ಮಂಗಳೂರು,ಜೂನ್.25 : ಮಾರ್ಲಪದವು ಹಾಗೂ ಒಳಚ್ಚಿಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ರೆಸ್ಟೋರೆಂಟ್ ಹಾಗೂ ನ್ಯಾಯಬೆಲೆ ಅಂಗಡಿಗಳಿಂದ ದುಷ್ಕರ್ಮಿಗಳು ಒಡವೆ ಮತ್ತು ನಗದು ಕಳವುಗೈದ ಘಟನೆ ಬುಧವಾರ ರಾತ್ರಿ ನಡೆದ್ದಿದೆ.
ಇಲ್ಲಿ ವ್ಯವಹಾರ ನಡೆಸುತ್ತಿರುವ ಕೇರಳ ಮೆಸ್ ಹೌಸ್ ಎಂಬ ರೆಸ್ಟೋರೆಂಟ್, ಪಕ್ಕದಲ್ಲಿರುವ ಸೆಲೂನ್ ಹಾಗೂ ಜನರಲ್ ಸ್ಟೋರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು ಹಣ, ಸೊತ್ತು ದೋಚಿ ಪರಾರಿಯಾಗಿದ್ದಾರೆ. ಕಳೆದ ರಾತ್ರಿ ವ್ಯವಹಾರ ಮುಗಿಸಿ ಈ ಅಂಗಡಿಗಳ ಮಾಲಕರು ಮನೆಗೆ ತೆರಳಿದ್ದು, ಇಂದು ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಜನರಲ್ ಸ್ಟೋರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾವರ್ ನಲ್ಲಿದ್ದ ಸುಮಾರು ಎರಡು ಸಾವಿರ ರೂಪಾಯಿಗಳಷ್ಟು ನಗದು ಹಣ, ಸಿಗರೇಟ್ ಪೆಟ್ಟಿಗೆಗಳನ್ನು ಕದ್ದೊಯ್ದಿದ್ದರೆ,ಪಕ್ಕದ ಸೆಲೂನ್ ಗೆ ನುಗ್ಗಿದ ಕಳ್ಳರು ಚಿಲ್ಲರೆ ಹಣ, ಎಟಿಎಂ ಕಾರ್ಡ್ ಗಳು, ಬಂಗಾರದ ಕೆಲವು ಸೊತ್ತುಗಳು ಸೇರಿದಂತೆ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ್ದಾರೆನ್ನಲಾಗಿದೆ.
ಕೇರಳ ಮೆಸ್ ಹೌಸ್ ರೆಸ್ಟೋರೆಂಟ್ ನ ಬೀಗ ಮುರಿದು ಒಳನುಗ್ಗಿ ನಗದು ಹಣ ಕದ್ದೊಯ್ದಿದ್ದಾರೆ. ಕಳವಾದ ಹಣವೆಷ್ಟು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಕೃತ್ಯಗೈದ ಕಳ್ಳರು ಅಂಗಡಿ ಬೀಗಗಳನ್ನು ಅಲ್ಲಿಯೇ ಪಕ್ಕ ಎಸೆದು ಹೋಗಿದ್ದಾರೆ.
ಘಟನೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅದರನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.





