ಕನ್ನಡ ವಾರ್ತೆಗಳು

ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಿಷನರ್‌ಗೆ ಗನ್ ಮ್ಯಾನ್

Pinterest LinkedIn Tumblr

Mcc_new_commissioner

ಮಂಗಳೂರು, ಮೇ 5: ತನ್ನ ಕಡಕ್ ಕಾರ್ಯನಿರ್ವಹಣೆ ಶೈಲಿಯಿಂದ ಕಾರ್ಪೋರೇಟರ್ ಗಳ ಕೆಂಗಣ್ಣಿಗೆ ಗುರಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆ ಹೆಬ್ಸಿಬಾ ರಾಣಿ ಕೋರ್ಲಾಪತಿಯವರಿಗೆ ಭದ್ರತೆಯ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ಗನ್ ಮ್ಯಾನ್ ನೀಡಿದೆ.

ನಾಲ್ಕು ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಐ.ಎ.ಎಸ್ ಅಧಿಕಾರಿ ಹೆಬ್ಸಿಬಾ ರಾಣಿ ಕಾರ್ಯವೈಖರಿ ಪಾಲಿಕೆಯ ಬಹುತೇಕ ಸದಸ್ಯರ ವಿರೋಧಕ್ಕೆ ಕಾರಣವಾಗಿತ್ತು. ಆಯುಕ್ತರು ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ, ಅವರ ಕಚೇರಿಯೊಳಗೆ ಪಾಲಿಕೆ ಸದಸ್ಯರು ಪ್ರವೇಶ ಮಾಡಬೇಕಾದರೆ ಅನುಮತಿ ಪಡೆದುಕೊಳ್ಳಬೇಕು ಎಂಬ ಆರೋಪಗಳನ್ನು ಮಾಡುತ್ತಿರುವ ಪಾಲಿಕೆ ಸದಸ್ಯರು ಹೆಬ್ಸಿಬಾ ರಾಣಿ ವರ್ಗಾವಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆಯುಕ್ತೆಯ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಕೆಲವು ಸದಸ್ಯರು ಈ ಹಿಂದೆ ಸಿಎಂ ಮಂಗಳೂರಿಗೆ ಆಗಮಿಸಿದ ಸಂಧರ್ಭದಲ್ಲಿ ಹೆಬ್ಸಿಬಾ ರಾಣಿ ಯವರ ವಿರುದ್ಧ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಹೆಬ್ಸಿಬಾ ರಾಣಿಯವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ಪತ್ರ ಬರೆಯೋದರ ಮೂಲಕ ಗನ್ ಮ್ಯಾನ್ ರಕ್ಷಣೆ ನೀಡುವಂತ್ತೆ ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಬ್ಸಿಬಾ ರಾಣಿಯವರ ಭದ್ರತೆಯ ದೃಷ್ಟಿಯಿಂದ ಗನ್ ಮ್ಯಾನ್ ಒದಗಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಹೆಬ್ಸಿಬಾ ರಾಣಿ ಅಧಿಕಾರ ಸ್ವೀಕಾರ ಮಾಡಿದ ನಂತರ ಪಾಲಿಕೆಯ ಆಡಳಿತ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ವತಹಃ ತಾವೇ ಎಲ್ಲಾ ವಿಚಾರಗಳನ್ನು ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪಾಲಿಕೆಗೆ ಒಳಪಡುವ ಪ್ರದೇಶಗಳ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ , ಕಾಮಗಾರಿಯ ಬಿಲ್ ಮಂಜೂರಾಗಿ, ಕಾಮಗಾರಿ ಪರಿಶೀಲನೆ ಈ ಎಲ್ಲಾ ವಿಚಾರಗಳಲ್ಲೂ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದಂತ್ತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಈ ರೀತಿಯ ಕಾರ್ಯವೈಖರಿ ಪಾಲಿಕೆಯ ಕೆಲವು ಸದಸ್ಯರುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆಯುಕ್ತರು ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೆ ಕಾರ್ಯಭಾರ ನಡೆಸುತ್ತಿರುವುದರಿಂದ ತುರ್ತು ಅಭಿವೃದ್ದಿ ಕಾರ್ಯಗಳು ವಿಳಂಭವಾಗುತ್ತಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ಹಿಡಿತಕ್ಕೆ ಸಿಗದ ಪಾಲಿಕೆ ಆಯುಕ್ತೆ ಹೆಬ್ಸಿಬಾ ರಾಣಿವರು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪರಿಣಾಮ ತನ್ನ ಸುರಕ್ಷತೆಯ ದೃಷ್ಟಿಯಿಂದ ಗನ್ ಮ್ಯಾನ್ ಪಡೆದುಕೊಂಡು ಕಾರ್ಯಭಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹೀಗೆ ಗನ್ ಮ್ಯಾನ್ ಪಡೆದಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿ.

ಭಷ್ಟಾಚಾರ ಮುಕ್ತ ಆಡಳಿತ ನಡೆಸಲು ಪ್ರಯತ್ನಿಸುತ್ತಿರುವ ಯುವ ಅಧಿಕಾರಿಗಳ ಪರಿಸ್ಥಿತಿ ಹೀಗೆ ಆದಲ್ಲಿ ಇನ್ನು ಮುಂದೆ ಅಧಿಕಾರಿಗಳು ನಿಷ್ಠಾವಂತವಾಗಿ ಕರ್ತವ್ಯ ನಿರ್ವಹಿಸುವುದು ಹೇಗೆ ಎಂಬ ಪ್ರಶ್ನೆಯೂ ಹುಟ್ಟುತ್ತಿದೆ. ಗನ್ ಮ್ಯಾನ್ ರಕ್ಷಣೆ ಪಡೆದುಕೊಂಡು ಐ.ಎ,ಎಸ್ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸಬೇಕಾಗಿ ಬಂದಿರುವುದು ನಿಜಕ್ಕೂ ವಿಪರ್ಯಾಸ.

Write A Comment