ಕನ್ನಡ ವಾರ್ತೆಗಳು

ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಶತಪೂರ್ತಿ ಸಂಭ್ರಮ : ಗಣ್ಯರಿಂದ ಶುಭ ಹಾರೈಕೆ

Pinterest LinkedIn Tumblr

Kayyara_Kiyanna_Rai

ಮಂಗಳೂರು / ಕಾಸರಗೋಡು, ಜೂ.9: ಕಯ್ಯರ ಕಿಞ್ಞಣ್ಣ ರೈಯ ವರು ಭಾಷೆಗೆ ಎಂದಿಗೂ ದ್ರೋಹ ಬಗೆದವರಲ್ಲ. ಮಾತೃ ಭಾಷೆಯಂತೆ ಉಳಿದ ಎಲ್ಲಾ ಭಾಷೆಗಳನ್ನು ಗೌರವಿಸುತ್ತಾ ಬಂದ ವರು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಅವರು ಬದಿಯಡ್ಕದಲ್ಲಿರುವ ಕಯ್ಯಾರರ ವಸತಿ ಪೆರಡಾಲ ಕವಿತಾ ಕುಟೀರದಲ್ಲಿ ಸೋಮವಾರ ನಡೆದ ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಶತಪೂರ್ತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಯ್ಯರ ಅವರು ಕನ್ನಡ, ತುಳುವಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರೂ ಇಂಗ್ಲಿಷ್, ಮಲಯಾಳಂ ಭಾಷೆಗಳ ಮೇಲಿನ ಅವರ ಅಭಿಮಾನ ಕಡಿಮೆಯೇನು ಆಗಿರಲಿಲ್ಲ ಎಂದ ಸಂತೋಷ್ ಹೆಗ್ಡೆ, ಕಯ್ಯೆರರು ಇನ್ನಷ್ಟು ಕಾಲ ಬಾಳಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರಣ್ಯ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಯ್ಯರ ಕಿಞ್ಞಣ್ಣ ರೈ ಯವರ ಆದರ್ಶ, ಸ್ಫೂರ್ತಿ ಮುಂದಿನ ತಲೆಮಾರಿಗೂ ವಿಸ್ತರಿ ಸಬೇಕಿದೆ. ಸಾಹಿತ್ಯ ಹಾಗೂ ಗಡಿನಾಡ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿ ಕೊಂಡಿರುವ ಕಯ್ಯರರಿಗೆ ಕರ್ನಾಟಕ ರತ್ನ, ರಾಷ್ಟ್ರಕವಿಯಂತಹ ಮೇರು ಗೌರವ ಲಭಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದರು.

ಸಮಾರಂಭದಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಕೇರಳ ಮಾಜಿ ಸಚಿವ ಸಿ.ಟಿ.ಅಹ್ಮದಲಿ, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಮೋಹನ್‌ಕುಮಾರ್ ಗೌಡ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳ ತುಳು ಅಕಾಡಮಿಯ ಅಧ್ಯಕ್ಷ ಬಿ.ಸುಬ್ಬಯ್ಯ ರೈ, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಉಮೇಶ್ ಸಾಲ್ಯಾನ್, ಕಸಾಪ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಬದಿಯಡ್ಕ ಗ್ರಾಪಂ ಸದಸ್ಯ ಮಾಹಿನ್ ಕೇಳೋಟ್, ಕೆ.ರಾಮ, ಅಂಬಾತನಯ ಮುದ್ರಾಡಿ, ಹೇರಂಜೆ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು

ಎ.ನರಸಿಂಹ ಭಟ್ ಮತ್ತು ಮಿಥಾಲಿ ರೈಯವರು ಇಂಗ್ಲಿಷಿಗೆ ಮತ್ತು ವಿಷ್ಣು ಭಟ್ ಸಜಂಕಿಲ ಹಿಂದಿಗೆ ಅನುವಾದಿಸಿದ ಕಯ್ಯಿರ ಕಿಞ್ಞಣ್ಣ ರೈ ಯವರ ಕವಿತೆಗಳ ಪುಸ್ತಕಗಳನ್ನು ಸಚಿವ ರಮಾನಾಥ ರೈ ಅವರು ಬಿಡುಗಡೆಗೊಳಿಸಿದರು .

ಇದೇ ವೇಳೆ ಹಲವು ಗಣ್ಯರು ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಕಯ್ಯೆರ ಅವರನ್ನು ಗೌರವಿಸಲಾಯಿತು. ನ್ಯಾ.ಸಂತೋಷ್ ಹೆಗ್ಡೆಯವರನ್ನು ಕಯ್ಯೆರ ಕಿಞ್ಞಣ್ಣ ರೈ ಸನ್ಮಾನಿಸಿದರು. ಇದಕ್ಕೂ ಮೊದಲು ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ಕಯ್ಯಾರ ಕಿಞ್ಞಣ್ಣರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಕವಿ ಮಾತ್ರವಲ್ಲ  ಕೃಷಿಕ ಕೂಡಾ.

‘‘ನಾನು ಕವಿ ಮಾತ್ರವಲ್ಲ ಕೃಷಿಕ ಕೂಡಾ. ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದು ಹಳ್ಳಿಯಲ್ಲೇ ಶಿಕ್ಷಣ ಪಡೆದವನು. ಭಾರತೀಯ ಶೈಲಿಯನ್ನು ಅಳವಡಿಸುವ ಮೂಲಕ ಸಾರ್ಥಕ ಜೀವನ ನಡೆಸಿದ್ದೇನೆ’’ ಎಂದು ಶತಾಯುಷಿ ಕಯ್ಯಿರ ಕಿಞ್ಞಣ್ಣ ರೈ ನುಡಿದರು. ಜನ್ಮದಿನದಂಗವಾಗಿ ನೀಡಲಾದ ಗೌರವ ಸ್ವೀಕರಿಸಿದ ಬಳಿಕ ಕೃತಜ್ಞತೆ ಸಲ್ಲಿಸಿ ಮಾತನಾಡುವ ಮೂಲಕ ಅವರು ಅಭಿಮಾನಿಗಳನ್ನು ಹುರಿದುಂಬಿಸಿದರು.

10 ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿದ ಕಯ್ಯರ ಅವರು, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ತಾನೂ ಆರಂಭದಲ್ಲೇ ಸಂಸ್ಕೃತ ಶಿಕ್ಷಣವನ್ನು ಪಡೆದೆ ಇದರಿಂದ ಭಾರತೀಯತೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಕನ್ನಡದೊಂದಿಗೆ ಸಂಸ್ಕೃತ ಭಾಷೆಯತ್ತಲೂ ಗಮನವಿರಲಿ. ಇಲ್ಲವಾದಲ್ಲಿ ಸಂಸ್ಕೃತ ಭಾಷೆ ಸಾಹಿತ್ಯ ಸ್ಥಾನವನ್ನೇ ಕಳೆದುಕೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ರಿಟಿಷರ ಆಡಳಿತದಿಂದ ನಾವು ಅನಾಥರಾಗುತ್ತಿದ್ದೇವೆ ಎಂಬ ಭೀತಿಯಲ್ಲಿದ್ದಾಗ ಬ್ರಿಟಿಷರನ್ನು ತೊಲಗಿಸಲು ಸ್ವಾತಂತ್ರಕ್ಕಾಗಿ ಹೋರಾಡಿದ್ದೇನೆ. ಜೈಲುವಾಸ ಅನುಭ ವಿಸಿದ್ದೇನೆ ಎಂದು ಸ್ಮರಿಸಿದ ಕಯ್ಯಾರರು, ಸರಕಾರಿ ಉದ್ಯೋಗ ಲಭಿಸಿದರೂ ಅದನ್ನು ತಿರಸ್ಕರಿಸಿದ್ದೆ ಎಂದು ಹೇಳಿದರು.

Write A Comment