ಕನ್ನಡ ವಾರ್ತೆಗಳು

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು : ದೂರು – ವೈದ್ಯರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

Female_Death_Protest_1

ಮಂಗಳೂರು: ವೆನ್‌ಲಾಕ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಬಾಣಂತಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮಹಿಳೆಯ ಹೆರಿಗೆ ನಡೆದ ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಮಹಿಳೆಯ ಪತಿ ಬಂದರು ಠಾಣೆಗೆ ದೂರು ನೀಡಿದ್ದಾರೆ.

ಸುಳ್ಯ ತಾಲೂಕಿನ ಅಜ್ಜಾವರ ನಿವಾಸಿ ಪೂವಕ್ಕ ಏ.20ರಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿ ಏ.21ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೇ 6ರಂದು ಅಸ್ವಸ್ಥರಾದಾಗ ಅವರನ್ನು ವೆನ್‌ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟರು.

ಹೆರಿಗೆ ಬಳಿಕ ಲೇಡಿಗೋಷನ್‌ನಲ್ಲೇ ಶುಶ್ರೂಷೆಯಲ್ಲಿದ್ದ ಪೂವಕ್ಕನಿಗೆ ಮೇ 6ರಂದು ಇದ್ದಕ್ಕಿಂದ್ದಂತೆ ಕಾಲು ನೋವು ಕಾಣಿಸಿಕೊಂಡಿತು. ವೈದ್ಯರಿಗೆ ಮಾಹಿತಿ ನೀಡಿದಾಗ ಕಾಲಿಗೆ ಕೇವಲ ಬಿಸಿನೀರಿನಿಂದ ಮಸಾಜ್ ಮಾಡಿಸಲಾಯಿತು. ಆದರೆ, ಆರೋಗ್ಯ ತೀವ್ರ ಹದಗೆಟ್ಟ ಬಳಿಕ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೂವಕ್ಕನ ಸಂಬಂ ಸುಂದರಿ ಮಾಹಿತಿ ನೀಡಿದ್ದಾರೆ.

Female_Death_Protest_2 Female_Death_Protest_3 Female_Death_Protest_4 Female_Death_Protest_5 Female_Death_Protest_6 Female_Death_Protest_7 Female_Death_Protest_8

ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಲೇಡಿಗೋಷನ್ ಆಸ್ಪತ್ರೆಗೆ ಕರೆತಂದು ಅಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ನಿರ್ಲಕ್ಷ್ಯ ವಹಿಸಿದ್ದ ವೈದ್ಯರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಶಾಸಕ ಜೆ.ಆರ್. ಲೋಬೋ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಪೂವಕ್ಕ ಮೃತಪಡಲು ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಪೂವಕ್ಕ ಅವರ ಪತಿ ಗಣೇಶ್ ಬಂದರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಲೇಡಿಗೋಷನ್ ಈಕ್ಷಕಿ ವರ್ಗ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಲೇಡಿಗೋಶನ್ ಈಕ್ಷಕಿ ಡಾ.ಶಕುಂತಳಾ ಅವರನ್ನು ವೆನ್‌ಲಾಕ್ ಆಸ್ಪತ್ರೆಗೆ ವರ್ಗಾಯಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಶಕುಂತಲಾ ಅವರ ಮೇಲೆ ಹಿಂದಿನಿಂದಲೇ ಹಲವು ಆರೋಪಗಳು, ದೂರುಗಳು ಬಂದಿದ್ದು ಈ ಕಾರಣಕ್ಕೆ ವರ್ಗ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜನತೆಯ ಆರೋಗ್ಯ ವಿಷಯದಲ್ಲಿ ಸರಕಾರ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ರಕ್ತಹೀನತೆ, ಕಾಲು ಬಾವು ಇತ್ತು: ಪೂವಕ್ಕ ಅವರು ಹಳೆ ಚಿಕಿತ್ಸೆಯ ಯಾವುದೇ ದಾಖಲೆ ಕೊಟ್ಟಿರಲಿಲ್ಲ. ಅವರಿಗೆ ಮೊದಲೇ ರಕ್ತಹೀನತೆ ಇತ್ತು. ಕಾಲು ಮೊದಲೇ ಬಾತಿತ್ತು. ಮಗುವಿನ ತೂಕ ಕಡಿಮೆ ಇತ್ತು. ಈ ಎಲ್ಲ ಕಾರಣಗಳಿಗಾಗಿ ಅವರನ್ನು ಹೆರಿಗೆಯಾಗಿ 15 ದಿನಗಳವರೆಗೂ ಆಸ್ಪತ್ರೆಯಲ್ಲೇ ಪೋಷಣೆ ಮಾಡಲಾಗುತ್ತಿತ್ತು. ವೈದ್ಯರ ನಿರ್ಲಕ್ಷ್ಯವಿರಲಿಲ್ಲ ಎಂದು ಡಾ. ಶಕುಂತಲಾ ತಿಳಿಸಿದ್ದಾರೆ.

Write A Comment