ಕನ್ನಡ ವಾರ್ತೆಗಳು

80 ಲಕ್ಷ ರೂ. ಮೌಲ್ಯದ ಕೇಬಲ್ ಕಳವು : ನಾಲ್ಕು ಆರೋಪಿಗಳ ಬಂಧನ

Pinterest LinkedIn Tumblr

splogger-content-theft

ಮಂಗಳೂರು,ಮೇ.23 : ಸುರತ್ಕಲ್ ಹಾಗೂ ಬಜಪೆ ಪೊಲೀಸ್ ಠಾಣೆಯ ಎಂಆರ್‌ಪಿಎಲ್, ಒಎಂಪಿಎಲ್ ಹಾಗೂ ಇತರ ಕಂಪನಿಗಳಿಂದ ಕೋಟ್ಯಂತರ ರೂ. ಮೌಲ್ಯದ ಕೇಬಲ್ ಕಳವು ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆ ಶಾಂತಿಗುಡ್ಡೆ ನಿವಾಸಿ ಪ್ರೀತೇಶ್, ಕಾಟಿಪಳ್ಳ ಒಂದನೇ ಬ್ಲಾಕ್ ನಿವಾಸಿ ಜಗದೀಶ್, ಕಾಟಿಪಳ್ಳ 9ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಸಫ್ವಾನ್ ಹಾಗೂ ಬಾಳ ನಿವಾಸಿ ಕುಸುಮಾಕರ ಬಂಧಿತ ಆರೋಪಿಗಳು. ಪ್ರಸ್ತುತ ಇವರಿಂದ ಸುಮಾರು 80 ಲಕ್ಷ ರೂ. ಮೌಲ್ಯದ ಕೇಬಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಪ್ರೀತೇಶ್‌ನ ತಂದೆ ಎಂಆರ್‌ಪಿಎಲ್‌ನಲ್ಲಿ ಕ್ಯಾಂಟಿನ್ ನಡೆಸುತ್ತಿದ್ದು, ಪ್ರೀತೇಶ್ ಹೆಚ್ಚಾಗಿ ಅಲ್ಲೇ ಇರುತ್ತಿದ್ದ. ಜಗದೀಶ್ ಎಂಆರ್‌ಪಿಎಲ್‌ನಲ್ಲಿ ವೆಲ್ಡರ್ ಕೆಲಸ ಮಾಡುತ್ತಿದ್ದ. ಮೊಹಮ್ಮದ್ ಸಫ್ವಾನ್ ಗುಜುರಿ ವ್ಯಾಪಾರಿ, ಕುಸುಮಾಕರ ಚಾಲಕ ಕೆಲಸ ಮಾಡುತ್ತಿದ್ದ. ಸೆಕ್ಯೂರಿಟಿ ನಡೆಸುತ್ತಿರುವ ಸಿಬ್ಬಂದಿಗಳು ಕೂಡಾ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ.

ಕೇಬಲ್ ಕಳವು ಜಾಲ ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯಗಳಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಸುಮಾರು 1.50 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿದ್ಯುತ್ ಹರಿಸುವ ತಾಮ್ರದ ಕೇಬಲ್ ಕಳ್ಳರ ಪಾಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ತನಿಖೆ ಸಂದರ್ಭ ಕೇಬಲ್ ಕಳವು ಜಾಲ ವ್ಯಾಪಕವಾಗಿ ನಡೆದಿರುವುದು ಕಂಡು ಬಂದಿದೆ. ಒಟ್ಟು ಜಾಲದಲ್ಲಿ ಸುಮಾರು 10ಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿರುವ ಸುಳಿವು ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕದ್ದ ಕೇಬಲ್‌ಗಳನ್ನು ಖರೀದಿಸಿದ ವ್ಯಕ್ತಿಗಳ ಮೇಲೂ ಪ್ರಕರಣ ದಾಖಲಾಗಲಿದ್ದು, ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸುರತ್ಕಲ್ ಹಾಗೂ ಬಜಪೆ ಠಾಣೆ ವ್ಯಾಪ್ತಿಯಲ್ಲಿ ಈ ಕಳವು ನಡೆದಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಠಾಣೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ನಾಲ್ವರು ಆರೋಪಿಗಳನ್ನು ಸುರತ್ಕಲ್ ಠಾಣೆ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದ ಅನುಮತಿ ಮೇರೆಗೆ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಎಂಆರ್‌ಪಿಎಲ್ ಒಳಗಡೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಬಲ್ ಕಳವು ಜಾಲದ ತಂಡವೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

Write A Comment