ಕನ್ನಡ ವಾರ್ತೆಗಳು

ಜೂನ್.01  ಶಾಲೆ ‘ಪ್ರಾರಂಭೋತ್ಸವ : ಬಿಸಿಯೂಟ-ಸಿಹಿಯೂಟದೊಂದಿಗೆ’ ಹಬ್ಬದ ವಾತಾವರಣಕ್ಕೆ ಸಿದ್ಧತೆ.

Pinterest LinkedIn Tumblr

akshaya_patra_spl

ಮಂಗಳೂರು, ಮೇ 28: ಪ್ರಸಕ್ತ ಸಾಲಿನ ಶೈಕ್ಷಣಿಕ (2015-16) ವರ್ಷದ ಪುನರಾರಂಭಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆ ಸಂಪೂರ್ಣ ಸಜ್ಜಾಗಿದೆ.ನಿನ್ನೆ ಮೊನ್ನೆಯವರೆಗೂ ಅಜ್ಜ-ಅಜ್ಜಿಯ ಮಡಿಲಲ್ಲಿ ಆಟವಾಡುತ್ತಿದ್ದ, ಅಮ್ಮನ ಅಕ್ಕರೆ, ಅಪ್ಪನ ಗದರಿಕೆ, ಸುಡುಬಿಸಿಲನ್ನೂ ಲೆಕ್ಕಿಸದೆ ಆಟದ ಮೈದಾನದಲ್ಲಿ ಕಾಲ ಕಳೆಯುತ್ತಿದ್ದ ಮಕ್ಕಳು ಶಾಲೆಯ ಮೆಟ್ಟಲು ಹತ್ತಲು ಸನ್ನದ್ಧರಾಗಿದ್ದಾರೆ. ಮೇ 30ರಂದು ಮಕ್ಕಳು ಶಾಲೆಗೆ ಹಾಜರಾಗಬೇಕಾಗಿದೆ. ಅಂದು ಅರ್ಧ ದಿನವಾದರೂ ‘ಹಾಜರಾತಿ’ ಇದೆ. ಮೇ 31ರಂದು ವಾರದ ರಜೆಯಾಗಿದೆ. ಜೂ.1ರಂದು ಶಾಲೆಗಳಲ್ಲಿ ‘ಪ್ರಾರಂಭೋತ್ಸವ’ ನಡೆಯಲಿದೆ.

ಬೇಸಿಗೆ ರಜೆಯ ಹಿನ್ನ್ನೆಲೆಯಲ್ಲಿ ಒಂದೂವರೆ ತಿಂಗಳ ಕಾಲ ಶಾಲೆಗಳ ಮುಚ್ಚಲ್ಪಟ್ಟ ಬಾಗಿಲನ್ನು ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಮೇ 30ರ ಶನಿವಾರ ತೆರೆದು, ಬೆಂಚು-ಡೆಸ್ಕ್‌ಗಳಲ್ಲಿ ತುಂಬಿದ್ದ ಧೂಳನ್ನು ಒರೆಸಿ, ನೆಲ ಗುಡಿಸಿ, ಒರೆಸಿ, ಬೆಂಚು-ಡೆಸ್ಕ್‌ಗಳನ್ನು ಜೋಡಿಸಿಟ್ಟು ಸಿದ್ಧತೆ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಅಂದೇ ಮಕ್ಕಳು ಹಾಜರಾಗುವುದರಿಂದ ‘ಶ್ರಮದಾನ’ ಮಾಡು ವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇನ್ನು ಗುರುವಾರ ಮತ್ತು ಶುಕ್ರವಾರ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕ-ಸಿಬ್ಬಂದಿ ವರ್ಗ ಮೇ 30ರ ಶನಿವಾರ ಶಾಲೆಗೆ ಹಾಜರಾಗುವುದು

ಹೇಗೆ ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆಯಲ್ಲಿ ಉತ್ತರವಿಲ್ಲ. ಶಾಲಾ ಪ್ರಾರಂಭೋತ್ಸವ:
ಮೇ 30ರಂದು ಮಕ್ಕಳು ಶಾಲೆಗೆ ಹಾಜರಾದರೂ ಕೂಡ ಅಂದು ಮಕ್ಕಳನ್ನು ಸ್ವಾಗತಿಸುವವರಿಲ್ಲ. ಬಿಸಿಯೂಟವೂ ಇಲ್ಲ. ಜೂ.1ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಅಂದು ಶಾಲೆಗೆ ಆಗಮಿಸುವ ಮಕ್ಕಳನ್ನು ಪ್ರೀತಿ-ಆದರದಿಂದ ಸ್ವಾಗತಿಸುವ ಕಾರ್ಯಕ್ರಮವಿದೆ. ಅದಕ್ಕಾಗಿ ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದು, ಸಂಘ-ಸಂಸ್ಥೆಗಳ ಮುಖಂಡರಿಗೂ ಆಹ್ವಾನ ನೀಡಿದ್ದಾರೆ. ಗ್ರಾ.ಪಂ.ನೀತಿ ಸಂಹಿತೆಯು ಜೂ.7ರವರೆಗೆ ಜಾರಿಯಲ್ಲಿರುವುದರಿಂದ ಸ್ಥಳೀಯ ಜನಪ್ರತಿನಿಧಿ ಗಳು ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳು ವುದಕ್ಕೆ ತೊಡಕಾಗಲಿದೆ. ಪಾಲ್ಗೊಂಡರೂ ಭಾಷಣ ಮಾಡುವುದಕ್ಕೆ ಅವಕಾಶವಿಲ್ಲ.

ಬಿಸಿಯೂಟ ಪ್ರಕ್ರಿಯೆ ಜೂ.1ರಿಂದಲೇ ಆರಂಭಗೊಳ್ಳಲಿದ್ದರೂ ಕೂಡ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ದಾನಿಗಳ ನೆರವಿನಿಂದ ಬಹುತೇಕ ಶಾಲೆಗಳಲ್ಲಿ ಸಿಹಿತಿಂಡಿ ಅಥವಾ ಬೆಲ್ಲದ ಗಂಜಿ ನೀಡಲು ಯೋಜನೆ ರೂಪಿಸಲಾಗಿದೆ.

ತನ್ಮಧ್ಯೆ ಶಾಲೆಗಳ ದ್ವಾರ-ಬಾಗಿಲುಗಳನ್ನು ತಳಿರು ತೋರಣ, ಬಣ್ಣದ ಕಾಗದಗಗಳಿಂದ ಸಿಂಗರಿಸಲಾಗುತ್ತದೆ. ಅದಲ್ಲದೆ ಒಂದನೆ ತರಗತಿಗೆ ಸೇಪರ್ಡೆಗೊಳ್ಳುವ ಎಳೆಯ ಮಕ್ಕಳನ್ನು ಹಿರಿಯ ಮಕ್ಕಳು ವಿಶೇಷ ಅತಿಥಿ ಎಂಬಂತೆ ಕಂಡು ಅವರನ್ನು ಪ್ರೀತಿ- ಆದರದಿಂದ ಬರಮಾಡಿಕೊಂಡು, ಅವರಲ್ಲಿ ಹುದುಗಿರುವ ಭಯ ಹೋಗಲಾಡಿಸುವ ಪ್ರಯತ್ನವೂ ನಡೆಯಲಿದೆ. ಹೊಸ ಮಕ್ಕಳ ಸೇರ್ಪಡೆ, ವಿದ್ಯಾರ್ಥಿಗಳ ಗುರುತು ಪರಿಚಯ ಮಾಡಿಸುವಿಕೆ, ಹೆತ್ತವರ ಜತೆ ಶಿಕ್ಷಕರ ಮಾಲೋಚನೆ, ಮಕ್ಕಳಿಗೆ ಒಂದಷ್ಟು ಹಿತವಚನ ನೀಡುವ ಪ್ರಕ್ರಿಯೆಯೂ ಜೂ.1ರಂದು ನಡೆಯಲಿದೆ.

ಸಿದ್ಧತೆ ಪೂರ್ಣ: ಶಾಲೆಗಳ ಪುನರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಶೇ. 95ರಷ್ಟು ಶಾಲೆಗಳಿಗೆ ಪಠ್ಯಪುಸ್ತಕ ರವಾನೆಯಾಗಿದೆ. ಜೂ.1ರಂದು ಅವುಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ. ಇನ್ನು ಅದೇ ದಿನ ಬಿಸಿಯೂಟ ಮತ್ತು ಕ್ಷೀರ ಭಾಗ್ಯವೂ ಮಕ್ಕಳಿಗೆ ಲಭಿಸಲಿದೆ. ಸಮವಸ್ತ್ರ ಮತ್ತು ಬೈಸಿಕಲ್ ವಿತರಣೆ ಸ್ವಲ್ಪ ತಡವಾಗಲಿದೆ ಎಂದು ಡಿಡಿಪಿಐ ವಾಲ್ಟರ್ ಡಿಮೆಲ್ಲೋ ತಿಳಿಸಿದ್ದಾರೆ.
ಪಠ್ಯಪುಸ್ತಕ ರವಾನೆ: 2015-16 ಸಾಲಿನಲ್ಲಿ 1ರಿಂದ 10ನೆ ತರಗತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು 16,72,513 ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿತ್ತು. ಆ ಪೈಕಿ 15,92,344 ಪಠ್ಯ ಪುಸ್ತಕಗಳನ್ನು ಸರಕಾರ ಪೂರೈಕೆ ಮಾಡಿದೆ. ಅಂದರೆ ಶೇ 95ರಷ್ಟು ಪಠ್ಯಪುಸ್ತಕ ರವಾನೆಯಾದಂತಾಗಿದೆ. ಸರಕಾರ ಸರಬರಾಜು ಮಾಡಿದ ಎಲ್ಲ ಪಠ್ಯಪುಸ್ತಕಗಳನ್ನು ಮೇರಿಹಿಲ್‌ನಲ್ಲಿರುವ ಪುಸ್ತಕ ಮಳಿಗೆಯಲ್ಲಿರಿಸಲಾಗಿತ್ತು. ಅದನ್ನು ಆಯಾ ತಾಲೂಕಿನ ಬಿಇಓ ಮುಖಾಂತರ ಕಳುಹಿಸಿಕೊಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ವಿಶಿಷ್ಟ ರೀತಿಯಲ್ಲಿ ಉತ್ಸವ: ಪುತ್ತೂರು ತಾಲೂಕಿನಲ್ಲಿ 4 ಹೋಬಳಿಗಳಿವೆ. ಆ ಪೈಕಿ ಪ್ರತಿಯೊಂದು ಹೋಬಳಿಯ ಆಯ್ದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಅದ್ದೂರಿಯ ಪ್ರಾರಂಭೋತ್ಸವ ಮಾಡಲಾಗುವುದು ಎಂದು ಪುತ್ತೂರು ಬಿಇಒ ಜಿ.ಎಸ್.ಶಶಿಧರ ತಿಳಿಸಿದ್ದಾರೆ.

Write A Comment