ಕನ್ನಡ ವಾರ್ತೆಗಳು

ಏರ್ ಇಂಡಿಯಾ ಅವ್ಯವಸ್ಥೆ | ಕೊಚ್ಚಿನ್‌ನಲ್ಲಿ ಇಳಿಯದ ವಿಮಾನ : 8 ಗಂಟೆಗೂ ಹೆಚ್ಚು ಹೊತ್ತು ವಿಮಾನದೊಳಗೆ ಪರದಾಡಿದ ಪ್ರಯಾಣಿಕರರು

Pinterest LinkedIn Tumblr
Air_india_filght
ಮಂಗಳೂರು, ಜೂ.17: ಏರ್ ಇಂಡಿಯಾದ ಸೇವಾ ನ್ಯೂನತೆ, ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಗೊಂದಲಕ್ಕೀಡಾಗುವ ಹಲವಾರು ಪ್ರಕರಣಗಳು ವರದಿಯಾಗುತ್ತಿದ್ದು, ಅಂತಹದೇ ಪ್ರಸಂಗವೊಂದು ಬುಧವಾರ ನಡೆದಿದೆ. ಜಿದ್ದಾದಿಂದ ಬುಧವಾರ ಮುಂಜಾನೆ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊಚ್ಚಿನ್‌ನಲ್ಲಿ ಇಳಿಯದೆ ಹೊಸದಿಲ್ಲಿಗೆ ತೆರಳಿತ್ತು. ಅಲ್ಲಿ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೆ, ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 8 ಗಂಟೆಗಳಿಗೂ ಅಧಿಕ ಸಮಯ ವಿಮಾನದೊಳಗೆ ಪರದಾಡಿದ ಘಟನೆ ಸಂಭವಿಸಿದೆ.
ಸುಮಾರು 300ಕ್ಕೂ ಅಧಿಕ (ಸುಮಾರು 160 ಮಂದಿ ಮಂಗಳೂರು ತಂಡದವರು) ಮಂದಿಯನ್ನು ಹೊತ್ತ ಏರ್‌ಇಂಡಿಯಾ ವಿಮಾನ ಬುಧವಾರ ಮುಂಜಾನೆ  3 ಗಂಟೆಯ ಹೊತ್ತಿಗೆ ಜಿದ್ದಾದಿಂದ ಕೊಚ್ಚಿಗೆ ಹೊರಟಿತ್ತು. ಆದರೆ ಕಾರಣಾಂತರಗಳಿಂದ (ಪ್ರಯಾಣಿಕರು ಹವಮಾನ ವೈಪರೀತ್ಯ ಎಂದು ಹೇಳುತ್ತಿದ್ದರೆ ಜಿದ್ದಾಕ್ಕೆ ಮಂಗಳೂರು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿದ್ದ ಸಂಸ್ಥೆಗೆ ಏರ್ ಇಂಡಿಯಾದ ನೀಡಿದ ಮಾಹಿತಿಯ ಪ್ರಕಾರ ತಾಂತ್ರಿಕ ಕಾರಣದಿಂದಾಗಿ) ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7:30ಕ್ಕೆ ಇಳಿಯಬೇಕಾಗಿದ್ದ ವಿಮಾನ ಹೊಸದಿಲ್ಲಿಗೆ ಪ್ರಯಾಣಿಸಿತ್ತು.
‘‘ಬೆಳಗ್ಗೆ 7:30ಕ್ಕೆ ಕೊಚ್ಚಿನ್‌ನಲ್ಲಿ ಇಳಿಯಬೇಕಿದ್ದ ನಮ್ಮನ್ನು ಪೂರ್ವಾಹ್ನ 11 ಗಂಟೆಯ ವೇಳೆಗೆ ಹೊಸದಿಲ್ಲಿಗೆ ತರಲಾಗಿತ್ತು. ಬೆಳಗ್ಗಿನ ಹೊತ್ತು ಉಪಹಾರದ ವ್ಯವಸ್ಥೆಯಾಗಲಿ, ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲದೆ ಪ್ರಯಾಣಿಕರೆಲ್ಲರೂ ಕಷ್ಟಪಡಬೇಕಾಯಿತು. ವಿಮಾನದಲ್ಲಿ ವಯೋವೃದ್ಧರ ಜತೆ ಮಕ್ಕಳೂ ಇದ್ದು, ಎಸಿಯ ವ್ಯವಸ್ಥೆಯೂ ಇಲ್ಲದೆ ಸೆಖೆಯಿಂದ ಪರದಾಡಬೇಕಾಯಿತು. ಹವಾಮಾನ ವೈಪರೀತ್ಯದಿಂದಾಗಿ ಹೊಸದಿಲ್ಲಿಗೆ ವಿಮಾನ ಬಂದಿರುವುದಾಗಿ ನಮಗೆ ತಿಳಿಸಿದ್ದಾರೆ. ಆದರೆ ವಿಮಾನ ಯಾವಾಗ ಹೊರಡಲಿದೆ ಎಂಬ ಮಾಹಿತಿ ನೀಡಲಿಲ್ಲ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತದರೂ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯಲ್ಲೂ ಪ್ರಯಾಣಿಕರು ಪರದಾಡಬೇಕಾಯಿತು’’ ಎಂದು ಪ್ರಯಾಣಿಕರಾದ ತಲಪಾಡಿಯ ಝೀನತ್ ಎಂಬವರು ಸುದ್ಧಿಗಾರರಿಗೆ ಮಾಹಿತಿ ನೀಡಿದ್ದಾರೆ.
ಇಷ್ಟೆಲ್ಲಾ ಗೊಂದಲ, ಅವ್ಯವಸ್ಥೆಯ ನಡುವೆಯೂ ಕೊನೆಗೆ 4:40ರ ಸುಮಾರಿಗೆ ಏರ್ ಇಂಡಿಯಾ ವಿಮಾನ ಹೊಸದಿಲ್ಲಿಯಿಂದ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿ, 7:45ರ ವೇಳೆಗೆ ಕೊಚ್ಚಿನ್‌ಗೆ ತಲುಪಿದೆ. ಝೀನತ್ ತನ್ನ ಪತಿ ಇಬ್ರಾಹೀಂ, ಜುನೇದಾ, ಝುಪೀರಾ ಜತೆ ಕಳೆದ ಜನವರಿ 1ರಂದು ಜಿದ್ದಾ ಮೂಲಕ ಉಮ್ರಾ ಯಾತ್ರೆಗೆ ತೆರಳಿದ್ದರು. ಮಂಗಳೂರಿನ ಅಲ್ ಸಬೀಲ್ ಸಂಸ್ಥೆಯ ಮೂಲಕ ಮಂಗಳೂರಿನ 160 ಮಂದಿಯ ತಂಡ ಜಿದ್ದಾಕ್ಕೆ ತೆರಳಿದ್ದು, ಈ ಬಗ್ಗೆ ಸಂಸ್ಥೆಯ ಏಜೆಂಟರೊಬ್ಬರನ್ನು ವಿಚಾರಿಸಿದಾಗ, ‘‘ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಕೊಚ್ಚಿನ್‌ನಲ್ಲಿ ಇಳಿಯದೆ ಹೊಸದಿಲ್ಲಿಗೆ ತೆರಳಿದೆ. ಏರ್ ಇಂಡಿಯಾದಿಂದ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಪ್ರಯಾಣಿಕರು ಎಸಿ ವ್ಯವಸ್ಥೆಯೂ ಇಲ್ಲದೆ ಸೆಖೆಯಲ್ಲೇ ವಿಮಾನದಲ್ಲೇ ಹಲವು ಗಂಟೆಗಳನ್ನು ಕಳೆದಿದ್ದಾರೆ’’ ಎಂದು ತಿಳಿಸಿದ್ದಾರೆ.

 

Write A Comment