ಮಂಗಳೂರು,ಮೇ.04 : ಕುಖ್ಯಾತ ರೌಡಿ ಶೀಟರ್ ಸಂಪತ್ ಭಂಡಾರಿಯನ್ನು ಉರ್ವ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಂಪತ್ ಭಂಡಾರಿಯನ್ನು ಉರ್ವ ಎಸ್.ಐ.ರವೀಶ್ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಳೂರು ಸಮೀಪದ ಪಂಜಿಮೊಗರು ಬಳಿ ಬಂಧಿಸಲಾಗಿದೆ.
ಈತನಿಂದ ಒಂದು ತಲವಾರ ವಶಪಡಿಸಿಕೊಳ್ಳಲಾಗಿದೆ. ನಗರದ ಮಹಿಮಾ ಬಸ್ ಮಾಲಕರಿಗೆ ಹಫ್ತಾ ನೀಡುವಂತೆ ಬೆದರಿಕೆ ನೀಡಿದ ಬಗ್ಗೆ ಈತನ ಮೇಲೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರವೀಶ್ ನಾಯ್ಕ್ ನೇತೃತ್ವದ ತಂಡ ಸಂಪತ್ ಭಂಡಾರಿಯನ್ನು ಬಂಧಿಸಿದೆ.
ಸಂಪತ್ ಭಂಡಾರಿ, 2009 ರಲ್ಲಿ ನಡೆದ ಕುಖ್ಯಾತ ರೌಡಿ ವಾವಂಜೂರು ರೋಹಿ ಯಾನೆ ರೋಹಿದಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಅಲ್ಲದೇ ಕಾವೂರು ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನ ಮೇಲೆ ಸುಮಾರು 12 ರಿಂದ 14 ಪ್ರಕರಣಗಳು ದಾಖಾಲಾಗಿವೆ.