ಕನ್ನಡ ವಾರ್ತೆಗಳು

ಬೆಂಗಳೂರಿನಲ್ಲಿ ತಾಯಿಯಿಂದ ಕೋಟ್ಯಂತರ ರೂ. ವಂಚನೆ : ಮಂಗಳೂರಿನಲ್ಲಿ ಮಗಳ ಬಂಧನ

Pinterest LinkedIn Tumblr

Gowri_suhas_arest_1a

ಮಂಗಳೂರು, ಮೇ 11: ಬೆಂಗಳೂರಿನಲ್ಲಿ ನಡೆದ ಕೋಟ್ಯಂತರ ರೂ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ತಿಲಕನಗರ ಪೊಲೀಸರು ರವಿವಾರ ನಗರದಲ್ಲಿ ಬರ್ಕೆ ಪೊಲೀಸರ ಸಹಕಾರದೊಂದಿಗೆ ಮಂಗಳೂರಿನ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ನಗರದ ಕಲಾಕುಂಜ ಬಳಿಯ ನಿವಾಸಿ ಸುಹಾಸ್ ರಾವ್ ಎಂಬವರ ಪತ್ನಿ ಗೌರಿ ಸುಹಾಸ್ ರಾವ್ ಎಂದು ಗುರುತಿಸಲಾಗಿದೆ.

ಗೌರಿಯ ತಾಯಿ ಮೀರಾ ಪಡಿಯಾರ್ ಮತ್ತು ಸುಹಾಸ್ ರಾವ್ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಮನೆ, ಜಾಗ ನೀಡುವುದಾಗಿ ಆಮಿಷ ಒಡ್ಡಿ ಹಾಗೂ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿರನ್ನು ನಂಬಿಸಿ ಸುಮಾರು 5 ಕೋಟಿ ರೂ. ವಂಚಿಸಿದ್ದಾರೆ ಎಂದು ಬೆಂಗಳೂರು ತಿಲಕನಗರ ಪೊಲೀಸರು ತಿಳಿಸಿದ್ದಾರೆ. ಮೀರಾ ಪಡಿಯಾರ್ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ ಮೀರಾ ಪಡಿಯಾರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪುತ್ರಿ ಗೌರಿಯ ಬಂಧನದ ವಾರೆಂಟ್ ಹಿಡಿದುಕೊಂಡು ತಿಲಕನಗರ ಪೊಲೀಸರು ಬರ್ಕೆ ಪೊಲೀಸರ ನೆರವಿನೊಂದಿಗೆ ಇಂದು ಮಂಗಳೂರಿನ ಸುಹಾಸ್ ರಾವ್ ಅವರ ಫ್ಲಾಟ್‌ಗೆ ಬಂದಾಗ ಸುಹಾಸ್ ರಾವ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸುಹಾಸ್ ರಾವ್ ಕೂಡಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಪತ್ನಿ ಗೌರಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಪ್ರತಿರೋಧ ಒಡ್ಡಿದ್ದಾರೆಂದು ಹೇಳಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೌರಿ ‘‘ಪ್ರಕರಣದಲ್ಲಿ ತಾನು ನಿರಪರಾಧಿಯಾಗಿದ್ದು, ತಾಯಿ ಮಾಡಿದ ತಪ್ಪಿಗೆ ತಾನು ಹೊಣೆಯಲ್ಲ. ತನ್ನ ತಾಯಿ, ಮತ್ತೊಬ್ಬರು ಪಡೆದ ಸಾಲಕ್ಕೆ ಜಾಮೀನು ನೀಡಿದ್ದು ಮಾತ್ರ. ಆ ವ್ಯಕ್ತಿ ಹಣದೊಂದಿಗೆ ಪರಾರಿಯಾಗಿದ್ದಾನೆ’’ ಎಂದಿದ್ದಾರೆ.

ಸುಹಾಸ್ ಮತ್ತು ಗೌರಿ ದಂಪತಿಗೆ ನಾಲ್ಕು ವರ್ಷದ ಮಗುವಿದೆ. ಇದೀಗ ಗೌರಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಬೆಂಗಳೂರಿಗೆ ಕರೆದುಕೊಡು ಹೋಗಿದ್ದಾರೆ.

Gowri_suhas_arest_2 Gowri_suhas_arest_3

ರಾಜಕೀಯ ನಂಟು : ಮಂಗಳೂರಿನಿಂದ ಬೆಂಗಳೂರಿಗೆ…

ಮೀರಾ ಪಡಿಯಾರ್ ಅವರು ಈ ಮೊದಲು ಮಂಗಳೂರಿನಲ್ಲಿ ಬಂಟ್ಸ್ ಹಾಸ್ಟೇಲ್ ಸಮೀಪ ಮನೆಯನ್ನು ಹೊಂದಿದ್ದು, ಮೊದಲು ಮನೆಯಲ್ಲಿ ಬಟ್ಟೆ ವ್ಯಾಪಾರ ಹಾಗೂ ಇನ್ನಿತ್ತರ ಸ್ಕೀಮ್ ಗಳನ್ನು ನಡೆಸುತ್ತಿದ್ದರು. ಮಗಳು ಗೌರಿ ಪಡಿಯಾರ್ ಉತ್ತಮ ನೃತ್ಯ ಕಲಾವಿದೆ. ನಗರದ ಓಷಿಯಾನ್ ಕಿಡ್ಸ್ ತಂಡದ ಸಕ್ರಿಯ ಸದಸ್ಯರಾಗಿದ್ದುಕೊಂಡು ರಾಜ್ಯದ್ಯಾಂತ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಳು.

ಇದೇ ಸಂದರ್ಭ ತಮ್ಮ ವ್ಯವಹಾರಗಳಲ್ಲಿ ನಷ್ಟ ಹೊಂದಿದ ಕಾರಣ ಮೀರಾ ಪಡಿಯಾರ್ ಅವರು ರಾಜಕೀಯ ಪಕ್ಷವೊಂದರಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಂಡು 18 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ಅಲ್ಲಿ ಇದೇ ರಾಜಕೀಯ ಪಕ್ಷದ ಕೃಪಾಕಟಕ್ಷದೊಂದಿಗೆ ಬೇರೆ ಬೇರೆ ವ್ಯವಹಾರಗಳ ಮೂಲಕ ಕೋಟ್ಯಾಂತರ ರೂ.ಸಂಪಾದಿಸಿದರು. ಆದರೆ ಇಲ್ಲಿ ಕೂಡ ಇವರ ವಂಚನೆ ಪ್ರಕರಣ ಬಯಲುಗೊಂಡು ತಮ್ಮಲ್ಲಿದ್ದ ಹಣವನ್ನು ಕಳೆದುಕೊಂಡರು.

ಬಳಿಕ ಕೊಂಕಣಿ ಸಿನಿಮಾ ನಿರ್ಮಿಸಲು ಬ್ಯಾಂಕ್‌ನಿಂದ ಕೊಟ್ಯಾಂತರ ರೂ. ಸಾಲ ಪಡೆದು ದುರದೃಷ್ಟವಶಾತ್ ಅ ಸಿನಿಮಾ ಕೂಡ ಯಶಸ್ಸು ಪಡೆಯದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ ಮೀರಾ ಪಡಿಯಾರ್ ಬ್ಯಾಂಕ್ ಸಾಲ ಹಿಂತಿರುಗಿಸದೇ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದರು. ಬಳಿಕ ತಮ್ಮ ರಾಜಕೀಯ ಪ್ರಭಾವದಿಂದ ಬಿಡುಗಡೆ ಹೊಂದಿದ್ದರು.

ಕಳೆದ ಆರು ವರ್ಷಗಳ ಹಿಂದೆ ಮೀರಾ ಪಡಿಯಾರ್ ಅವರ ಮಗಳಾದ ಗೌರಿ ಪಡಿಯಾರ್ ಅವರಿಗೆ ಸುಹಾಸ್ ರಾವ್ ಎಂಬವರ ಜೊತೆ ಮದುವೆಯಾಗಿ, ಇವರಿಬ್ಬರೂ ಮಂಗಳೂರಿನಲ್ಲೇ ನೆಲೆಸಿದ್ದರು. ಗೌರಿ ಪಡಿಯಾರ್ ಮದುವೆಯಾದ ಮೇಲೆ ಮಂಗಳೂರಿನಲ್ಲಿ ತಮ್ಮದೇ ಡ್ಯಾನ್ಸ್ ಸ್ಕೂಲ್ ತೆರೆದು ನೃತ್ಯ ತರಬೇತಿ ನೀಡುತ್ತಿದ್ದರು. ಜೊತೆಗೆ ಕೆಲವೊಂದು ಸಂಸ್ಥೆಗಳಿಗೆ ತೆರಳಿ ಏರೋಬಿಕ್ ನೃತ್ಯ ಕಲಿಸುತ್ತಿದ್ದರು. ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದರು.

ಸುಹಾಸ್ ರಾವ್  ಅಗಾಗ ಬೆಂಗಳೂರಿಗೆ ತೆರಳುತ್ತಿದ್ದು, ಅಲ್ಲಿ ಗೌರಿಯ  ತಾಯಿಯ ಭೂವ್ಯವಹಾರದಲ್ಲಿ ಸಹಕರಿಸುತ್ತಿದ್ದರು. ಈ ಮೋಸದ ವ್ಯವಹಾರದಲ್ಲಿ ಸುಮಾರು 6ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಗೌರಿಯನ್ನು6ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ ತಾಯಿ ಮತ್ತು ಪತಿ ಮಾಡಿದ ವಂಚನೆ ಪ್ರಕರಣಕ್ಕೆ ಗೌರಿ ಬಲಿಯಾಗಿರುವುದು ವಿಪರ್ಯಾಸ. ಜೊತೆಗೆ ಸುಹಾಸ್ ಮತ್ತು ಗೌರಿ ದಂಪತಿಗೆ ನಾಲ್ಕು ವರ್ಷದ ಮಗುವಿದೆ. ಈ ಮಗುವಿನ ಪಾಲನೆ ಫೋಷಣೆ ದೃಷ್ಠಿಯಿಂದ ಪೊಲೀಸರು ಮಾನವೀಯತೆ ನೆಲೆಯಲ್ಲಿ ವರ್ತಿಸಬೇಕಿತ್ತು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment