ಕನ್ನಡ ವಾರ್ತೆಗಳು

ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟ್ರಾಕ್ಟರ್ : ಮೂವರ ದುರ್ಮರಣ.

Pinterest LinkedIn Tumblr

Tracter_palit_dead_1

ಮಂಗಳೂರು/ ಸುಳ್ಯ,ಮೇ.08 : ಕಲ್ಲು ಕೋರೆಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಕಮರಿಗೆ ಬಿದ್ದ ಪರಿಣಾಮ ಚಾಲಕ ಸೇರಿ ಮೂವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿಯ ಶೇಣಿ ಎಂಬಲ್ಲಿ ಗುರುವಾರ ನಡೆದಿದೆ. ಬೆಳ್ಳಾರೆ ಕಡೆಗೆ ಕೆಂಪು ಕಲ್ಲಿನ ಕೋರೆಗೆ ಕಾರ್ಮಿಕರನ್ನು ಟ್ರಾಕ್ಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಟ್ರಾಕ್ಟರ್ ಚಾಲಕ ಮಾಧವ ಗೌಡ (35), ಕಾರ್ಮಿಕರಾದ ನಾರಾಯಣ ನಾಯ್ಕ (40), ಸುಬ್ರಹ್ಮಣ್ಯನ್ ರಾಜೇಂದ್ರ (42) ಮೃತರು.

ಮಾಧವ ಗೌಡ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಶೇಣಿ ಬಸ್ ತಂಗುದಾಣದ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಹತ್ತಿರದ ತೋಟದ ಬದಿಯ ಕಮರಿಗೆ ಬಿದ್ದಿದ್ದರಿಂದ ಚಾಲಕ ಮಾಧವ ಮತ್ತು ನಾರಾಯಣ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಗಾಯಾಳು ರಾಜೇಂದ್ರ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದರು. ಟ್ರಾಕ್ಟರ್‌ನಲ್ಲಿದ್ದ ದೇವಪ್ಪ ಶೇಣಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Tracter_palit_dead_2 Tracter_palit_dead_3 Tracter_palit_dead_4

ಮೃತರ ವಿವರ: ಮೃತರಾದ ಚಾಲಕ ಮಾಧವ ಗೌಡರು ಕಳಂಜ ಗ್ರಾಮದ ಗೋಪಾಲಕಜೆಯವರಾಗಿದ್ದು, ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪತ್ನಿ, ತಂದೆ-ತಾಯಿ, ಸಹೋದರ ಇದ್ದಾರೆ. ನಾರಾಯಣ ನಾಯ್ಕ ಅವರು ಕಾಸರಗೋಡಿನ ಮಧೂರು ಗ್ರಾಮದ ಕಲ್ಲಕಟ್ಟ ವರಾಗಿದ್ದು ಮದುವೆ ಆದ ಬಳಿಕ ಪತ್ನಿಯ ಮನೆಯಾದ ಅಮರ ಪಡ್ನೂರು ಗ್ರಾಮದ ಶೇಣಿ ಕುಳ್ಳಾಜೆಯಲ್ಲೇ ವಾಸಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. ಸುಬ್ರಹ್ಮಣ್ಯನ್ ರಾಜೇಂದ್ರ ತಮಿಳುನಾಡು ಮೂಲದವರಾಗಿದ್ದು, ಕೋರೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ. ಶವಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಯಿತು.

ಇಕ್ಕಟ್ಟಾದ ರಸ್ತೆ, ಆಳ ಕಮರಿ: ಚೊಕ್ಕಾಡಿಯ ಶೇಣಿಯಿಂದ ಬೆಳ್ಳಾರೆ ಕಡೆಗೆ ಹೋಗುವ ರಸ್ತೆಯ ಕೆಲವು ಕಡೆ ಅಗಲ ಕಿರಿದಾಗಿದ್ದು, ಶೇಣಿ ಬಸ್ ನಿಲ್ದಾಣದ ಬಳಿ ಒಂದು ಭಾಗ ಆಳ ಕಮರಿ. ಗುರುವಾರ ಬೆಳಗ್ಗೆ ಉರುಳಿದ ಟ್ರಾಕ್ಟರ್ ಸುಮಾರು 20 ಅಡಿ ಆಳಕ್ಕೆ ಉರುಳಿದ್ದು, ಅಲ್ಲಿಂದ ಟ್ರಾಕ್ಟರ್ ಸರಿಸಿ, ಸಿಲುಕಿದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

Write A Comment