ಕನ್ನಡ ವಾರ್ತೆಗಳು

ಎಚ್‌ಪಿಸಿಎಲ್ ಕಂಪನಿಯಿಂದ ಮೋಸ ಆರೋಪ : ಬೀದಿಗೆ ಬಂದ ಪಂಪ್‌ ‌ಮಾಲಕರ ಕುಟುಂಬದಿಂದ ಉಪವಾಸ ಸತ್ಯಾಗ್ರಹ – ನ್ಯಾಯ ಸಿಗದಿದ್ದರೆ ದಯಾ ಮರಣಕ್ಕೆ ಮನವಿ

Pinterest LinkedIn Tumblr

Hpcl_shoshitha_protest_2 Hpcl_shoshitha_protest_1

ಮಂಗಳೂರು, ಮೇ 14: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಯಾಗಿರುವ ತನಗೆ ಭಾರತ ಸರಕಾರದಿಂದ ಮಂಜೂರಾಗಿದ್ದ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜನ್ನು ನಿಲ್ಲಿಸಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ (ಎಚ್‌ಪಿಸಿಎಲ್) ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪಂಪ್‌ನ ಮಾಲಕ ಪ್ರಕಾಶ್ ಎಂ.ಡಿ. ಎಂಬವರು ತನ್ನ ಪತ್ನಿ, ಮಗು ಮತ್ತು ಕುಟುಂಬ ಸದಸ್ಯರೊಂದಿಗೆ ನಗರದ ಚಿಲಿಂಬಿಯ ಎಚ್‌ಪಿಸಿಎಲ್‌ನ ಚಿಲ್ಲರೆ ಪ್ರಾದೇಶಿಕ ಕಚೇರಿ ಎದುರು ಬುಧವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

2007ರಲ್ಲಿ ತನಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪೆಟ್ರೋಲ್ ಪಂಪ್ ಮಂಜೂರಾಗಿದ್ದು, 27 ನವೆಂಬರ್ 2013ರವರೆಗೆ ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದಿದ್ದೇನೆ. ಆದರೆ ಇದೀಗ ಕಂಪೆನಿಯವರು 25 ಲಕ್ಷ ರೂ. ಬಾಕಿ ಇದ್ದು, ಅದನ್ನು ಪಾವತಿಸದಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಸರಬರಾಜು ನಿಲ್ಲಿಸಿರುವುದಾಗಿ ಪ್ರಕಾಶ್ ಆರೋಪ ಮಾಡಿದ್ದಾರೆ.

Hpcl_shoshitha_protest_3 Hpcl_shoshitha_protest_4

ತನ್ನ ಪಂಪ್‌ಗೆ ತೈಲ ಸರಬರಾಜು ನಿಲ್ಲಿಸಿದ ನಾಲ್ಕು ತಿಂಗಳ ಮೊದಲು ಚಿಲಿಂಬಿಯ ಇದೇ ರೀಜನಲ್ ಕಚೇರಿಯವರು ಮೂರನೆಯ ವ್ಯಕ್ತಿ ದಶರಥ ಎಂಬಾತನಿಗೆ ತನ್ನ ಹೆಸರಿನಲ್ಲಿ ತನ್ನ ಅನುಮತಿ ಇಲ್ಲದೆ ತೈಲ ಸರಬರಾಜು ಮಾಡಿದ್ದು, ಆತ ಈ ತೈಲವನ್ನು ಮೂಡಿಗೆರೆ ಕೆಎಸ್ಸಾರ್ಟಿಸಿ ಡಿಪೊಗೆ ಸರಬರಾಜು ಮಾಡಿದ್ದಾನೆ. ಒಟ್ಟು 1,63,83,452 ರೂ. ಮೊತ್ತದ ತೈಲವನ್ನು ಎಚ್‌ಪಿಸಿಎಲ್ ಚಿಲಂಬಿ ರೀಜನಲ್ ಕಚೇರಿಯ ಅಧಿಕಾರಿಗಳು ದಶರಥನಿಗೆ ಸರಬರಾಜು ಮಾಡಿದ್ದು, ತಾನು ಆರ್‌ಟಿಐ ಅಡಿ ಈ ಮಾಹಿತಿಯನ್ನು ಪಡೆದಿರುವುದಾಗಿ ಪ್ರಕಾಶ್ ಆರೋಪಿಸಿದ್ದಾರೆ.

ತನ್ನ ಬೇಡಿಕೆ ಮತ್ತು ಅನುಮತಿ ಇಲ್ಲದೆ ಇಷ್ಟು ದೊಡ್ಡ ಮೊತ್ತದಲ್ಲಿ ತೈಲ ಸರಬರಾಜು ಮಾಡಿದ ಅಧಿಕಾರಿಗಳಿಗೆ ದಶರಥ 25,80,931 ರೂ.ವನ್ನು ಬಾಕಿ ಇರಿಸಿದ್ದು, ಇದನ್ನು ಪಾವತಿ ಮಾಡುವಂತೆ ಅಧಿಕಾರಿಗಳು ತನಗೆ ಹೇಳುತ್ತಿದ್ದಾರೆ. ಈ ಬಗ್ಗೆ ಲಿಖಿತ ಸೂಚನೆ ನೀಡುವಂತೆ ತಾನು ಕೇಳಿದ್ದು, ಅದಕ್ಕೆ ಅವರು ಒಪ್ಪುತ್ತಿಲ್ಲ. ದಶರಥನಿಂದ ತೈಲ ಖರೀದಿಸಿದ ಕೆಎಸ್ಸಾರ್ಟಿಸಿ ತನ್ನ ಖರೀದಿ ಬಾಬ್ತು ಹಣವನ್ನು ದಶರಥನ ವೈಯಕ್ತಿಕ ಅಕೌಂಟ್‌ಗೆ ಜಮೆ ಮಾಡಿದೆ. ಈ ಮಾಹಿತಿ ಕೂಡ ಆರ್‌ಟಿಐನಲ್ಲಿ ಕೆಎಸ್ಸಾರ್ಟಿಸಿಯವರು ತನಗೆ ನೀಡಿದ್ದು, ತನ್ನ ಬಳಿ ದಾಖಲೆ ಇರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದೀಗ ದಶರಥ ಕೆಎಸ್ಸಾರ್ಟಿಸಿಯಿಂದ ಹಣ ಪಡೆದಿದ್ದರೂ 25.8 ಲಕ್ಷ ರೂ. ಬಾಕಿ ಇರಿಸಿದ್ದು, ಇದಕ್ಕೆ ದಶರಥ ಹೊಣೆಗಾರನೇ ಹೊರತು ತಾನಲ್ಲ. ಈ ಅಧಿಕಾರಿಗಳು ಆತನಿಗೆ ತೈಲ ಸರಬರಾಜು ಮಾಡಿಕೊಂಡಿರುವ ಎಡವಟ್ಟಿನಿಂದಾಗಿ ಆತ ಬಾಕಿ ಇರಿಸಿಕೊಂಡಿದ್ದ ಹಣವನ್ನು ಪಾವತಿಸುವಂತೆ ಸೂಚಿಸುವುದು ಸಮಂಜಸವಲ್ಲ ಎಂದು ಪ್ರಕಾಶ್ ದೂರಿದ್ದಾರೆ.

Hpcl_shoshitha_protest_5 Hpcl_shoshitha_protest_6

ತಾನು 25.8 ಲಕ್ಷ ರೂ. ಬಾಕಿ ಇರಿಸಿದ ಬಗ್ಗೆ ಚಿಲಿಂಬಿಯ ಎಚ್‌ಪಿಸಿಎಲ್‌ನವರು ಎಲ್ಲೂ ದೂರು ದಾಖಲಿಸಿಲ್ಲ. ಆದರೆ ತನಗಾಗಿರುವ ಅನ್ಯಾಯದ ಬಗ್ಗೆ ತಾನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರಿಷ್ಠಾಧಿಕಾರಿ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ, ಡಿಐಜಿಯವರಿಗೂ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ತಾನು ನೀಡಿರುವ ದೂರಿನ ಹಿನ್ನೆಲೆಯಲ್ಲಿ ರವಿ ಪೂಜಾರಿ ಎಂಬ ಹೆಸರಿನಲ್ಲಿ ಮೊಬೈಲ್‌ನಿಂದ ತನಗೆ ಪ್ರಾಣ ಬೆದರಿಕೆ ಕೂಡ ಬಂದಿದ್ದು, ತನ್ನ ಸಹಿತ ತನ್ನ ಕುಟುಂಬದ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಪ್ರಕಾಶ್ ದೂರಿ ಕೊಂಡಿದ್ದಾರೆ.

Hpcl_shoshitha_protest_7

Hpcl_shoshitha_protest_8

ತನ್ನ ಪಂಪ್‌ಗೆ ತೈಲ ಸರಬರಾಜು ನಿಲ್ಲಿಸಿರುವ ಬಗ್ಗೆ ಕಾರಣ ನೀಡುವಂತೆ ತಾನು ಎಚ್‌ಪಿಸಿಎಲ್‌ನ ಚಿಲಿಂಬಿ ರೀಜನಲ್ ಕಚೇರಿ ಅಧಿಕಾರಿಗಳಲ್ಲಿ ಕೇಳಿಕೊಂಡಾಗ ಅವರು, ‘ಪಂಪ್‌ನಲ್ಲಿ ಟೆಲಿಫೋನ್, ಶೌಚಾಲಯಗಳಿಲ್ಲ. ಶುಚಿತ್ವವನ್ನು ಕಾಪಾಡಿಲ್ಲ. ಈ ಹಿನ್ನೆಲೆಯಲ್ಲಿ ತೈಲ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ನೋಟಿಸ್ ನೀಡಿದ್ದಾರೆ. ಅಧಿಕಾರಿಗಳು ಬಾಕಿ ಇರುವ 25.8 ಲಕ್ಷ ರೂ. ಹಣವನ್ನು ಪಾವತಿಸುವಂತೆ ಬಾಯಿ ಮಾತಿನಲ್ಲಿ ನನ್ನನ್ನು ಬೆದರಿಸುತ್ತಿದ್ದು, ನಾನು ಬಾಕಿ ಇರಿಸಿರುವ ಹಣದ ಬಗ್ಗೆ ಲಿಖಿತವಾಗಿ ನೀಡುವಂತೆ ಒತ್ತಾಯಿಸುತ್ತಿದ್ದರೂ ಅವರು ಈವರೆಗೂ ಬಾಕಿ ಇರುವ ಹಣದ ಬಾಬ್ತುವನ್ನು ಲಿಖಿತವಾಗಿ ನೀಡಿಲ್ಲ. ವಾಸ್ತವದಲ್ಲಿ ತೈಲ ಸರಬರಾಜು ಸ್ಥಗಿತಕ್ಕೆ ದಶರಥ ಹಣ ಪಾವತಿಸದಿರುವುದೇ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.

ಭಾರತ ಸರಕಾರದಿಂದ ತಾನು ಪ್ರಸ್ತುತ ಸೌಲಭ್ಯವನ್ನು ಪಡೆದಿರುವುದರಿಂದ ತಾನು ಬೇರೆ ಉದ್ಯೋಗವನ್ನಾಗಲಿ, ಉದ್ಯಮವನ್ನಾಗಲಿ ಆರಂಭಿಸುವಂತಿಲ್ಲ. ಎಚ್‌ಪಿಸಿಎಲ್‌ನವರು ತೈಲ ಸರಬರಾಜು ಸ್ಥಗಿತಗೊಳಿಸಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಎಚ್‌ಪಿಸಿಎಲ್ ಅಧಿಕಾರಿಗಳು ತೈಲ ಸರಬರಾಜಿಗೆ ಸಂಬಂಧಿಸಿದ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು. ಈ ಮೂಲಕ ತನಗೆ ನ್ಯಾಯ ನೀಡಿ, ಪರಿಹಾರವನ್ನು ಒದಗಿಸಬೇಕೆಂದು ಪ್ರಕಾಶ್ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ನ್ಯಾಯ ಒದಗಿಸುವುದು ಅಸಾಧ್ಯವಾದರೆ ದಯಾ ಮರಣವನ್ನು ನೀಡುವಂತೆ ಅವರು ತಿಳಿಸಿದ್ದಾರೆ.

Write A Comment