ಅದರಲ್ಲಿ ಶೇಖರಣೆಗೊಂಡ ಹಾಲು ಹೊರ ಬಂದಿದೆ. ಸುಮಾರು 20 ನಿಮಿಷಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದ್ದು, ಆ ಬಳಿಕ ಸಾವನ್ನು ಘೋಷಿಸಿಸಲಾಗಿದೆ ಎಂದು ಇಲ್ಲಿನ ಘಟಕ ಮುಖ್ಯಸ್ಥ ಹಾಗೂ ಕೆಎಂಸಿಯ ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್ ಸ್ಪಷ್ಟನೆ ನೀಡಿದರು. ಮಗುವನ್ನು ಉಳಿಸಲು ವೈದ್ಯರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಮಗುವನ್ನು ತೀವ್ರ ನಿಗಾ ಘಟಕದಲ್ಲೂ ಇಡಲಾಗಿತ್ತು. ಆದರೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಡಾ.ರಾಜೇಶ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಪ್ರತಿಭಟನೆ: ನಮ್ಮ ಮಗು ಆರೋಗ್ಯವಂತವಾಗಿ ಜನಿಸಿತ್ತು. ಆದರೆ ವೈದ್ಯರು ನಿರ್ಲಕ್ಷ ವಹಿಸಿದ ಕಾರಣ ಮಗು ಸಾವಿಗೀಡಾಗಿದೆ ಎಂದು ಮಗುವಿನ ತಂದೆ ಆಟೊಚಾಲಕ ಅಮ್ಮನ್ ಲೇಡಿಗೋಶನ್ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವತಿ ಅವರನ್ನು ಹೆರಿಗೆಗಾಗಿ ಜೂ.23ರಂದು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ. 25ರಂದು ಸಿಸೇರಿಯನ್ ನಡೆಸಿ ಮಗು ವನ್ನು ಹೊರತೆಗೆಯಲಾಗಿತ್ತು. ಬಳಿಕ ತಾಯಿ, ಮಗು ರವಿವಾರ ಮಧ್ಯಾಹ್ನ 2 ಗಂಟೆತನಕ ಆರೋಗ್ಯವಾಗಿದ್ದರು. ಮಧ್ಯಾಹ್ನ 2:30ರ ವೇಳೆಗೆ ಮಗು ಉಸಿರಾಡುತ್ತಿರಲಿಲ್ಲ. ಬಳಿಕ ವೈದ್ಯರು ಬಂದು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ ಎಂದು ಅಮ್ಮನ್ ತಿಳಿಸಿದರು. ಈ ಸಂದರ್ಭ  ಘಟನೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಎಸಿಪಿ ತಿಲಕ್‌ಚಂದ್ರ ಹಾಗೂ ಬಂದರು ಇನ್‌ಸ್ಪೆಕ್ಟರ್ ಶಾಂತಾರಾಮ ಪ್ರತಿಭಟನಕಾರರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಮಧ್ಯಾಹ್ನ 3 ಗಂಟೆಯಿಂದ 7 ಗಂಟೆಯ ತನಕ ಆಸ್ಪತ್ರೆ ಎದುರು ಪ್ರತಿಭಟನೆ, ಆಕ್ರೋಶ ವ್ಯಕ್ತವಾಯಿತು. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಗೆ ಸಚಿವ ಖಾದರ್ ಸೂಚನೆ:

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಲೇಡಿಗೋಶನ್‌ನಲ್ಲಿ ಶಿಶುವಿನ ಮರಣದ ಬಗ್ಗೆ ಇಲಾಖಾವತಿಯಿಂದ ವಿಚಾರಣೆ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

Write A Comment