ಮಂಗಳೂರು, ಮೇ 14: ಶ್ರೀಮಂತರ ಐಷಾರಾಮಿ ಜೀವನಕ್ಕಾಗಿ ಗಾಲ್ಫ್ ಕ್ರೀಡಾಂಗಣ ನಿರ್ಮಿಸಲು ಮುಂದಾಗುವ ಮೂಲಕ ಬೆಂಗರೆ ಕಡಲ ಕಿನಾರೆಯನ್ನು ಬಲಿ ಕೊಡುವ ಹುನ್ನಾರ ನಡೆಯುತ್ತಿದೆ ಎಂದು ಸಿಪಿಎಂ ನಾಯಕ ವಸಂತ ಆಚಾರಿ ಆರೋಪಿಸಿದ್ದಾರೆ. ಬೆಂಗರೆಯಲ್ಲಿ ಉದ್ದೇಶಿತ ಗಾಲ್ಫ್ ಕ್ರೀಡಾಂಗಣ ಹಾಗೂ ರೆಸಾರ್ಟ್ ಯೋಜನೆಯನ್ನು ಕೈಬಿಡಲು ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬೆಂಗರೆ ನಿವಾಸಿಗಳನ್ನು ನಿರ್ವಸಿತರನ್ನಾಗಿಸುವ ಕಾಲ ದೂರವಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕಾರ್ಪೊರೇಟ್ ವಲಯವನ್ನು ಶಕ್ತಿಶಾಲಿಯನ್ನಾಗಿಸುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ, ಅಭಿವೃದ್ಧಿ ಹೆಸರಿನಲ್ಲಿ ಬಡ ಜನರ ಆಶಯಗಳನ್ನು ಬಲಿಪಡೆಯುತ್ತಿದೆ ಎಂದು ದೂರಿದರು. ಸೂಪರ್ಸ್ಟಾರ್ ಮೈದಾನದ ಕಲ್ಲುಗಳ ತೆರವಿಗೆ ಆಗ್ರಹ ಯುವಜನರು ಕ್ರೀಡಾ ಚಟುವಟಿಕೆಗಳಿಗಾಗಿ ಆಶ್ರಯಿಸಿಕೊಂಡಿರುವ ಬೆಂಗರೆಯ ಸೂಪರ್ಸ್ಟಾರ್ ಮೈದಾನದಲ್ಲಿ ಕಲ್ಲುಗಳನ್ನು ಹಾಕಲಾಗಿದ್ದು, ಅದನ್ನು ಮುಂದಿನ 15 ದಿನಗಳೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕಲ್ಲುಗಳನ್ನು ಸ್ಥಳೀಯ ಯುವಕರೇ ತೆರವುಗೊಳಿಸಲಿದ್ದಾರೆ ಎಂದು ಡಿವೈಎಫ್ಐ ನಗರ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದರು. ಪ್ರತಿಭಟನೆಯನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತನಾಡಿದರು.
ಸಮುದ್ರ ತೀರದಲ್ಲಿ ಗಾಲ್ಫ್ ಕ್ರೀಡಾಂಗಣಕ್ಕಾಗಿ ಆವರಣಗೋಡೆ ರಚನೆ ಕಾಮಗಾರಿಯನ್ನು ನಿಲ್ಲಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ತಣ್ಣೀರುಬಾವಿ, ಕುದ್ರೋಳಿ ಬೆಂಗರೆ, ಕಸಬಾ ಬೆಂಗರೆ ಹಾಗೂ ತೋಟ ಬೆಂಗರೆ ಮೀನುಗಾರರ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಬೆಂಗರೆಯಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಕುಟುಂಬಗಳಿಗೆ ಮನೆ ನಂಬ್ರ ಹಾಗೂ ಹಕ್ಕುಪತ್ರ ವಿತರಿಸಬೇಕು. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ತಕ್ಷಣ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಮನಪಾದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು.ಬೆಂಗರೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ಸಹಿತ 24 ಗಂಟೆಗಳ ಹೆರಿಗೆ ಸೌಲಭ್ಯ ಸೇರಿದಂತೆ ವೈದ್ಯಕೀಯ ಸವಲತ್ತು ದೊರಕಿಸಬೇಕು ಎಂದು ಆಗ್ರಹಿಸಿ ಈ ಸಂದರ್ಭ ಪ್ರತಿಭಟನಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮುಖಂಡರಾದ ಸಂತೋಷ್ ಕುಮಾರ್ ಬಜಾಲ್, ರಫೀಕ್ ಹರೇಕಳ, ರೈತ ಮುಖಂಡ ಯಾದವ ಶೆಟ್ಟಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಸ್ಥಳೀಯ ಹಾಗೂ ಡಿವೈಎಫ್ಐ ಬೆಂಗರೆ ಘಟಕದ ಅಧ್ಯಕ್ಷ ಎ.ಬಿ.ನೌಶಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.