ಪುತ್ತೂರು: ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ ಅವರ ಸಹೋದರನ ಮಗಳು ನಿರೀಕ್ಷಾ ಅಡ್ಯಂತಾಯ (22) ಎಂಬವರು ಮಂಗಳವಾರ ಚೆನ್ನೈನಲ್ಲಿ ನಡೆದ ಆಕಸ್ಮಿಕ ಘಟನೆಯೊಂದರಲ್ಲಿ ಸಾವಿಗೀಡಾಗಿದ್ದಾರೆ.
ಮೆಟಲ್ ಕಟ್ಟರ್ ಯಂತ್ರಕ್ಕೆ ನಿರೀಕ್ಷಾ ಅವರ ಚೂಡಿದಾರದ ಶಾಲು ಸಿಕ್ಕಿ ಹಾಕಿಕೊಂಡು ಆಕೆಯನ್ನು ಯಂತ್ರ ಸೆಳೆದುಕೊಂಡಿತೆನ್ನಲಾಗಿದೆ. ಇಂಜಿನಿಯರಿಂಗ್ ಪದವೀಧರೆಯಾದ ಆಕೆ ವೃತ್ತಿಯಲ್ಲಿದ್ದು, ಇತ್ತೀಚೆಗೆ ಹುದ್ದೆಗೆ ರಾಜೀನಾಮೆ ನೀಡಿ ಎಂಬಿಎ ಕಲಿಯಲು ಮುಂದಾಗಿದ್ದರು.
ಮಂಗಳವಾರ ತಮ್ಮ ತಂದೆ ಗೋಪಾಲಕೃಷ್ಣ ಅಡ್ಯಂತಾಯ ನಡೆಸುತ್ತಿರುವ ಉದ್ದಿಮೆ ಘಟಕಕ್ಕೆ ತೆರಳಿದ್ದ ನಿರೀಕ್ಷಾ ಅವರು ಮೆಟಲ್ ಕಟ್ಟರ್ ಯಂತ್ರದ ಬಳಿ ಹಾದುಹೋಗುವಾಗ ಶಾಲು ಸಿಲುಕಿಕೊಂಡು ಈ ದುರಂತ ಸಂಭವಿಸಿತೆನ್ನಲಾಗಿದೆ.
ಚೆನ್ನೈನಲ್ಲಿ ಮೃತದೇಹದ ಪರೀಕ್ಷೆ ನಡೆಸಲಾಗಿದ್ದು, ಅಂತ್ಯ ಸಂಸ್ಕಾರವನ್ನು ಮರುವಂತಿಲದ ಪೆರಬೆಯಲ್ಲಿ ಇಂದು ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
