ಕೊನೆಗೂ ಸುಖಾಂತ್ಯವಾಯ್ತು ಮಾಂಗಲ್ಯಂ ತಂತುನಾನೆನಾ..!
ಕುಂದಾಪುರ: ಆ ಕಲ್ಯಾಣ ಮಂದಿರದಲ್ಲಿ ಗುರುವಾರ ಮದುವೆಯೊಂದರ ಸಂಭ್ರಮ. ಮಧ್ಯಾಹ್ನ ಮುಹೂರ್ತದ ಸಮಯದವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ನೆಂಟರಿಷ್ಟರು ಬಂಧು-ಮಿತ್ರರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಬಂದಿದ್ದರು. ಆ ಹೊತ್ತಿಗೆ ಆಗಮಿಸಿದ್ದಳು ನೋಡಿ ವರ ಮಹಾಶಯನ ಮೊದಲ ಪತ್ನಿ. ಅಲ್ಲಿಗೆ ಮದುವೆ ನಿಂತಿತ್ತು. ನಡೆಯಬೇಕಾಗಿದ್ದ ಅಚಾತುರ್ಯ ತಪ್ಪಿ ಹೋಗಿತ್ತು. ವರಮಹಾಶಯನ ಹಳೆ ಮದುವೆ ವಿಚಾರದ ಗುಟ್ಟು ರಟ್ಟಾಗಿತ್ತು, ಹೊಸ ಮದುವೆ ಮುರಿದು ಬಿದ್ದಿತ್ತು. ಆದ್ರೇ ಮದುವೆ ಹೆಣ್ಣಿನ ಕಥೆ ಏನಾಯಿತೆಂಬ ಇಂಟರೆಂಸ್ಟಿಂಗ್ ಸ್ಟೋರಿಯಿದು.
(ಶಂಕರ್ ಹಾಗೂ ಆತನ ಮೊದಲ ಪತ್ನಿ ಸರಸ್ವತಿ- ಫೈಲ್ ಫೋಟೋ)
(ದೇವೇಂದ್ರ ಹಾಗೂ ನಾಗೂರಿನ ಯುವತಿ- ಸತಿಪತಿಗಳಾದ ನೂತನ ಜೋಡಿ)
(ನಾಗೂರಿನ ಯುವತಿಯನ್ನು ವರಿಸಿದ ದೇವೇಂದ್ರ)
ಇಲ್ಲಿ ಕಂಗಾಲಾಗಿ ನಿಂತಿರುವ ಯುವತಿ ಬೆಂಗಳೂರು ಕನಕಪುರದ ಆರೋಹಳ್ಳಿ ಮೂಲದ ಸರಸ್ವತಿ. ಈ ಹಿಂದೆ ಗಾರ್ಮೇಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವಳಿಗೆ ಮಿಸ್ ಕಾಲ್ ಮೂಲಕ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಭೂಪನೇ ಕೋಟ ಸಮೀಪದ ಕಾರ್ತಟ್ಟು ನಿವಾಸಿ ಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ ಶಂಕರ್. ನಾಲ್ಕು ವರ್ಷಗಳ ಹಿಂದಿನ ಮೊಬೈಲ್ ಪರಿಚಯ ಪ್ರೇಮ ಪ್ರಣಯಕ್ಕೆ ತಿರುಗಿ ಕಳೆದ ವರ್ಷ ಬೆಂಗಳೂರಿನ ಬೋಳಾರೆ ಮುನೇಶ್ವರ ದೇವಸ್ಥಾನದಲ್ಲಿ ಸರಸ್ವತಿ ಸಂಬಂಧಿಕರ ಸಮಕ್ಷದಲ್ಲಿ ಸತಿಪತಿಯಾಗಿದ್ದರು. ಮಣಿಪಾಲದಲಿ ಕೆಲಸ ಮಾಡಿಕೊಂಡಿದ್ದ ಈ ಶಂಕರ ಆಗಾಗ್ಗೇ ಬೆಂಗಳುರಿಗೆ ಹೋಗಿ ಪತ್ನಿಯೊಂದಿಗೆ ಇದ್ದು ಬರುತ್ತಿದ್ದ. ಪತ್ನಿ ಈತನ ಫೋಷಕರ ಬಗೆ ಕೇಳಿದ್ದಗಲೆಲ್ಲಾ, ಈಗಲೇ ಮದುವೆ ವಿಚಾರ ತಿಳಿಸುವುದು ಬೇಡ ತಂದೆ ತಾಯಿಗೆ ಅನಾರೋಗ್ಯವಿದೆ ಎಂದೆಲ್ಲಾ ಕಥೆ ಹೆಣೆದಿದ್ದ. ಮನೆಯಲ್ಲೂ ಮದುವೆ ಬೇಡ ಎಂದೇ ಹೇಳಿಕೊಂಡು ಬಂದಿದ್ದ. ಆದರೇ ಮನೆಯವರು ನಾಗೂರಿನ ಯುವತಿಯೋರ್ವಳನ್ನು ಗೊತ್ತು ಮಾಡಿ ಮದುವೆ ನಿಶ್ಚಯಿಸಿ ಗುರುವಾರ ಮಣೂರಿನ ಕಲ್ಯಾಣ ಮಂದಿರದಲ್ಲಿ ಮದುವೆ ಫಿಕ್ಸ್ ಮಾಡಿದ್ರು.
ಇತ್ತ ಕಳೆದ ಮಾರ್ಚ್ 22 ರಂದು ಬೆಂಗಳುರಿಗೆ ಹೋಗಿದ್ದ ಶಂಕರ ತಾನೂ ಚೆನ್ನೈಗೆ ತೆರಳುತ್ತಿದ್ದು ಸ್ವಲ್ಪ ದಿನಗಳ ಕಾಲ ಸಿಗಲಾಗೊಲ್ಲ ಎಂದು ಬಂದಿದ್ದ. ಆದರೇ ಎರಡು ತಿಂಗಳಾದರೂ ಕೂಡ ಸರಸ್ವತಿಯನ್ನು ನೋಡಲು ಹೋಗದಿದ್ದಾಗ ಆಕೆಗೂ ಅನುಮಾನ ಬಂದಿದೆ. ಫೋನ್‌ನಲಿಯೂ ಹೆಚ್ಚು ಮಾತನಾಡದಿದ್ದಾಗ ಏನೋ ಸಮಸ್ಯೆಯಾಗಿದೆಯೆಂದುಕೊಂಡ ಈಕೆ ಕಳೆದ ಮೂರು ದಿನಗಳ ಹಿಂದೆ ಶಂಕರನ ಸ್ನೇಹಿತನಿಗೆ ಫೋನಾಯಿಸಿ ವಿಚಾರವೇನೇಂದು ಕೇಳಿದ್ದಾಳೆ. ಆಗಲೇ ಅಕೆಗೆ ಶಾಕ್ ಕಾದಿತ್ತು. ತಾನೂ ನಂಬಿ ಪ್ರೀತಿಸಿ ಮದುವೆಯಾಗಿದ್ದ ಶಂಕರ ಇನ್ನೊಬ್ಬಾಕೆಯನ್ನು ವರಿಸುತ್ತಾನೆಂಬ ವಿಚಾರ ತಿಳಿದಿತ್ತು. ಕೂಡಲೇ ಆರೋಹಳ್ಳಿ ಪೊಲೀಸ್ ಠಾಣೆಗೆ ಹೋದ ಈಕೆ ಅಲ್ಲಿನ ಪೊಲಿಸರೊಂದಿಗೆ ವಿಚಾರ ತಿಳಿಸಿ ಅವರೊಂದಿಗೆ ಹಾಗೂ ತನ್ನ ತಾಯಿ ಹಾಗೂ ಸೋದರತ್ತೆಯೊಂದಿಗೆ ಬುಧವಾರ ಬೆಂಗಳುರಿನಿಂದ ಕೋಟಕ್ಕೆ ಹೊರಟು ಗುರುವಾರ ಬೆಳಿಗ್ಗೆ ಬಂದಿಳಿದಿದ್ದಾಳೆ. ಮುಹೂರ್ತದ ಸಮಯಕ್ಕೆ ಮಣೂರಿನ ಕಲ್ಯಾಣ ಮಂದಿರಕೆ ಪೊಲೀಸರು ಹಾಗೂ ಪೋಷಕರೊಡಗೂಡಿ ಹೋದ ಸರಸ್ವತಿ ಮದುವೆ ಹುಡುಗಿ ಹಾಗೂ ಶಂಕರನ ಕಡೆಯವರಲ್ಲಿ ವಿಚಾರ ಹೇಳಿದ್ದಾಳೆ. ಈ ಸಮಯ ಮದುವೆ ನಿಂತು ಶಂಕರನನ್ನು ಪೊಲೀಸರು ವಶಕ್ಕೂ ಪಡೆದರು.
ಏನೂ ಅರಿಯದ ನಾಗೂರಿನ ಯುವತಿ ಮದುವೆ ಮುರಿದಿತ್ತು. ಆದ್ರೇ ಆಕೆಯ ಬಾಳು ಹಾಳಾಗುವುದು ಮಾತ್ರ ತಪ್ಪಿಹೋಗಿತ್ತು. ಕೂಡಲೇ ಎರಡು ಕಡೆಯವರ ಸಮಯಪ್ರಜ್ನೆಯಿಂದ ನಡೆಯಬೇಕಿದ್ದ ಸುಮೂಹುರ್ತದಲ್ಲಿಯೇ ನಾಗೂರಿನ ಮದುಮಗಳ ಮದುವೆ ಶಂಕರನ ಸಂಬಂಧಿಕ ದೇವೇಂದ್ರನ ಜೊತೆ ನಡೆದಿತ್ತು. ಮದುವೆಗೆ ಬಂದವರು ವಧು-ವರನನ್ನು ಹಾರೈಸಿ ಶುಭ ಕೋರಿದರು.
ಇನ್ನೊಂದೆಡೆ ಪೊಲಿಸ್ ಠಾಣೆಯಲ್ಲಿ ಪೊಲಿಸರು, ಮಹಿಳಾ ಸಾಂತ್ವಾನ ಕೇಂದ್ರದವರು ಹಾಗೂ ಬೆಂಗಳೂರಿನ ಸರಸ್ವತಿ ಸಂಬಂಧಿಕರು ಮಾತುಕತೆ ನಡೆಸಿ ಶಂಕರ್ ಹಾಗೂ ಸರಸ್ವತಿ ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸುವ ಆಲೋಚನೆಯನ್ನು ಮಾಡಿದ್ದಾರೆ. ಶುಕ್ರವಾರವೇ ಈ ಮದುವೆಯೂ ನಡೆಯಲಿದೆ.
ಒಟ್ಟಿನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತೆಂಬ ಹಾಗೇ ಶಂಕರ್ ಸರಸ್ವತಿಗೆ ಬಾಳು ಕೊಡಲು ಒಪ್ಪಿದ್ದಾನೆ. ಇತ್ತ ಮದುವೆ ನಿಂತಿದ್ದ ವಧುವೆಗೆ ಬಾಳು ಕೊಡುವ ಮೂಲಕ ದೇವೇಂದ್ರ ಹೀರೋ ಆಗಿದ್ದಾನೆ. ಎಲ್ಲಾವೂ ಒಳ್ಳೆಯದಾಗಿ ಸುಖಾಂತ್ಯಗೊಂಡಿದೆ. ಈ ಎರಡು ಜೋಡಿಗಳು ದಾಂಪತ್ಯ ಜೀವನ ಫುಲ್ ಖುಷ್ ಆಗಿರಲಿ ಎಂಬುದು ನಮ್ಮ ಹಾರೈಕೆ.












