ಮಂಗಳೂರು, ಜೂ.28: ಭ್ರಷ್ಟಾಚಾರ ಎಂಬುದು ಕ್ಯಾನ್ಸರ್, ಅದನ್ನು ಕಿತ್ತು ಹಾಕುತ್ತೇನೆ ಎಂದು ಚುನಾವಣೆಗೆ ಮೊದಲು ನರೇಂದ್ರ ಮೋದಿ ಹೇಳಿದ್ದರಾದರೂ ಪ್ರಧಾನಿಯಾದ ಬಳಿಕ 13 ತಿಂಗಳಲ್ಲೇ ಕೇಂದ್ರ, ಮಧ್ಯಪ್ರದೇಶ, ಮಹಾರಾಷ್ಟ್ರ ಸರಕಾರಗಳ ಹಗರಣ ಮೂಲಕ ಬಿಜೆಪಿ ಬಂಡವಾಳ ಹೊರಗೆ ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವೌನಿಯಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದಾಗ ಅದನ್ನು ಮರೆ ಮಾಚಲು ಯೋಗ ದಿನದ ಹೆಸರಿನಲ್ಲಿ 400 ಕೋಟಿ ರೂ. ಖರ್ಚು ಮಾಡಲು ಇವರಿಗೆ ನಾಚಿಕೆ ಆಗಬೇಕು. ಇವರು ಹೇಳುವ ಮೊದಲೂ ಯೋಗ, ರಕ್ಷಾ ಬಂಧನ ಇತ್ತು. ಅದಕ್ಕೆ ಪ್ರಚಾರದ ಅಗತ್ಯವಿಲ್ಲ. ಭ್ರಷ್ಟಾಚಾರ ಮಾಡಿದ ಕಾಂಗ್ರೆಸಿಗರು ಅದಕ್ಕೆ ಬೆಲೆ ತೆತ್ತಿದ್ದಾರೆ. ಇನ್ನು ಬಿಜೆಪಿಯ ಸರದಿ ಎಂದು ಅವರಿ ಲೇವಡಿ ಮಾಡಿದರು.
ಮಂಡ್ಯದಲ್ಲಿ ಕಬ್ಬು ಬೆಳೆಗಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಕೇಸು ದಾಖಲು ಮಾಡಿರುವುದು ಅಕ್ಷಮ್ಯ. ಕೇಸು ದಾಖಲಿಸಿದವರ ಹಿಂದೆ ಯಡಿಯೂರಪ್ಪ ಇದ್ದಾರಾ ಅಥವಾ ಕುಮಾರಸ್ವಾಮಿ ಇದ್ದಾರಾ ಎಂದು ಜನತೆಗೆ ತಿಳಿಯಲಿ. ಸಿಎಂಗಳ ಮೇಲೆ ಇಂತಹ ದೂರು ದಾಖಲಿಸಿದರೆ, ಆಡಳಿತ ನಡೆಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟ ನಿವಾರಿಸಲು ಬಿಜೆಪಿ, ಜೆಡಿಎಸ್ ಸಂಸದರು ಪ್ರಧಾನಿ ಬಳಿ ನಿಯೋಗ ಹೋಗಿ ಮನವಿ ಮಾಡಲಿ. ಕಾಂಗ್ರೆಸ್ ಸಂಸದರೂ ಬರಲಿದ್ದಾರೆ. ಅದು ಬಿಟ್ಟು, ರೈತರ ಸಾವಿನಲ್ಲೂ ರಾಜಕೀಯ ಮಾಡುವುದನ್ನು ಯಡಿಯೂರಪ್ಪ, ದೇವೇಗೌಡ ಬಿಡಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಸಂಜೀವ ಮೊಯ್ಲಿ, ಅರುಣ್ ಕುವೆಲ್ಲೊ ಮುಂತಾದವರು ಉಪಸ್ಥಿತರಿದ್ದರು.

