ಕನ್ನಡ ವಾರ್ತೆಗಳು

ಮನಪಾ ಆಯುಕ್ತೆ ವರ್ಗಾವಣೆ : ರಾಜಕೀಯ ಕೆಸರಾಟಕ್ಕೆ ಖಡಕ್ ಅಧಿಕಾರಿ ಬಲಿ..? : ಮತ್ತೊಮ್ಮೆ ಕಮಿಷನರ್ ಇಲ್ಲದ ಮನಪಾ..!

Pinterest LinkedIn Tumblr

Mcc_new_commissioner

ಮಂಗಳೂರು, ಜೂ.13: ಕಳೆದ ಐದೂವರೆ ತಿಂಗಳುಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿದ್ದ ಹೆಫ್ಸಿಬಾ ರಾಣಿ ಕೊರ್ಲಾಪತಿ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಅವರನ್ನು ವಿಜಯಪುರದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

ಐಎಎಸ್ ಶ್ರೇಣಿಯ ಕೊರ್ಲಾಪತಿ 2015ರ ಜನವರಿ 1ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಆಯುಕ್ತರ ಖಡಕ್ ನಿರ್ಧಾರಗಳು ಪಾಲಿಕೆಯ ಕೆಲವು ಕಾರ್ಪೊರೇಟರ್‌ಗಳನ್ನು ಕೆರಳಿಸಿತ್ತು. ಆಯುಕ್ತರು ಕಾರ್ಪೊರೇಟರ್‌ಗಳ ಮಾತಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದವು.

ಅಭಿವೃದ್ಧಿ ವಿಷಯದಲ್ಲಿ ಪಾಲಿಕೆ ಆಯುಕ್ತರು ಕೈಗೊಂಡ ನಿರ್ಧಾರಗಳನ್ನು ಪಾಲಿಕೆ ಸದಸ್ಯರ ಒಂದು ಬಣ ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದು ಗುಂಪು ಅವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆಯುಕ್ತೆಯ ನಿರ್ಧಾರಗಳಿಂದ ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಗುಂಪು ಆರೋಪಿಸುತ್ತಲೇ ಬಂದಿತ್ತು. ಆಯುಕ್ತೆಯ ಖಡಕ್ ನಿರ್ಧಾರಗಳಿಂದ ಬೇಸತ್ತ ಬಣ ಆಯುಕ್ತರನ್ನು ವರ್ಗಾಯಿಸಲು ತೆರೆಮರೆಯ ರಾಜಕೀಯ ಕಸರತ್ತು ನಡೆಸಿತ್ತು. ಇದಕ್ಕಾಗಿ ನಗರಾಭಿವೃದ್ಧಿ ಸಚಿವರು ಸಹಿತ ಜಿಲ್ಲೆಯ ಇತರ ಸಚಿವರನ್ನು ಭೇಟಿ ಮಾಡಿ ಅವರ ಎತ್ತಂಗಡಿಗೆ ಪ್ರಯತ್ನಿಸಿತ್ತು.

ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಕೆಲವು ಕಾರ್ಪೊರೇಟರ್‌ಗಳು ಕೊರ್ಲಾಪತಿ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿದ್ದರು.

ಈ ಬೆಳವಣಿಗೆಯ ನಡುವೆಯೇ ಕೊರ್ಲಾಪತಿಯವರಿಗೆ ಹಲವು ಒತ್ತಡಗಳು, ಬೆದರಿಕೆಗಳು ಬರಲಾರಂಭಿಸಿದ್ದವು. ಇದರಿಂದಾಗಿ ಅವರು ಭದ್ರತೆಗಾಗಿ ಗನ್‌ಮ್ಯಾನ್ ಇಟ್ಟುಕೊಂಡಿದ್ದರು. ಇದೀಗ ಆಯುಕ್ತರ ವರ್ಗಾವಣೆಯಿಂದಾಗಿ ಪಾಲಿಕೆ ಆಯುಕ್ತರ ಹುದ್ದೆ ಖಾಲಿ ಬಿದ್ದಿದೆ.

Write A Comment