ಕನ್ನಡ ವಾರ್ತೆಗಳು

ಅಸುರಕ್ಷಿತ ಕಲ್ಲಿನ ಕೋರೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಎಚ್ಚರಿಕೆ ಮಾತು.

Pinterest LinkedIn Tumblr

Dc_meeting_photo

ಮಂಗಳೂರು, ಮೇ 22: ದ.ಕ. ಜಿಲ್ಲಾದ್ಯಂತ ಮಳೆಗಾಲದ ಸಂದರ್ಭ ಅಸುರಕ್ಷಿತ ಕಲ್ಲಿನಕೋರೆಗಳಿಂದ ಯಾವುದೇ ರೀತಿಯಲ್ಲಿ ಪ್ರಾಣಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಸ್ಥಳೀಯ ತಾಲೂಕುಗಳ ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿಗಳ ಕರ್ತವ್ಯ. ಈ ಕಾರ್ಯದಲ್ಲಿ ನಿರ್ಲಕ್ಷ ವಹಿಸುವವರ ವಿರುದ್ಧ ಅಧಿಕಾರ ಪ್ರಯೋಗ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಎಚ್ಚರಿಸಿದ್ದಾರೆ.

ಮಳೆಗಾಲದ ಸಂದರ್ಭ ಸಂಭವಿಸುವ ಪ್ರಾಕೃತಿಕ ವಿಕೋಪ ಹಾಗೂ ಇತರ ಅನಾಹುತಗಳ ಕುರಿತು ಮುಂಜಾಗೃತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಅವರು ಈ ಎಚ್ಚರಿಕೆ ನೀಡಿದರು.

ಅಸುರಕ್ಷಿತ ಕಲ್ಲಿನ ಕೋರೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇ 7ರಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದರೂ, ಇಂದಿನ ಸಭೆಯಲ್ಲಿ ಅಧಿಕಾರಿಗಳ ಅಸಮರ್ಪಕ ಮಾಹಿತಿಯಿಂದ ಅತೃಪ್ತಗೊಂಡ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿಕೊಳ್ಳುವ ಮೂಲಕ ಕಲ್ಲಿನ ಕೋರೆಗಳು ಸುರಕ್ಷಿತ ವಾಗಿರುವುದನ್ನು ಖಾತರಿಪಡಿಸಬೇ ಕೆಂದು ಸೂಚಿಸಿದರು.

ಖಾಸಗಿಯವರ ಅಸುರಕ್ಷಿತ ಕಲ್ಲಿನ ಕೋರೆಗಳಿಗೆ ಅವರಿಂದಲೇ ಬೇಲಿ ಹಾಕುವ ಕಾರ್ಯ ಹಾಗೂ ಸೂಚನಾ ಫಲಕ ಅಳವಡಿಸುವ ಕಾರ್ಯದ ಜತೆಗೆ ಆಯಾ ತಾಲೂಕು ಕಚೇರಿಗಳಲ್ಲಿ ಆಯಾ ತಾಲೂಕುಗಳಲ್ಲಿ ಇರುವ ಖಾಸಗಿ, ಸರಕಾರಿ ಕಲ್ಲಿನಕೋರೆಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸಬೇಕು. ಈ ಮೂಲಕ ಒಂದು ವೇಳೆ ತಾಲೂಕಿನಲ್ಲಿ ಅನಧಿಕೃತ ಕಲ್ಲಿನ ಕೋರೆಗಳು ಕಾರ್ಯ ನಿರ್ವಹಿಸುತ್ತಿದ್ದರೆ ಸಾರ್ವಜನಿಕರಿಗೆ ದೂರು ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Write A Comment