ಮಂಗಳೂರು,ಮೇ.23 : ಅಂತರ್ ಧರ್ಮೀಯ ವಿವಾಹವಾಗಿದ್ದ ನಗರದ ದಂಪತಿಗೆ ರಕ್ಷಣೆ ನೀಡಬೇಕೆಂದು ಹೈಕೋರ್ಟ್ ಪೊಲೀಸರಿಗೆ ಆದೇಶ ಮಾಡಿದೆ. ಕಳೆದ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಬಸ್ ನಿರ್ವಾಹಕನಾಗಿರೊ ಹಿಂದೂ ಯುವಕನೊರ್ವ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇವರ ಮದುವೆ ಯುವತಿಯ ಮನೆಯವರಿಗೆ ಇಷ್ಟವಿರಲಿಲ್ಲ. ಯುವತಿಯ ಮನೆಯವರು ತಮ್ಮ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ದೂರಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯುವಕ ರಕ್ಷಣೆ ಕೋರಿದ್ದ .
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ. ಎಸ್. ವೇಣುಗೋಪಾಲ ಗೌಡ ತೀರ್ಪು ನೀಡಿದ್ದಾರೆ. ಹುಡುಗಿಗೆ ಈಗಾಗಲೇ 18 ವರ್ಷ ವಯಸ್ಸಾಗಿದೆ. ಆಕೆಗೆ ಬೇಕಾದ ವರನನ್ನು ಮದುವೆಯಾಗುವ ಹಕ್ಕು ಆಕೆಗಿದೆ. ಅಂತರ್ ಧರ್ಮೀಯ ವಿವಾಹವನ್ನು ದೇಶದ ಯಾವುದೇ ಕಾನೂನು ನಿಷೇಧಿಸಿಲ್ಲ. ಹಾಗಾಗಿ ಇವರಿಬ್ಬರ ಮದುವೆ ಸಿಂಧುವಾಗಿದ್ದು, ಇವರಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ ಎಂದು ಆದೇಶ ನೀಡಿದ್ದಾರೆ.
ಅಲ್ಲದೇ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಅನ್ನು ರದ್ದುಗೊಳಿಸುವಂತೆಯೂ ಹೈಕೋರ್ಟ್ ಆದೇಶಿಸಿದೆ. ಅಂತರ್ಜಾತಿ ವಿವಾಹವಾಗುವವರಿಗೆ ಯಾರಿಂದಲೂ ತೊಂದರೆಯಾಗಬಾರದು. ಅವರಿಗೆ ಹಿಂಸೆ ನೀಡುವವರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮಕೈಗೊಳ್ಳಬೇಕೆಂದು ನ್ಯಾಯಮೂರ್ತಿ ಎ. ಎಸ್. ವೇಣುಗೋಪಾಲ ಗೌಡ ಆದೇಶಿಸಿದ್ದಾರೆ.