ಕನ್ನಡ ವಾರ್ತೆಗಳು

ಬದಿಯಡ್ಕ ಪೊಲೀಸರ ಯಶಸ್ವಿ ಕಾರ್ಯಾಚರಣೆ : ತಿಂಗಳ ಹಿಂದೆ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರು ಮಡಿಕೇರಿಯಲ್ಲಿ ಪತ್ತೆ

Pinterest LinkedIn Tumblr

Missing_Family_Found

ಕಾಸರಗೋಡು, ಜೂ.26: ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬದಿಯಡ್ಕದ ಒಂದೇ ಕುಟುಂಬದ ಐವರನ್ನು ಮಡಿಕೇರಿಯಿಂದ ಪತ್ತೆ ಹಚ್ಚುವಲ್ಲಿ ಬದಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ.

ಬದಿಯಡ್ಕ ಕುಂಟಾಲ್ ಮೂಲೆಯ ಉದಯ(32), ಅವರ ಪತ್ನಿ ಪ್ರೇಮಾ(20), ಮಕ್ಕಳಾದ ಶ್ರೀಜಿತ್ (4), ಸಂಗೀತಾ(2) ಮತ್ತು ಪ್ರೇಮಾರ ಸಹೋದರಿ ರಮ್ಯಾ(15) ನಾಪತ್ತೆಯಾಗಿದ್ದವರು. ಮೇ 14ರಂದು ಐವರು ನಾಪತ್ತೆಯಾಗಿದ್ದು, ಈ ಕುರಿತು ಬದಿಯಡ್ಕ ಠಾಣೆಗೆ ದೂರು ನೀಡಲಾಗಿತ್ತು.

ಮಡಿಕೇರಿಯಿಂದ ಐವರನ್ನು ಪೊಲೀಸರು ಕಾಸರಗೋಡಿಗೆ ಕರೆ ತಂದಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೇಳಿಕೆ ಪಡೆದ ಬಳಿಕ ಐವರನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಕಳೆದ ಒಂದೂ ವರೆ ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡದ ಹಲವಡೆ ಹಾಗೂ ಮಡಿಕೇರಿಯಲ್ಲಿ ತಂಗಿದ್ದರು.

ಕಾಸರಗೋಡು ಪೊಲೀಸರು ಉಜಿರೆ, ಧರ್ಮಸ್ಥಳ, ಉಡುಪಿ ಮೊದಲಾದ ಕಡೆ ಶೋಧ ನಡೆಸಿದ್ದರು. ಅವರ ಪತ್ತೆಗಾಗಿ ಕಾಸರಗೋಡು ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೊನೆಗೂ ಸೈಬರ್‌ಸೆಲ್‌ನ ನೆರವಿನಿಂದ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳಿಂದ ಅವರ ಒಂದು ಮೊಬೈಲ್ ಸ್ವಿಚ್‌ಆನ್ ಆಗಿದ್ದು, ಇದರ ಜಾಡನ್ನು ಹಿಡಿದ ಪೊಲೀಸರು ಮಡಿಕೇರಿ ಸಮೀಪದ ಮದನಾಡು ಎಂಬಲ್ಲಿ ಸಂಬಂಧಿಕರ ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.

Write A Comment