ಕನ್ನಡ ವಾರ್ತೆಗಳು

ಮಣಿಪಾಲ ವಿವಿಗೆ 1,123 ಕೋಟಿ ರೂ. ದಂಡ; ಮೂವತ್ತು ದಿನದಲ್ಲಿ ಕ್ರಮಕ್ಕೆ ಸೂಚನೆ

Pinterest LinkedIn Tumblr

Penalty-Notice

ಉಡುಪಿ: ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿದ ಭೂಮಿಗೆ ಸಂಬಂಧಿಸಿ ಕಾಯಿದೆ ಉಲ್ಲಂಘಿಸಿದ ಆರೋಪದಲ್ಲಿ ಮಣಿಪಾಲ ವಿವಿಗೆ ರಾಜ್ಯ ಸರಕಾರ 1,123 ಕೋಟಿ ರೂ. ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ.

ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್.  ಸುದ್ದಿಗಾರರೊಂದಿಗೆ ಮಾತನಾಡಿ, ದಂಡ ಬೇಡಿಕೆಯ ನೋಟಿಸ್ ಗುರುವಾರವಷ್ಟೇ ಮಣಿಪಾಲ ವಿವಿಗೆ ನೀಡಿದ್ದು 30 ದಿನದೊಳಗೆ ನೀಡುವ ಉತ್ತರ, ಸಲ್ಲಿಸುವ ದಾಖಲೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

1953ರಿಂದ ಮಣಿಪಾಲ ವಿವಿಗೆ ಮೈಸೂರು ಪ್ರಾಂತ್ಯ ಹಾಗೂ 1969ರ ಕರ್ನಾಟಕ ಭೂ ಮಂಜೂರಾತಿ ಕಾಯಿದೆ ಪ್ರಕಾರ 269 ಎಕರೆ ಮಂಜೂರಾಗಿದೆ. 50 ಎಕರೆಯನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ವಿವಿ ಬಳಸಿದ್ದರೆ, 102 ಎಕರೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟಿನ ತನಕ ತೆರಳಿದ್ದು ತೀರ್ಪು ಮಣಿಪಾಲ ವಿವಿ ಪರವಾಗಿತ್ತು. 109 ಎಕರೆಯಲ್ಲಿ ಭೂ ಉಪಯೋಗ ಬದಲಾವಣೆ ಮಾಡಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಭೂ ಮಂಜೂರಾತಿ ಕಾಯಿದೆ ಉಲ್ಲಂಘನೆ ಕುರಿತ ದೂರು ಹಾಗೂ ರಾಜ್ಯ ಕಂದಾಯ ಇಲಾಖೆ ನೀಡಿದ ನಿರ್ದೇಶನದಂತೆ ಉಡುಪಿ ಜಿಲ್ಲಾಡಳಿತ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ.

109 ಎಕರೆ ಭೂಮಿಯನ್ನು ಮಣಿಪಾಲ ವಿವಿಯಿಂದ ಸರಕಾರ ವಾಪಸ್ ಪಡೆಯುವುದು ಇಲ್ಲವಾದರೆ ಮಣಿಪಾಲ ವಿವಿಯಿಂದ 1,123 ಕೋಟಿ ರೂ. ದಂಡ ಪಡೆದು ಮಣಿಪಾಲ ವಿವಿಯ ಅಕ್ರಮವನ್ನು ಸಕ್ರಮ ಮಾಡುವುದಷ್ಟೇ ಸರಕಾರದ ಮುಂದಿರುವ ದಾರಿ. 109 ಎಕರೆಯಲ್ಲಿ ಕಟ್ಟಡ ನಿರ್ಮಾಣದ ಬಳಿಕ ಮಣಿಪಾಲ ವಿವಿಯು ಸರಕಾರಕ್ಕೆ ಭೂ ಮಂಜೂರಾತಿ ಉದ್ದೇಶ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದೆಯೇ ಎನ್ನುವುದು ಕಡತಗಳ ಪರಿಶೀಲನೆ ಬಳಿಕವಷ್ಟೇ ಸ್ಪಷ್ಟಪಡಿಸಲು ಸಾಧ್ಯ ಎಂದರು.

Write A Comment