ಕನ್ನಡ ವಾರ್ತೆಗಳು

ಕುಮಟಾ ಪೊಲೀಸರ ಎಡವಟ್ಟು..ಬೈಂದೂರು ಪೊಲೀಸರಿಗೆ ಇಕ್ಕಟ್ಟು..!

Pinterest LinkedIn Tumblr
ಉಡುಪಿ: ಕುಮಟಾ ಪೊಲಿಸರು ಮಾಡಿದ ಅಚಾತುರ್ಯ ಹಾಗೂ ತೋರಿದ ಬೇಜವಬ್ದಾರಿಯಿಂದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಯುವಕನೋರ್ವ ಕಿಡ್ನಾಪ್ (ಅಪಹರಣ) ಆದ ಬಗ್ಗೆ ಪ್ರಕರಣ ದಾಖಲಾಗಿದೆ.
Girish_Byndoor_Kidnap
(ಗಿರೀಶ್)
ಕುಮಟಾ ಠಾಣೆಯಲ್ಲಿ ಅದ್ಯಾವುದೋ ಪ್ರಕರಣದ ವಿಚಾರಣೆಗೆಂದು ಯುವಕನೋರ್ವನನ್ನು ಸ್ಥಳೀಯ ಬೈಂದೂರು ಠಾಣೆಗೆ ಯಾವುದೇ ಮಾಹಿತಿ ನೀಡದೇ ಕುಮಟಾಕ್ಕೆ ಕರೆದೊಯ್ದ ಫಲವೇ ಬೈಂದೂರು ಠಾಣೆಯಲ್ಲಿ ಈ ಯುವಕನ ತಾಯಿ ನೀಡಿದ ದೂರಿನಂತೆ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದಾದರೇನು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಜೂ.12 ಶುಕ್ರವಾರ ಬೈಂದೂರಿನ ಬಿಜೂರು ಸಮೀಪದ ಸಾಲಿಮಕ್ಕಿ ನಿವಾಸಿ ದೇವಿ ಖಾರ್ವಿ ಹಾಗೂ ಆಕೆ ಮಗ ಗಿರೀಶ್ (23) ಮನೆಯಲ್ಲಿರುವಾಗ ಮನೆ ಮುಂದೆ ಬೆಳ್ಳಂಬೆಳಿಗ್ಗೆ ಬಿಳಿ ಬಣ್ಣದ ಕಾರು ಬಂದು ನಿಲ್ಲುತ್ತೆ. ಕಾರಿನಲ್ಲಿದ್ದವರು ನೀರು ಕೇಳಿದಾಗ ಕೊಡಲು ಹೋದ ದೇವಿ ಅವರ ಹಿಂದೆ ಆಕೆಯ ಮಗ ಗಿರೀಶನು ಬರುತ್ತಾನೆ. ಆತನನ್ನು ಕಂಡಿದ್ದೇ ಮೂವರು ಪುರುಷರು ಹಾಗೂ ಓರ್ವ ಮಹಿಳೆಯಿದ್ದ ಆ ತಂಡ ಗಿರೀಶ್ ಎಂಬುದನ್ನು ಖಚಿತಪಡಿಸಿಕೊಂಡು ತಾಯಿಗೂ ತಾವ್ಯಾರೆಂಬ ಬಗ್ಗೆ ಮಾಹಿತಿಯನ್ನೂ ನೀಡದೇ ಕರೆದೊಯ್ಯುತ್ತಾರೆ.
ಘಟನೆಯಿಂದ ಕಂಗೆಟ್ಟ ದೇವಿ ಅವರು ತಮ್ಮ ಪತಿ ಬಾಬು ಖಾರ್ವಿ ಅವರಿಗೆ ಮಾಹಿತಿ ನೀಡಿ ಮಧ್ಯಾಹ್ನದ ಸುಮಾರಿಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿಯೇ ಬಿಡುತ್ತಾರೆ.
ಮಾರನೇ ದಿನ ಕಳೆದರೂ ಮಗನ ಬಗ್ಗೆ ಸುಳಿವು ಸಿಗುವುದಿಲ್ಲ. ಬಳಿಕ ಶನಿವಾರದ ಸಂಜೆ ಬಳಿಕ ಆತನನ್ನು ಕುಮಟಾ ಪೊಲೀಸರು ಕರೆದೊಯ್ದಿರಭುದೆಂಬ ಬಗ್ಗೆ ಅದ್ಯಾವುದೋ ಮೂಲದಿಂದ ಮಾಹಿತಿ ಸಿಕ್ಕಿದೆ. ಆದರೂ ಅದು ಯಾವುದೇ ಪೊಲೀಸ್ ಮೂಲದಿಂದ ಬಾರದ ಕಾರಣ ಗಿರೀಶ್ ಫೋಷಕರು ಕಂಗಾಲಾಗಿದ್ದಾರೆ.
ಒಟ್ಟಿನಲ್ಲಿ ಕುಮಟಾ ಪೊಲೀಸರೇ ಗಿರೀಶನನ್ನು ವಿಚಾರಣೆಗೆಂದೇ ಕರೆದೊಯ್ದಿದ್ದು ನಿಜ. ಆದರೇ ಸ್ಥಳೀಯ ಬೈಂದೂರು ಠಾಣೆಗೆ ತಾವು ಈ ಭಾಗದ ಇಂತಹಾ ವ್ಯಕ್ತಿಯನ್ನು ವಿಚಾರಣೆಗೆ ಕರೆದೊಯ್ಯುತ್ತೇವೆಂಬ ಬಗ್ಗೆ ಮಾಹಿತಿಯನ್ನು ನೀಡದೇ ಹೋದ ಕಾರಣವೇ ಇಷ್ಟೇಲ್ಲಾ ಅಚಾತುರ್ಯವಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕುಮಟಾ ಪೊಲೀಸರ ಬಳಿ ಈ ಬಗ್ಗೆ ಸ್ಪಷ್ಟೀಕರಣ ಪಡೆದು ನೊಂದ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ.

Write A Comment