ಮೇ 14: ಎಚ್‌ಪಿಸಿಎಲ್ ಕಂಪೆನಿಗೆ ಸೇರಿದ ಹೈ ಫ್ರೆಶರ್ ಪೆಟ್ರೋಲಿಯಂ ತೈಲ ಸಾಗಾಟದ ಪೈಪ್‌ಲೈನ್‌ನಿಂದ ಡೀಸೆಲ್ ಸೋರಿಕೆಯಾದ ಘಟನೆ ಬುಧವಾರ ಮುಂಜಾವಿನ ವೇಳೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಅಲ್ಲಾರು ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಪೂರೈಕೆಯಾಗುವ ತೈಲ ಪೈಲ್‌ಲೈನ್ ಮಣ್ಣಿನಡಿ ಸ್ಫೋಟಗೊಂಡು ಈ ಸೋರಿಕೆಯಾಗಿದ್ದು, ಘಟನೆಯಿಂದ ಪಂಜಿಕಲ್ಲು ಗ್ರಾಮದ ಜನತೆ ಆತಂಕಕ್ಕೀಡಾಗಬೇಕಾಯಿತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಎಚ್‌ಪಿಸಿಎಲ್ ಸಂಸ್ಥೆಯ ತೈಲ ಸಾಗಾಟದ ಪೈಪ್‌ಲೈನ್ ಪಂಜಿಕಲ್ಲು ಗ್ರಾಮದ ಮೂಲಕ ಬೆಂಗಳೂರಿಗೆ ಹಾದು ಹೋಗಿದೆ. ಬುಧವಾರ ಮುಂಜಾನೆ 2:30ರ ವೇಳೆಗೆ ಪೈಪ್‌ಲೈನ್ ಏಕಾಏಕಿ ಸ್ಫೋಟಗೊಂಡು ಡೀಸೆಲ್ ಸೋರಿಕೆ ಪ್ರಾರಂಭಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಜಾನೆ 6 ಗಂಟೆಯವರೆಗೂ ಡೀಸೆಲ್ ಬುಗ್ಗೆಯಂತೆ ಚಿಮ್ಮುತ್ತಿರುವುದನ್ನು ಗಮನಿಸಿ ಅಪಾಯದ ಮುನ್ಸೂಚನೆ ಅರಿತ ಸ್ಥಳೀಯರು ಪಕ್ಕದಲ್ಲಿ ಸೂಚನೆ ಫಲಕದಲ್ಲಿ ಬರೆಯಲಾಗಿರುವ ಕಂಪೆನಿಯ ಎಮರ್ಜೆನ್ಸಿ ಕಸ್ಟಮರ್ ಕೇರ್ ಸೆಂಟರ್‌ನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆರಂಭದಲ್ಲಿ ಹಲವು ಸಮಯಗಳ ಕಾಲ ಯಾರು ದೂರವಾಣಿ ಕರೆ ಸ್ವೀಕರಿಸಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊನೆಗೆ ಕರೆ ಸ್ವೀಕರಿಸಿ 9:30ರ ವೇಳೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಸೋರಿಕೆಯನ್ನು ತಾತ್ಕ್ಕಾಲಿಕವಾಗಿ ತಡೆಗಟ್ಟಿದೆ.
ಗದ್ದೆ, ತೋಟಗಳಿಗೆ ನುಗ್ಗಿದ ಡೀಸೆಲ್; ಆತಂಕಿತರಾದ ಗ್ರಾಮಸ್ಥರು
ಅಲ್ಲಾರುವಿನಲ್ಲಿ ಸುಮಾರು 200 ಮೀಟರ್ ದೂರದ ವರೆಗೆ ಇಳಿಜಾರು ರಸ್ತೆಯಲ್ಲಿ ಡೀಸೆಲ್ ಹರಿದು ಹೋಗಿದ್ದು ಗದ್ದೆ ಹಾಗೂ ತೋಟಗಳಿಗೆ ನುಗ್ಗಿದೆ. ಪರಿಸರವಿಡಿ ಅದರ ವಾಸನೆಯೇ ತುಂಬಿ ಹೋಗಿದೆ. ಸುತ್ತಮುತ್ತ ಹಲವಾರು ಮನೆಗಳಿದ್ದು ಅಪಾಯಕಾರಿ ಸ್ಥಿತಿಯಿಂದಾಗಿ ಭೀತಿಗೊಳಗಾಗಿದ್ದರು. ಸೋರಿದ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.
ಈ ಪೈಪ್‌ಲೈನ್‌ನಲ್ಲಿ ಕೆಲವು ಬಾರಿ ಪೆಟ್ರೋಲ್ ಅನ್ನು ಸರಬರಾಜು ಮಾಡಲಾಗುತ್ತದೆ. ನಿನ್ನೆ ಸೋರಿಕೆಯಾಗಿರುವುದು ಡೀಸೆಲ್. ಅದರ ಬದಲು ಪೆಟ್ರೋಲ್ ಸರಬರಾಜಾಗಿ ಸೋರಿಕೆಯಾಗುತ್ತಿದ್ದರೆ ಇಡೀ ಗ್ರಾಮವೇ ಸುಟ್ಟು ಹೋಗುತ್ತಿತ್ತು ಎನ್ನುವ ಭಯದ ಮಾತುಗಳು ಸ್ಥಳೀಯರಿಂದ ಕೇಳಿ ಬಂತು. ಮಂಗಳವಾರ ರಾತ್ರಿ ಅಪ್ಪಳಿಸಿದ ಸಿಡಿಲಿನ ಒತ್ತಡಕ್ಕೆ ಪೈಪ್‌ಲೈನ್ ಸ್ಫೋಟಗೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕಂಪೆನಿ ಅಧಿಕಾರಿಗಳ ತಂಡ ಸಂಜೆಯವರೆಗೆ ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದು, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಕಂಪನಿ ವಿರುದ್ಧ ಆಕ್ರೋಶ
ಘಟನೆಯ ಬಗ್ಗೆ ಕಂಪೆನಿಗೆ ಮಾಹಿತಿ ನೀಡಲು ಹಲವು ಬಾರಿ ಫೋನ್ ಸಂಪರ್ಕ ಮಾಡಿದರೂ ಕರೆ ಸ್ವೀಕರಿಸದ ಕಂಪೆನಿಯ ಕಸ್ಟಮರ್ ಕೇರ್ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸೂಚನಾ ಫಲಕದಲ್ಲಿ ಮೂರು ದೂರವಾಣಿ ಸಂಖ್ಯೆಗಳನ್ನು ಕಂಪೆನಿ ನೀಡಿದೆ. ಆದರೆ ಸಂಖ್ಯೆ ಬರೆದು ಕರೆ ಸ್ವೀಕರಿಸದಿದ್ದರೆ ದೂರವಾಣಿ ಸಂಖ್ಯೆ ಬರೆದು ಏನು ಪ್ರಯೋಜನ. ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದರೂ ಕಂಪೆನಿಯ ಎಮರ್ಜೆನ್ಸಿ ಕಸ್ಟಮರ್ ಕೇರ್ ದೂರವಾಣಿ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಕೊನೆಗೆ ಕರೆ ಸ್ವೀಕರಿಸಿದ ಅಧಿಕಾರಿಯೂ ಸ್ಪಂದಿಸುವ ಬದಲು ಬೇಜವಾಬ್ದಾರಿಯಿಂದ ವರ್ತಿಸಿರುವುದಾಗಿಯೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ಯಾಸ್ ಪೈಪ್‌ಲೈನ್ ಕಾಮಗಾರಿ
ಡೀಸೆಲ್ ಸೋರಿಕೆಯಾದ ಪೈಪ್‌ಲೈನ್ ಬಳಿಯಲ್ಲಿಯೇ ಎಚ್‌ಪಿಸಿಎಲ್ ಸಂಸ್ಥೆಯ ಗ್ಯಾಸ್ ಪೈಪ್‌ಲೈನ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ. ಆದರೆ ಕಳೆದೆರಡು ದಿನಗಳಿಂದ ರಾತ್ರಿ ಸುರಿಯುವ ಮಳೆಗೆ ಪೈಪ್ ಅಳವಡಿಸಲು ತೋಡಲಾಗಿರುವ ಹೊಂಡದಿಂದ ಮಣ್ಣು ಕೊಚ್ಚಿ ಹೋಗಿ ಪರಿಸರದ ತೋಟಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 5 ಅಡಿ ಆಳದ ಪೈಪ್‌ಲೈನ್‌ನ ಹೊಂಡ ರಸ್ತೆ ಅಂಚಿಗೆ ತಾಗಿಕೊಂಡೆ ಇದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಇದಾಗಿರುವುದರಿಂದ ಬಸ್ಸು ಮೊದಲಾದ ವಾಹನಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದು, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಮದ ಜನರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಪೆಟ್ರೋಲಿಯಂ ಪೈಪ್‌ಲೈನ್ ಹಾಗೂ ಗ್ಯಾಸ್ ಪೈಪ್‌ಲೈನನ್ನು ಇಲ್ಲಿಂದ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಂಪೆನಿ ಮುಂಜಾಗೃತ ಕ್ರಮ ವಹಿಸಬೇಕಿತ್ತು :
ಎಚ್‌ಪಿಸಿಎಲ್ ಪೈಪ್‌ಲೈನ್ ಸೋರಿಕೆಯಾಗಿ 200 ಮೀಟರ್‌ನಷ್ಟು ದೂರ ಹರಿದು ಹೋಗಿದೆ. ಪಕ್ಕದಲ್ಲಿ ಹಲವಾರು ಮನೆಗಳಿದ್ದು ಅಪಾಯಕಾರಿ ಸ್ಥಿತಿ ಬಂದೊದಗಿದೆ. ಜನವಸತಿ ಇರುವ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಸುವ ಮೊದಲು ಕಂಪೆನಿ ಮುಂಜಾಗೃತ ಕ್ರಮವನ್ನು ಅಳವಡಿಸಿಕೊಳ್ಳಬೇಕಿತ್ತು. ಆಕಸ್ಮಾತ್ ಬೆಂಕಿ ತಗಲುತ್ತಿದ್ದರೆ ಇಡೀ ಊರೇ ಬೆಂಕಿ ಹತ್ತಿ ಉರಿದು ಹೋಗುವ ಪರಿಸ್ಥಿತಿ ನಿರ್ಮಾಣಗೊಳ್ಳಬೇಕಿತ್ತು. ಕಂಪೆನಿ ಅಧಿಕಾರಿಗಳು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ.