ಪುತ್ತಿಗೆ,ಜೂನ್.01: “ಮಾನವನ ಮೂಲಭೂತ ಆವಶ್ಯಕತೆಗಳಲ್ಲಿ ಒಂದಾಗಿರುವ ಮನೆ ನಿರ್ಮಾಣಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗವು ಸಕಾಲದಲ್ಲಿ ಸ್ಪಂದಿಸಿರುವುದು ಶ್ಲಾಘನೀಯ. ಎಲ್ಲ ಸಂದರ್ಭಗಳಲ್ಲಿ ಸೂಕ್ತ ರೀತಿಯ ಆಸರೆಯನ್ನು ನೀಡಲು ಗ್ರಾಮಪಂಚಾಯತಿನ ಅಧಿಕಾರವು ಅಶಕ್ತವಾಗುವುದರಿಂದ ಸಂಘಟನೆಗಳು ಈ ಕೈಂಕರ್ಯವನ್ನು ಹೊತ್ತುಕೊಳ್ಳುವುದು ಸಮಾಜಕ್ಕೆ ಆದರ್ಶವಾಗುತ್ತದೆ. ಈ ನಿಟ್ಟಿನಲ್ಲಿ ವಲಯ ಸಮಿತಿಯ ಈ ಪ್ರಯತ್ನ ಅನುಕರಣೀಯ. ಮನೆಯ ಮುಂದಿನ ಆವಶ್ಯಕತೆಗಳಾದ ವಿದ್ಯುತ್ ಸಂಪರ್ಕ, ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತಿನ ಮೂಲಕ ಸಹಕಾರ ನೀಡಲು ಪ್ರಯತ್ನಿಸುತ್ತೇನೆ” ಎಂದು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಚನಿಯ ಪಾಡಿ ಅಭಿಪ್ರಾಯಪಟ್ಟರು. ಸೋಮವಾರ ಗುಂಪೆ ವಲಯದ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಹಾಯದೊಂದಿಗೆ ದುರಸ್ತಿಗೊಳಿಸಿದ ಪುತ್ತಿಗೆ ಸನಿಹದ ಕೃಷ್ಣ ಹೆಬ್ಬಾರರ ಮನೆ ಸಮರ್ಪಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಮಂಡಲ ಅಧ್ಯಕ್ಷ ಡಾ| ವೈ.ವಿ. ಕೃಷ್ಣ ಮೂರ್ತಿ ಮನೆಯನ್ನು ಕೃಷ್ಣ ಹೆಬ್ಬಾರರಿಗೆ ಸಮರ್ಪಣೆ ಮಾಡಿದರು. ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಜಯಂತ ಪಾಟಾಳಿ, ಗ್ರಾಮ ಪಂಚಾಯತು ಸದಸ್ಯ ಪಾಲಾಕ್ಷ ರೈ, ಮುಳ್ಳೇರಿಯ ಮಂಡಲ ಆರೋಗ್ಯ ವಿಭಾಗದ ಪ್ರಧಾನ ರಮೇಶ್ ಏತಡ್ಕ, ಗುಂಪೆ ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್, ಗುಂಪೆ ವಲಯ ಕಾರ್ಯದರ್ಶಿ ಕೇಶವಪ್ರಸಾದ್ ಎಡಕ್ಕಾನ ಉಪಸ್ಥಿತರಿದ್ದರು.
ಗ್ರಾಮಣಿ ಶಂಭು ಹೆಬ್ಬಾರ್ ಶ್ರಾವಣಕೆರೆ ಸ್ವಾಗತಿಸಿದರು. ಗುಂಪೆ ವಲಯದ ವಿದ್ಯಾ ವಿಭಾಗದ ಪ್ರಧಾನ ಎಂ.ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಅಂಗವಾಗಿ ವೇದಮೂರ್ತಿ ನಿಡುಗಳ ಶಂಕರನಾರಾಯಣ ಭಟ್ಟರು ಗಣಪತಿ ಹವನ, ಶಿವಪೂಜೆ, ಕುಂಕುಮಾರ್ಚನೆಗಳನ್ನು ನೆರವೇರಿಸಿದರು. ಶಿಥಿಲಾವಸ್ಥೆಯಲ್ಲಿದ್ದ ಈ ಮನೆಯನ್ನು ಮುಳ್ಳೇರಿಯಾ ಮಂಡಲದ ಗುಂಪೆ ವಲಯದ ನೇತೃತ್ವದಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ವಾಸಕ್ಕೆ ಯೋಗ್ಯಗೊಳಿಸಲಾಗಿದೆ.
ವರದಿ: ಎಂ. ಸುಬ್ರಹ್ಮಣ್ಯ ಭಟ್, ಬೆಜಪ್ಪೆ