ಕುಂದಾಪುರ: ಸೋಮವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ದೇವಿಯ ಜನ್ಮಾಷ್ಮಮಿ ಆಚರಣೆಯ ಸಂಭ್ರಮ. ಪ್ರತಿವರ್ಷ ಈ ಜನ್ಮಾಷ್ಟಮಿ ಸಂದರ್ಭದಲ್ಲಿ ಹೊಸನಗರದ ಶ್ರೀ ರಾಮಚಂದ್ರಪುರದ ರಾಘವೇಶ್ವರ ಸ್ವಾಮೀಜಿಯವರು ಆಗಮಿಸಿ ಶ್ರೀ ದೇವಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆದರೇ ಈ ಬಾರೀ ಮಾತ್ರ ರಾಘವೇಶ್ವರ ಶ್ರೀಗಳು ದೇವಸ್ಥಾನಕ್ಕೆ ಬರಲಿಲ್ಲ. ಅವರ ಅನುಪಸ್ಥಿತಿ ನಡುವೆಯೇ ಪೂಜಾ ಕೈಂಕರ್ಯಗಳು ಸಾಂಗವಾಗಿ ದೇವಳದಲ್ಲಿ ನಡೆಯಿತು. ಸರಕಾರದ ಆದೇಶದಂತೆ ಸ್ವಾಮೀಜಿ ಮಾತ್ರ ದೇವಸ್ಥಾನಕ್ಕೆ ಬರದೇ ಇದ್ದು ಭಕ್ತ ವಲಯದಲ್ಲಿ ಕೆಲ ಗೊಂದಲಕ್ಕೂ ಕಾರಣವಾಯಿತು. ಜನ್ಮಾಷ್ಟಮಿ ಸಂಭ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಘೊಂಡು ಶ್ರೀ ದೇವರ ದರ್ಶನ ಪಡೆದರು.
ಏನಿದು ವಿವಾದ ?: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಪೂಜೆ ಹಾಗೂ ಧಾರ್ಮಿಕ ವಿಚಾರಗಳಿಗೆ ಮಾರ್ಗದರ್ಶನ ನೀಡುವ ಧರ್ಮಾಚಾರ್ಯರು ಹೊಸನಗರದ ಶ್ರೀ ರಾಮಚಂದ್ರಪುರದ ಯತಿಗಳು ಎನ್ನುವ ನೆಲೆಯಲ್ಲಿ ಸ್ಥಳೀಯ ಅರ್ಚಕರ ಮನವಿಯ ಮೇರೆಗೆ 2006 ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಪ್ರತಿ ವರ್ಷದ ಶ್ರೀ ದೇವಿಯ ಜನ್ಮಾಷ್ಮಮಿಯಂದು ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜೊತೆಯಲ್ಲಿ ಸ್ವಾಮೀಜಿಯವರಿಗೆ ಅಧಿವಾಸ ಪೂಜೆ, ಸ್ಥಪನಾ ಕಲಾಶಾಭೀಷೆಕ ಪೂಜೆಗಳನ್ನು ನೆರವೇರಿಸಲು, ಪಾದಪೂಜೆ ಹಾಗೂ ಭೀಕ್ಷೆ ನೀಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದರು. ಇದರಂತೆ 2006 ರಿಂದ ನಿರಂತರವಾಗಿ ಜನ್ಮಾಷ್ಟಮಿಯಂದು ಕ್ಷೇತ್ರಕ್ಕೆ ಆಗಮಿಸುವ ಶ್ರೀಗಳ ಉಪಸ್ಥಿತಿಯಲ್ಲಿ ಈ ಕಾರ್ಯಗಳನ್ನು ಮಾಡಲಾಗುತ್ತಿತ್ತು.
ಸರ್ಕಾರದ ಈ ಆದೇಶದ ವಿರುದ್ದ ರಾಜ್ಯದ ಪ್ರಮುಖ ಮಠದ ಪ್ರಮುಖರು ಸೇರಿ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಈ ಪೂಜಾ ಪದ್ದತಿಯ ಕುರಿತಂತೆ ಆದೇಶ ಹೊರಡಿಸಿದ್ದ ಸರ್ಕಾರ 2005 ಕ್ಕಿಂತ ಮೊದಲು ದೇವಸ್ಥಾನದಲ್ಲಿ ನಡೆಸಿಕೊಂಡು ಬಂದಿರುವ ಪೂಜಾ ಕ್ರಮವನ್ನು ಅನುಸರಿಸಲು ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಈ ಬಾರಿಯ ಜನ್ಮಾಷ್ಮಮಿಯ ಪೂಜೆಗಾಗಿ ಶ್ರೀಗಳಿಗೆ ದೇವಸ್ಥಾನದ ವತಿಯಿಂದ ಆಮಂತ್ರಣ ನೀಡಿರಲಿಲ್ಲ. ಇದೇ ಕಾರಣಕ್ಕೋ ಏನೋ ಎಂಬಂತೆ ಶ್ರೀಗಳು ಸೋಮವಾರದ ಪೂಜೆಗೆ ಬಂದಿರಲಿಲ್ಲ.
ನ್ಯಾಯಾಲಯದ ಮೆಟ್ಟಿಲೇರಿದ ವಿವಾದ : ಪೂಜೆಗೆ ನಿರ್ಭಂಧ ಮಾಡದಂತೆ ಆದೇಶ ನೀಡುವಂತೆ ಕೋರಿ ದೇವಸ್ಥಾನದ ಅರ್ಚಕ ಶ್ರೀಧರ ಅಡಿಗ ಅವರು ರಜಾಕಾಲದ ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಸ್ವಾಮೀಜಿಗೆ ಪೂಜೆಯ ನಿರ್ಭಂಧ ಮಾಡದಂತೆ ಶನಿವಾರ ಆದೇಶ ಹೊರಡಿಸಿತ್ತು. ಆದರೇ ಉಚ್ಚ ನ್ಯಾಯಾಲಯದ ನಡೆ ಹಾಗೂ ಸರ್ಕಾರದ ಆದೇಶಗಳ ಕಾರಣಗಳಿಂದಾಗಿ ಈ ಬಾರಿಯ ಜನ್ಮಾಷ್ಮಮಿಯಂದು ಸ್ವಾಮೀಜಿ ಪೂಜೆ ಸಲ್ಲಿಸಲಿಲ್ಲ. ಸರ್ಕಾರದ ಆದೇಶದ ವಿರುದ್ದ ಮಠದ ಭಕ್ತರೊಬ್ಬರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಪೀಠ ಅರ್ಜಿದಾರರ ಹಿತಾಸಕ್ತಿಯನ್ನು ಪ್ರಶ್ನಿಸಿದ್ದಲ್ಲದೆ, ಅವಶ್ಯಕತೆ ಇದ್ದರೆ ಸ್ವಾಮೀಜಿವರೆ ಈ ಆದೇಶ ಪ್ರಶ್ನಿಸಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಾಸು ಪಡೆದಿದ್ದರು.
ದೇವಸ್ಥಾನದ ಅರ್ಚಕರಾದ ಶ್ರೀಧರ ಅಡಿಗ ಎನ್ನುವವರು ರಜಾಕಾಲದ ಉಡುಪಿ ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ 2006 ರಿಂದ ನಡೆದುಕೊಳ್ಳುವ ಪದ್ದತಿಯ ವಿರುದ್ದ ನಿಲುವನ್ನು ತೋರಿಸುತ್ತಿದೆ ಹಾಗೂ ಜನ್ಮಾಷ್ಟಮಿ ಪೂಜೆಗೆ ಅಡಚಣೆ ಮಾಡದಂತೆ ಸೂಚನೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿ ಪ್ರತಿಬಂಧಕಾಜ್ಞೆ ನೀಡಿದ್ದ ನ್ಯಾಯಾಲಯ ಪೂಜೆಗೆ ಅಡಚಣೆ ಮಾಡದಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಅವರಿಗೆ ಆದೇಶದಲ್ಲಿ ಸೂಚಿಸಿತ್ತು.
ಬಿಗು ಬಂದೋಬಸ್ತ್: ವಿವಾದಿತ ಸ್ವಾಮೀಜಿಯಾಗಿರುವ ಶ್ರೀ ರಾಘವೇಶ್ವರರು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸುವ ಬಗ್ಗೆ ಹಲವು ಗೊಂದಲಗಳಿದ್ದ ಕಾರಣ ದೇವಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿತ್ತು.





















