ಕನ್ನಡ ವಾರ್ತೆಗಳು

ಕಲ್ಲುಕೋರೆಗಳ ಸುತ್ತ ಅವರಣಗೋಡೆ ನಿರ್ಮಾಣಕ್ಕಾಗಿ ಕಾರ್ಪಸ್ ಫಂಡ್‌ನಿಂದ 22 ಲಕ್ಷ ರೂ. ಬಿಡುಗಡೆ.

Pinterest LinkedIn Tumblr

dc_meet_photo

ಮಂಗಳೂರು, ಜೂ.18  : ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಸ್ಥಗಿತಗೊಂಡಿರುವ ಕಲ್ಲು ಕೋರೆಗಳು ಸಾರ್ವಜನಿಕರ ಪಾಲಿಗೆ ಅಪಾಯಕಾರಿಯಾಗದಂತೆ ಅವುಗಳ ಸುತ್ತ ಆವರಣಗೋಡೆಗಳನ್ನು ನಿರ್ಮಿಸುವುದಕ್ಕಾಗಿ ಕಾರ್ಪಸ್ ಫಂಡ್‌ನಿಂದ 22 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಬಿಡುಗಡೆ ಗೊಳಿಸಿದ್ದಾರೆ. ಕಲ್ಲುಕೋರೆಗಳ ಸುತ್ತ ಬೇಲಿ ನಿರ್ಮಿಸುವ ಕುರಿತಂತೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ, ಎಲ್ಲಾ ತಹಶೀಲ್ದಾರರು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರೂ ಅದು ಕಾರ್ಯಗತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ಹಣ ಬಿಡುಗಡೆಗೊಳಿಸಿದರು.

ಖಾಸಗಿ ಜಮೀನುಗಳಲ್ಲಿರುವ ಕಲ್ಲು ಕೋರೆಗಳ ಸುತ್ತ ಇನ್ನು ಒಂದು ವಾರದೊಳಗೆ ತಡೆಗೋಡೆ ನಿರ್ಮಿಸುವಂತೆ ಅವುಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿಯವರು ತಹಶೀಲ್ದಾರರಿಗೆ ಸೂಚಿಸಿದರು. ಇದೀಗ ಬಿಡುಗಡೆ ಮಾಡಿರುವ ಹಣದಿಂದ ಬಿಪಿಎಲ್ ಫಲಾನುಭವಿಗಳ ಜಮೀನಿನಲ್ಲಿರುವ ಹಾಗೂ ಸರಕಾರದ ಜಾಗದಲ್ಲಿರುವ ಕಲ್ಲು ಕೋರೆಗಳಿಗೆ ತಡೆಗೋಡೆಗಳನ್ನು ನಿರ್ಮಿಸಲು ಮುಂದಾಗುವಂತೆ ಅವರು ಆದೇಶಿಸಿದರು.

ಬಂಟ್ವಾಳ ತಾಲೂಕಿಗೆ 5 ಲಕ್ಷ ರೂ., ಬೆಳ್ತಂಗಡಿ 2 ಲಕ್ಷ ರೂ., ಮಂಗಳೂರು 8 ಲಕ್ಷ ರೂ., ಪುತ್ತೂರು 5 ಲಕ್ಷ ರೂ. ಮತ್ತು ಸುಳ್ಯ ತಾಲೂಕಿಗೆ 2 ಲಕ್ಷ ರೂ. ಅನುದಾನವನ್ನು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಬಿಡುಗಡೆಗೊಳಿಸಿ ಚೆಕ್‌ಗಳನ್ನು ಜಿಲ್ಲಾಧಿಕಾರಿ ವಿತರಿಸಿದರು. ಜಿಲ್ಲೆಯಲ್ಲಿ ಒಟ್ಟು 858 ಕಲ್ಲು ಕೋರೆಗಳಿದ್ದು ಅವುಗಳಲ್ಲಿ 172 ಕೋಗಳನ್ನು ಈಗಾಗಲೇ ಮುಚ್ಚಲಾಗಿದ್ದು, 179 ಕೋರೆಗಳಿಗೆ ತಂತಿ ಬೇಲಿ ಹಾಕಲಾಗಿದೆ. ಬಾಕಿ ಉಳಿದಿರುವ 507 ಕೋರೆಗಳಿಗೆ ತಡೆಗೋಡೆ ನಿರ್ಮಿಸಬೇಕಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಎನ್.ರಾಮಪ್ಪಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಐ.ಪಿ.ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Write A Comment