ಕನ್ನಡ ವಾರ್ತೆಗಳು

ಪಿಲಿಕುಳದಲ್ಲಿ ವಸಂತೋತ್ಸವ-2015 – ಕಣ್ಮನ ಸೆಳೆದ ಹಣ್ಣು ಹಂಪಲುಗಳ ಪ್ರದರ್ಶನ

Pinterest LinkedIn Tumblr

Pilikula_Vasantotsava_1

ಮಂಗಳೂರು, ಮೇ.25: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಪ್ರವಾಸೋದ್ಯಮ, ತೋಟಗಾರಿಕಾ, ಅರಣ್ಯ ಇಲಾಖೆ ಮತ್ತು ಕಲ್ಕೂರಾ ಪ್ರತಿಷ್ಠಾನ ಹಾಗೂ ಸ್ವಾವಲಂಬಿ ಬಳಗದ ಸಹಯೋಗದಲ್ಲಿ ರವಿವಾರ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಮುಂಭಾಗ ಆಯೋಜಿಸಿದ ‘ಪಿಲಿಕುಳ ವಸಂತೋತ್ಸವ-2015’ ಕಾರ್ಯಕ್ರಮ ಕಣ್ಮನ ಸೆಳೆಯಿತು. ರುದ್ರಾಕ್ಷಿ ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಪದ್ಮಶ್ರೀ ಪ್ರಶಸ್ತಿ ವಿಜೇತ ಕೃಷಿ ವಿಜ್ಞಾನಿ, ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಪ್ರೈ.ಲಿ.ನ ಅಧ್ಯಕ್ಷ ಸಡಾ.ಮನಮೋಹನ ಅತ್ತಾವರ ‘ವಸಂತೋತ್ಸವ’ವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿ ತರಕಾರಿ, ಹಣ್ಣು ಹಂಪಲು ಸಹಿತ ಕೃಷಿ ಚಟುವಟಿಕೆಗೆ ಸಾಕಷ್ಟು ಅವಕಾಶವಿರುವುದರಿಂದ ರೈತನಿಗೆ ಉತ್ತಮ ಭವಿಷ್ಯವಿದೆ. ಆದರೆ ಮಾರುಕಟ್ಟೆ ದೊಡ್ಡ ಸಮಸೆಯಾಗಿದೆ. ಕೃಷಿಕ ಬೆಳೆದ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿದರೆ ಪ್ರಗತಿ ಸಾಧ್ಯ. ಸರಕಾರ ಕೃಷಿಗೆ ಆದ್ಯತೆ ನೀಡಬೇಕು. ಸಬ್ಸಿಡಿ ಹೆಚ್ಚಿಸಬೇಕು ಎಂದರು.

Pilikula_Vasantotsava_2 Pilikula_Vasantotsava_3 Pilikula_Vasantotsava_4 Pilikula_Vasantotsava_5

ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಸಸ್ಯ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಮತ್ತು ಅವುಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನತೆಯ ಉತ್ಸಾಹ ಕಂಡು ನಮಗೂ ವಿಶಿಷ್ಟ ರೀತಿಯ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮನಸ್ಸಾಗಿದೆ. ಮುಂದಿನ ದಿನಗಳಲ್ಲಿ ವಾರದ ಸಂತೆಗಳ ಮಾದರಿಯಲ್ಲಿ ಜನಾಕರ್ಷಣೆಯ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಪಿಲಿಕುಳ ಸಸ್ಯರಾಶಿ ಉಪ ಸಮಿತಿ ಅಧ್ಯಕ್ಷ ಡಾ.ಚಂದ್ರಶೇಖರ ಚೌಟ,ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮಾ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ರಾವ್, ಪಿಲಿಕುಳ ವನ್ಯಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಬ್ಬಯ್ಯ ಶೆಟ್ಟಿ, ಕೊಂಕಣಿ ಅಕಾಡಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು.

ಸುಮಾರು 70 ಮಳಿಗೆಗಳಲ್ಲಿ ಕಾಣಿಸಿಕೊಂಡ ಹಣ್ಣು-ಹಂಪಲು ಗಳನ್ನು ಸಾವಿರಾರು ಮಂದಿ ವೀಕ್ಷಿಸಿ ಸಂತಸಪಟ್ಟರು. ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಿಂದು- ಪೇಯಗಳನ್ನು ಕುಡಿದರಲ್ಲದೆ, ನೂರಾರು ತಳಿಯ ಗಿಡಗಳು, ಹಣ್ಣು ಹಂಪಲುಗಳನ್ನು ಖರೀದಿಸಿ ಖುಷಿಪಟ್ಟರು. ಸಂಜೆಯ ವೇಳೆಗೆ ಹಣ್ಣು ಹಂಪಲುಗಳನ್ನು ‘ಏಲಂ’ (ಹರಾಜು) ಕೂಗಿ ಮಾರಾಟ ಮಾಡಲಾಯಿತು.

Pilikula_Vasantotsava_6 Pilikula_Vasantotsava_7 Pilikula_Vasantotsava_8

ಕಳೆದ ವಾರ ಪಿಲಿಕುಳದಲ್ಲಿ ನಡೆದ ‘ಮತ್ಸೋತ್ಸವ’ ಒಂದಷ್ಟು ಅವ್ಯವಸ್ಥೆ- ಅಸಮಾಧಾನಕ್ಕೆ ತುತ್ತಾಗಿದ್ದರೆ, ರವಿವಾರ ನಡೆದ ವಸಂತೋತ್ಸವ ಅಚ್ಚುಕಟ್ಟಾಗಿತ್ತು. ಯಾವುದೇ ಲೋಪ-ಸಮಸ್ಯೆ ಬಾರದಂತೆ ಸಂಘ ಟಕರು ಮುನ್ನೆಚ್ಚರಿಕೆ ವಹಿಸಿದ್ದರು.

ಮುಳಕ, ಗಟ್ಟಿ, ಗಾರಿಗೆ, ಪೋಡಿ, ಹಲಸಿನಕಾಯಿಯ ದೋಸೆ, ವಡೆ, ಪಾಯಸದಂತಹ ಹಲಸಿನ ಪಾರಂಪರಿಕ ಖಾದ್ಯಗಳು, ಚಿಪ್ಸ್, ಹಲ್ವ, ಶೀರ, ಕಬಾಬ್, ಮಂಚೂರಿ, ಬಿರಿಯಾನಿ, ಐಸ್‌ಕ್ರೀಂ, ಹಲಸಿನ ವೈನ್, ಹೋಳಿಗೆ, ಹಲಸಿನ ಜಿಲೇಬಿಯಂತಹ ಖಾದ್ಯಗಳು, ವಿವಿಧ ತಾಜಾ ಹಣ್ಣುಗಳ ಪಾನೀಯ, ತಾಜಾ ಮಾವಿನಹಣ್ಣುಗಳು, ಅನ ನಾಸು, ಪಪ್ಪಾಯಿ, ಬಾಳೆಹಣ್ಣು, ಎಳೆನೀರು, ಮಾವು, ಹಲಸು, ಚಾಕ್ಲೆಟ್‌ನ ಐಸ್‌ಕ್ರೀಂಗಳು, ತಾರಸಿ ತೋಟದ ಗ್ರೋಬ್ಯಾಗ್‌ನಲ್ಲಿ ಬೆಳೆಸಿದ 5.300 ಕೆ.ಜಿ. ತೂಕದ ಮರಗೆಣಸು, ಕುಶಲ ಕರ್ಮಿ ಗ್ರಾಮ ಉತ್ಪನ್ನಗಳಾದ ಬೆತ್ತದ ಕುರ್ಚಿ, ಮುಟ್ಟಾಳೆ, ಪಿಲಿಕುಳ ಸಾವಯವ ಎರೆಗೊಬ್ಬರಗಳ ಮಾರಾಟ -ಪ್ರದರ್ಶನ ಕಂಡುಬಂತು.

ಉಪ್ಪಾಗೆ (ಮಂಥು ಹುಳಿ), ಪುನರ್ಪುಳಿ, ಜಾರಿಗೆ, ಎಸಲ್‌ಪುಳಿ, ನೇರಳೆ, ಅಂಕೋಲೆ, ತಾಳೆಹಣ್ಣು, ಪೆಜಕಾಯಿ, ನಾಡಿ ಇಂಗು, ಕೇಪುಳ, ನಾಕೋಟ ಕಾಯಿಯಂತಹ ಕಾಡು ತ್ಪತ್ತಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ಇದ್ದವು.

ಆಯುರ್ವೇದ ಕಚ್ಚಾವಸ್ತುಗ ಳಾದ ಬೇರು, ತೊಗಟೆ, ತಿರುಳು, ಬೀಜ, ಎಲೆ, ಒಣಗಿದ ಹೂ, ಕಾಡಿನ ಗೆಡ್ಡೆಗಳು, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳಲ್ಲದೆ ಸ್ವಾವಲಂಬಿ ನಿತ್ಯ ಗೃಹವಸ್ತುಗಳು, ಬಟ್ಟೆ ಬರೆ, ಸಿಹಿ ತಿಂಡಿ, ವಿವಿಧ ರೀತಿಯ ತರಕಾರಿ ಮತ್ತು ಹಣ್ಣಿನ ಬೀಜಗಳು, ಶ್ರೀಗಂಧ, ತೇಗ ಇತ್ಯಾದಿ ಸಸಿಗಳು, ಫ್ಯಾನ್ಸಿ ಐಟಂಗಳು ಕೂಡ ಕಂಡು ಬಂತು.

Pilikula_Vasantotsava_9 Pilikula_Vasantotsava_10 Pilikula_Vasantotsava_11 Pilikula_Vasantotsava_12 Pilikula_Vasantotsava_13

ಜಂಬುನೇರಳೆ, ಕರಂಡೆ ಕಾಯಿ, ಎಗ್ಗ್ ಪ್ರೂಟ್, ತೇಜಿ ಪೇರಳೆ, ಮಂಥು ಹುಳಿ, ಬಾಂಗ್ಲಾ ಬಸಳೆ, ನೀರಾ ಶುಗರ್, ಒಣಗಿಸಿದ ಉಪ್ಪು ಹಾಕಿದ ಹಲಸಿನ ಸೊಳೆ, ರಾಂಬೂಟಾನ್, ಕಾಡು ಮಾವು, ಆಸ್ಟಿನ್ ಮಾವು, ಸೋರಾ ಮಾವು, ರುದ್ರಾಕ್ಷಿ ಹಲಸು, ಹೆಬ್ಬಲಸು, ಹೀಗೆ ನೂರಾರು ಬಗೆಯ ತಿಂಡಿ- ತಿನಿಸು- ಹಣ್ಣು- ಹಂಪಲುಗಳು ಗಮನ ಸೆಳೆದವು.

ವಸಂತೋತ್ಸವದ ಮಧ್ಯೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮೀನುಗಳನ್ನು ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡಿತಲ್ಲದೆ, ಸ್ಥಳದಲ್ಲೇ ಮೀನಿನ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿತು.

ಕಾರ್ಯಕ್ರಮದಲ್ಲಿ ಜಯಶ್ರೀ ಅರವಿಂದ ಬಳಗದಿಂದ ವಸಂತ ಋುತುಗಾನ ಸಂಭ್ರಮವೂ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು. ಸ್ವರೂಪ ಅಧ್ಯಯನ ಕೇಂದ್ರ ದಿಂದ ತರಬೇತುಗೊಂಡ ಮಕ್ಕಳು ಅಲ್ಲಲ್ಲಿ ಕಸ ಹಾಕುವವರನ್ನು ಎಚ್ಚರಿ ಸುವ ಸಲುವಾಗಿ ಕಿರುಚುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ‘ವಸಂತೋತ್ಸವ’ದಲ್ಲಿ ಮಾಡಿದರು. ಸಸ್ಯ-ಹಣ್ಣು ಹಂಪಲುಗಳಿಗೆ ಸಂಬಂಧಿಸಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯ ಕ್ರಮವೂ ನಡೆಯಿತು. ವಿಜೇತರಿಗೆ ಹಣ್ಣುಹಂಪಲುಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ ವಸಂತೋತ್ಸವ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

Write A Comment