ಕನ್ನಡ ವಾರ್ತೆಗಳು

ಹೂಡಿಕೆ ಹಣ ಹಿಂತಿರುಗಿಸಲು ಆಗ್ರಹಿಸಿ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಗ್ರಾಹಕರು ಹಾಗೂ ಏಜೆಂಟ್‌‌ರುಗಳ ಬೃಹತ್ ಪ್ರತಿಭಟನೆ

Pinterest LinkedIn Tumblr

agri_gold_prot1

ಮಂಗಳೂರು,ಮೇ.04 : ಅಗ್ರಿಗೋಲ್ಡ್ ವಂಚನೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಗ್ರಾಹಕರು ಮತ್ತು ಏಜೆಂಟ್‌ರುಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಗ್ರಿಗೋಲ್ಡ್ ಸಂಸ್ಥೆ ಗ್ರಾಹಕರಿಂದ ಸಂಗ್ರಹಿಸಿದಂತಹ ಹಣವನ್ನು ಕೂಡಲೇ ಹಿಂತಿರುಗಿಸಬೇಕೆಂದು ಆಗ್ರಹಿಸಿ ಗ್ರಾಹಕರು ಮತ್ತು ಏಜೆಂಟ್ ರುಗಳು ಅಗ್ರಿಗೋಲ್ಡ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ಕಳೆದ 19 ವರ್ಷ ಸರಿಯಾಗಿ ಕಾರ್ಯನಿರ್ವಹಿಸಿದ ಆ್ಯಗ್ರಿಗೋಲ್ಡ್ ಸಂಸ್ಥೆಯಲ್ಲಿ ಇದೀಗ 20ನೆ ವರ್ಷದ ಆರಂಭದಲ್ಲಿಯೇ ಗೊಂದಲ ಕಾಣಿಸಿಕೊಂಡಿದ್ದು, ಕಳೆದ ಆರು ತಿಂಗಳುಗಳಿಂದ ಅಗ್ರಿಗೋಲ್ಡ್ ಸಂಸ್ಥೆ ವ್ಯವಹಾರ ಸ್ಥಗಿತಗೊಳಿಸಿದೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಗ್ರಾಹಕರಿಗೆ ಅವರ ಹಣ ಮರುಪಾವತಿ ಆಗುತ್ತಿಲ್ಲ. ಹಣ ಪಡೆದ ಸಂಸ್ಥೆಯ ಮುಖ್ಯಸ್ಥರು ಆರಾಮವಾಗಿದ್ದಾರೆ. ಆದರೆ ಮನೆ ಮನೆಗಳಿಗೆ ತಿರುಗಿ ಹಣ ಸಂಗ್ರಹಿಸಿದ ಏಜೆಂಟರು ಮತ್ತು ಏಜೆಂಟರ ಮಾತು ನಂಬಿ ಹಣ ಹೂಡಿದವರು ಸಂಕಷ್ಟದಲ್ಲಿದ್ದಾರೆ. ಅಗ್ರಿಗೋಲ್ಡ್‍ನಲ್ಲಿ ವ್ಯವಹಾರ ಮಾಡಿದ್ದಕ್ಕಾಗಿ ಅದರ ಏಜೆಂಟರು ಕಳೆದ ಆರು ತಿಂಗಳುಗಳಿಂದ ನಿದ್ದೆಯೇ ಇಲ್ಲದ ಸ್ಥಿತಿಯಲ್ಲಿ ದಿನ ಕಳೆಯುವಂತಾಗಿದೆ. ಬೆಳಗಾದರೆ ಯಾರು ಮನೆ ಎದುರು ಬಂದು ಹಣ ಕೊಡುವಂತೆ ಒತ್ತಾಯಿಸುತ್ತಾರೆ. ಯಾರು ಫೋನ್ ಮಾಡಿ ಬೈಯ್ಯುತ್ತಾರೆ ಎಂಬ ಆತಂಕ ಕಾಡುತ್ತಲೇ ಇರುತ್ತದೆ. ಊರಿನಲ್ಲೂ, ಮನೆಯಲ್ಲೂ ಗೌರವ ಇಲ್ಲದ ಸ್ಥಿತಿಯಲ್ಲಿ ಏಜೆಂಟರು ಬದುಕು ನಡೆಸುವಂತಾಗಿದೆ ಎಂದು ಪ್ರತಿಭಟನಕಾರರು ತಮ್ಮ ನೋವು ತೋಡಿಕೊಂಡಿದ್ದಾರೆ. .

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗೆ ನಾಲ್ಕು ಲಕ್ಷ ಏಜೆಂಟರಿದ್ದಾರೆ. ಶೇ.90. ಮಹಿಳಾ ಏಜೆಂಟರೇ ಆಗಿದ್ದಾರೆ. ಮಂಗಳೂರಿನಲ್ಲಿ ಏಜೆಂಟರನ್ನು ನೇಮಿಸುವ ಮತ್ತು ಹೆಚ್ಚು ಹೆಚ್ಚು ಹಣ ಸಂಗ್ರಹಕ್ಕೆ ಏಜೆಂಟರಿಗೆ ಹುರುದುಂಬಿಸುತ್ತಿದ್ದ ಕಂಪೆನಿಯ ಪ್ರಮುಖ ಸ್ಥಾನದಲ್ಲಿದ್ದ ರಾಘವೇಂದ್ರ, ಸುಮತಿ ಹೆಗ್ಡೆ, ಪ್ರಕಾಶ್, ಶಿವಾನಂದ ಮಳವಾಗಿ ಯಂತಹವರು ಈಗ ಕಾಣದಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

agri_gold_prot2 agri_gold_prot3

ಹೂಡಿದ ಹಣ ಮ್ಯೂಚಿರಿಟಿ ಸಮಯಕ್ಕೆ ಮರುಪಾವತಿಯಾಗಬೇಕು. ಕಂಪೆನಿಯವರು ಹಣ ಕೊಡುತ್ತಿಲ್ಲ. ಹೂಡಿಕೆ ಮಾಡಿದ ಗ್ರಾಹಕರು ಹಣಕ್ಕಾಗಿ ಏಜೆಂಟರ ಹಿಂದೆ ಬಿದ್ದಿದ್ದಾರೆ. ಕಂಪೆನಿ ಯಾಕೆ ಹಣ ಹಿಂದಿರುಗಿಸುತ್ತಿಲ್ಲ. ಯಾವಾಗ ಹಿಂದಿರುಗಿಸುತ್ತದೆ ಎಂಬ ಬಗ್ಗೆ ಏಜೆಂಟರಿಗೆ ಹೋಗಲಿ ಇದೇ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರಿಗೂ ಗೊತ್ತಿಲ್ಲ. ಅಂದು ನಾನಿದ್ದೇನೆ ಎಂಬ ಭರವಸೆಯ ಮಾತುಗಳನ್ನಾಡಿ ಹಣ ಹೂಡುವಂತೆ ಮಾಡಿದ ತಪ್ಪಿಗಾಗಿ ಮನೆ, ಬಂಗಾರ ಅಡವಿಟ್ಟು ಸಾಲ ಮಾಡಿ ಹಣ ಹಿಂದಿರುಗಿಸ ಬೇಕಾದ ಸ್ಥಿತಿಯಲ್ಲಿ ಏಜೆಂಟರಿದ್ದಾರೆ. ಇಂದಲ್ಲ ನಾಳೆ ಹಣ ಬರಬಹುದು ಎಂಬ ನಿರಿಕ್ಷೆಯೊಂದಿಗೆ ಹಣ ಪಾವತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಳಿಕ ಪ್ರತಿಭಟನಕಾರು ಅಗ್ರಿಗೋಲ್ಡ್ ಸಂಸ್ಥೆ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಗ್ರಾಹಕರಿಗೆ ಹಣ ಹಿಂತಿರುಗಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Write A Comment