ಕನ್ನಡ ವಾರ್ತೆಗಳು

ಕುಡಿಯೋಕೆ, ಮುಯ್ಯಿ ಹಾಕೋಕೆ ಹಣ ನೀಡದ್ದಕ್ಕೆ ಅಳಿಯನಿಂದಲೇ ಅತ್ತೆ ಕೊಲೆ

Pinterest LinkedIn Tumblr

Uppinakudru_Murder_Women .

ಕುಂದಾಪುರ: ಕುಡಿಯೋಕೆ ಹಣ ಕೊಡ್ಲಿಲ್ಲ, ಮದುವೆ ಸಮಾರಂಭಕ್ಕೆ ಮುಯ್ಯಿ ಹಾಕೋಕೆ ಹಣ ನೀಡಿಲ್ಲ ಎಂದು ಅಳಿಯನೇ ಅತ್ತೆಯನ್ನು ಊರುಗೋಲಿನಿಂದ ಹೊಡೆದು ಕೊಂದ ಘಟನೆ ತಾಲೂಕಿನ ಉಪ್ಪಿನಕುದ್ರು ಎಂಬಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಉಪ್ಪಿನಕುದ್ರು ನಿವಾಸಿ ಜಾನಕಿ ಶೇರುಗಾರ್ತಿ (81) ಅಳಿಯನಿಂದ ಕೊಲೆಯಾದ ದುರ್ದೈವಿಯಾಗಿದ್ದು, ಮೂಲತಃ ಬೈಂದೂರು ನಿವಾಸಿಯಾದ ಜನಾರ್ಧನ ಶೇರುಗಾರ (49) ಕೊಲೆಮಾಡಿದ ಆರೋಪಿಯಾಗಿದ್ದಾನೆ.

Uppinakudru_Murder_Women (2) Uppinakudru_Murder_Women (5) Uppinakudru_Murder_Women (4) Uppinakudru_Murder_Women (3) Uppinakudru_Murder_Women (1) Uppinakudru_Murder_Women (6) Uppinakudru_Murder_Women

ಘಟನೆ ವಿವರ: ಬೆಂಗಳೂರಿನಲ್ಲಿ ಅಡುಗೆ ಕೆಲಸ (ರೋಜ್) ಮಾಡಿಕೊಂಡಿದ್ದ ಮೂಲತಃ ಬೈಂದೂರಿನವನಾದ ಜನಾರ್ಧನ ಶೇರುಗಾರ ಉಪ್ಪಿನಕುದ್ರುವಿನ ಜಾನಕಿ ಎನ್ನುವವರ ಮಗಳನ್ನು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದ, ಪತ್ನಿಯ ಮರಣದ ನಂತರ ಪುತ್ರನೊಂದಿಗೆ ಬೆಂಗಳೂರಿನಲ್ಲಿಯೇ ಇದ್ದ ಆತ ಬುಧವಾರ (ಇಂದು) ನಡೆಯಬೇಕಿರುವ ಸೋದರ ಅಳಿಯನ ಮದುವೆಗೆಂದು ಉಪ್ಪಿನಕುದ್ರುವಿಗೆ ಆಗಮಿಸಿದ್ದ. ಕಳೆದೆರಡು ದಿನಗಳಿಂದಲೂ ಮದುವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಈತ ಮಂಗಳವಾರ ಸಂಜೆವರೆಗೂ ಮದುವೆ ಕೆಲಸ ಮಾಡಿ ಅತ್ತೆ ಮನೆಗೆ ಬಂದು ಅತ್ತೆಯ ಬಳಿ ಕುಡಿಯಲು ಹಣ ಕೇಳಿದ್ದಾನೆ, ಆಕೆ ನೀಡದಿದ್ದಾಗ ಅವರಿವರ ಬಳಿ ಹಣ ಪಡೆದು ಸಮೀಪದ ಪೇಟೆಗೆ ತೆರಳಿ ಕುಡಿದು ಬಂದಿದ್ದಾನೆ.

ಇದಾದ ಬಳಿಕ ಸ್ಥಳೀಯ ವ್ಯಕ್ತಿಯೋರ್ವರಲ್ಲಿ ನಾಳೆ ಬಿತ್ತನೆ ಕೆಲಸಕ್ಕೆ ಬರುತ್ತೇನೆಂದು ಹೇಳಿ ಅವರಿಂದ ಮದ್ಯ ಪಡೆದು ಕುಡಿದು ಪುನಃ ಮನೆಗೆ ಬಂದು ರಂಪಾಟ ಆರಂಭಿಸಿದ್ದಾನೆ. ‘ನಾಳೆ ಮದುವೆಯಿದೆ, ನನ್ನ ಬಳಿ ಹಣವಿಲ್ಲ, ಸೋದರಳಿಯನ ಮದುವೆಗೆ ಮುಯ್ಯಿ ಹಾಕಲು 100 ರೂ. ಹಣ ಬೇಕೆಂದು ಅತ್ತೆ ಬಳಿ ದುಂಬಾಲು ಬಿದ್ದಾಗ ಅತ್ತೆ ಜಾನಕಿ ಈಗ ಹಣವಿಲ್ಲ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಆತ ಜಾನಕಿ ಬಳಸುವ ಊರುಗೋಲನ್ನು ಎಳೆದುಕೊಂಡು ಮೂರು ಬಾರೀ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈತನ ಹೊಡೆತದಿಂದ ಘಾಸಿಗೊಂಡ ಆಕೆ ತಲೆಯೊಡೆದು ಮನೆಯಂಗಳದಲ್ಲಿ ಕುಸಿದು ಬಿದ್ದಿದ್ದಾಳೆ. ಅಲ್ಲಿಯೇ ಅವಳ ಪ್ರಾಣಪಕ್ಷಿ ಹಾರಿಹೋಗಿದೆ.

ಜಾನಕಿ ಕಿರುಚಾಟ ಕೇಳಿ ಸ್ಥಳಿಯರು ಬರುವುದರೊಳಗಾಗಿ ಮನೆಯೊಳಕ್ಕೆ ಹೊಕ್ಕು ಬಾಗಿಲನ್ನು ಹಾಕಿಕೊಂಡ ಜನಾರ್ಧನ ಅಲ್ಲಿಯೇ ಊಟಕ್ಕೆ ಕುಳಿತಿದ್ದಾನೆ. ಸ್ಥಳೀಯರು ಆಗಮಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆಯಾದ ಜಾನಕಿಯವರಿಗೆ 6 ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಅವರುಗಳು ವಿವಿದೆಡೆ ನೆಲೆಸಿದ್ದು ಉಪ್ಪಿನಕುದ್ರುವಿನ ಮನೆಯಲ್ಲಿ ಜಾನಕಿ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವರದಿ- ಯೋಗೀಶ್ ಕುಂಭಾಸಿ

Write A Comment