ಕನ್ನಡ ವಾರ್ತೆಗಳು

ತೊಕ್ಕೊಟ್ಟು ಶಾಲಾ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ : ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಶಿಕ್ಷಣ ಸಂಸ್ಥೆಯನ್ನು ಮುಚ್ಚಲು ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

Musilm_protest_photo_1

ಮಂಗಳೂರು, ಮೇ.23: ತೊಕ್ಕೊಟ್ಟಿನ ಶಾಲಾ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ ತಾಳುತ್ತಿರುವ ಶಾಲಾಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ ಹಾಗೂ ಈ ಶಿಕ್ಷಣ ಸಂಸ್ಥೆಯನ್ನು ಮುಚ್ಚಿಸಲು ಆಗ್ರಹಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಿತು.

Musilm_protest_photo_2 Musilm_protest_photo_4

ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಸ್ಪಂದನೆ ಮಾಡಿದ್ದರೂ, ಸ್ಥಳೀಯ ಶಾಸಕರು ಗಂಭೀರವಾಗಿ ಪರಿಗಣಿಸಿಲ್ಲ. ಘಟನೆ ನಡೆದು 2 ತಿಂಗಳು ಕಳೆದಿದ್ದರೂ ಹೆಚ್ಚಿನ ಬೆಳವಣಿಗೆ ಆಗಿಲ್ಲ. ಈ ಬಗ್ಗೆ ಗಮನ ಸೆಳೆಯಲು ‘ಸಚಿವ’ರ ಬಳಿ ನಿಯೋಗ ತೆರಳಿದಾಗ ‘ಯಾವ ಶಾಲೆ? ಎಲ್ಲಿ ಅತ್ಯಾಚಾರ?’ ಎಂದು ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಎಂದು ಹೇಳಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ನ್ಯಾಯ ನೀಡಲು ಮುಂದಾದರೆ ‘ಕೋಮುವಾದಿ’ ಪಟ್ಟ ಸಿಗಬಹುದು ಅಥವಾ ಅಧಿಕಾರದ ಕುರ್ಚಿ ಅಲುಗಾಡಬಹುದು ಎಂಬ ಆತಂಕ ಸಚಿವರಿಗೆ ಕಾಡುತ್ತಿದೆ. ಒಂದು ವೇಳೆ ಅಧಿಕಾರದಲ್ಲಿ ಇಲ್ಲದೇ ಇದ್ದಿದ್ದರೆ ಇವರು ಇದೇ ಪ್ರಕರಣವನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದರೋ ಏನೋ ಎಂದರು.

Musilm_protest_photo_5 Musilm_protest_photo_6

ಬಾಲಕಿ ಬಡ ಕುಟುಂಬದಲ್ಲಿ ಹುಟ್ಟಿದ ಕಾರಣವೋ ಏನೋ ಸ್ಥಳೀಯ ಶಾಸಕರಿಗೆ ನ್ಯಾಯ ಕೊಡಿಸಲು ಮನಸ್ಸಿಲ್ಲ. ಕೇವಲ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಾಗ ಸರಕಾರವೇ ಬಾಲಕಿಯ ಪರವಾಗಿತ್ತು. ಆದರೆ, ತೊಕ್ಕೊಟ್ಟು ಬಳಿ ನಡೆದ ಈ ಪ್ರಕರಣದತ್ತ ಮುಖ್ಯಮಂತ್ರಿಯ ಗಮನ ಸೆಳೆಯುವಲ್ಲಿ ಶಾಸಕರು, ಸಚಿವರು ವಿಫಲರಾಗಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಆರೋಪಿಸಿದರು.

Musilm_protest_photo_7 Musilm_protest_photo_8

ವೇದಿಕೆಯಲ್ಲಿ ಇಮಾಮ್ ಕೌನ್ಸಿಲ್‌ನ ದ.ಕ.ಜಿಲ್ಲಾಧ್ಯಕ್ಷ ಜಾಫರ್ ಸಾದಿಕ್ ಫೈಝಿ, ಕೆಡುಕು ಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ನವಾಝ್ ಉಳ್ಳಾಲ, ರಿಯಾಝ್ ಫರಂಗಿಪೇಟೆ, ಹ್ಯೂಮನ್ ರೈಟ್ಸ್ ಫೆಡರೇಶನ್‌ನ ಮುಹಮ್ಮದ್ ಹನೀಫ್ ಯು., ಜಲೀಲ್ ಕೃಷ್ಣಾಪುರ, ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಸಯೀದ್ ಇಸ್ಮಾಯೀಲ್, ಯು.ಎನ್. ಬಾವಾ ಉಪಸ್ಥಿತರಿದ್ದರು.ಎಚ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ಸ್ವಾಗತಿಸಿದರು. ರಿಯಾಝ್ ಕಡಂಬು ನಿರೂಪಿಸಿದರು.

Musilm_protest_photo_9 Musilm_protest_photo_10 Musilm_protest_photo_3

ಪ್ರತಿಭಟನೆಯಲ್ಲಿ ಅಗ್ರಹಿಸಲಾದ ಪ್ರಮುಖ ಬೇಡಿಕೆಗಳು :

ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವುದರಿಂದ ಶಾಲೆಯನ್ನು ಮುಚ್ಚಿಸಿ ನ್ಯಾಯ ಒದಗಿಸಬೇಕು. /ನಿವೃತ್ತ ನ್ಯಾಯಾಧೀಶರಿಂದ ತ್ವರಿತ ನ್ಯಾಯಾಲಯದಲ್ಲಿ ತನಿಖೆ ನಡೆಸಬೇಕು. /ಪ್ರಕರಣದ ವೈದ್ಯಕೀಯ ವರದಿಯನ್ನು ಸೋರಿಕೆಗೊಳಿಸಿದ ಲೇಡಿಗೋಶನ್ ಆಸ್ಪತ್ರೆಯ /ವಿರುದ್ಧ ಶಿಸ್ತುಕ್ರಮ ಜರಗಿಸಬೇಕು. /ಶಾಲೆಯ ಮಾನ್ಯತೆಯನ್ನು ರದ್ದುಪಡಿಸಬೇಕು. /ದೌರ್ಜನ್ಯಕ್ಕೀಡಾದ ಬಾಲಕಿಗೆ ಪರಿಹಾರ ಘೋಷಿಸಬೇಕು. /ಶಾಲಾಡಳಿತ ಮಂಡಳಿ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂಬ ಪ್ರಮುಖ ಬೇಡಿಕೆಗಳು ಪ್ರತಿಭಟನೆಯಲ್ಲಿ ಕೇಳಿಬಂತು

Write A Comment