ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನ ಹಿಂದೆಯೇ ಅದಕ್ಕೆ ಕಾರಣವಾಗಿರುವ ಕಟು ಸತ್ಯವೊಂದು ಸಂಶೋಧನೆಯ ಮೂಲಕ ಬಯಲಾಗಿದೆ.
ಹೌದು. ಆತ್ಮಹತ್ಯೆಗೆ ಶರಣಾಗುವ ಪ್ರತಿ ಐವರಲ್ಲಿ ಒಬ್ಬರು ನಿರುದ್ಯೋಗದಿಂದ ಬೇಸತ್ತು ಈ ಕೃತ್ಯ ಎಸಗುತ್ತಾರೆ ಎಂಬ ಆತಂಕಕಾರಿ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿರುವ ಜ್ಯೂರಿಚ್ ವಿವಿಯ ಕಾರ್ಲೋಸ್ ನೊರ್ಡಾ ಸುಮಾರು 63 ದೇಶಗಳಲ್ಲಿ 2000 ದಿಂದ 2011 ರವರೆಗೆ ಸಮೀಕ್ಷೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಆತ್ಮಹತ್ಯೆಗೆ ಮುಖ್ಯ ಕಾರಣ ನಿರುದ್ಯೋಗ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ತಮ್ಮ ಸಂಶೋಧನೆಗೆ ಉತ್ತರ ಮತ್ತು ದಕ್ಷಿಣ ಅಮೆರಿಕ, ಉತ್ತರ ಮತ್ತು ಪಶ್ಚಿಮ ಯುರೋಪ್, ದಕ್ಷಿಣ ಮತ್ತು ಪೂರ್ವ ಯುರೋಪ್ ಮತ್ತು ಅಮೆರಿಕ ಹೊರತಾದ ಹಾಗೂ ಯುರೋಪ್ ಹೊರತಾದ ರಾಷ್ಟ್ರಗಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದ ಕಾರ್ಲೋಸ್ ನೊರ್ಡಾ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ಚೀನಾಗಳಲ್ಲಿ ಯಾವುದೇ ದತ್ತಾಂಶ ಪಡೆಯಲು ವಿಫಲರಾಗಿದ್ದಾರೆ.
ಆದರೂ ಈ ನಾಲ್ಕೂ ವಲಯಗಳಲ್ಲೂ ಆತ್ಮಹತ್ಯೆ ಮತ್ತು ನಿರುದ್ಯೋಗದ ನಡುವೆ ಗಾಢವಾದ ಸಂಬಂಧವಿತ್ತು ಎಂದಿರುವ ನೊರ್ಡಾ, ಹೆಚ್ಚುತ್ತಿರುವ ನಿರುದ್ಯೋಗದ ದರ ವಿಭಿನ್ನ ವಯೋಮಾನ ಮತ್ತು ಲಿಂಗದವರ ಮೇಲೆ ಒಂದೇ ಬಗೆಯ ಪರಿಣಾಮ ಬೀರಿದ್ದು ಜಾಗತಿಕ ಆರ್ಥಿಕ ಹಿಂಜರಿತ ಕಂಡ 2008ರಲ್ಲಿ ಸಂಭವಿಸಿದ 46 ಸಾವಿರ ಆತ್ಮಹತ್ಯೆ ಪ್ರಕರಣಗಳು ನಿರುದ್ಯೋಗದ ಕಾರಣದಿಂದ ಎಂದು ವಿವರಿಸಿದ್ದಾರೆ.
