ಕನ್ನಡ ವಾರ್ತೆಗಳು

ದ್ವೀಪದ ಗ್ರಾಮ ಉಪ್ಪಿನಕುದ್ರುವಿನಲ್ಲಿ ಗೊಂಬೆಗಳ ಕಲರವ-ದೇಶ ವಿದೇಶದಲ್ಲೆಡೆ ಕುಣಿದ ಗೊಂಬೆಗಳು

Pinterest LinkedIn Tumblr

ಕುಂದಾಪುರ: ಉಪ್ಪಿನಕುದ್ರು ಗಣೇಶ ಗೊಂಬೆಯಾಟ ಮಂಡಳಿ ಎಂಬುದು ದೇಶದ ಗೊಂಬೆಯಾಟ ಪರಂಪರೆಯಲ್ಲಿ ದೊಡ್ಡ ಹೆಸರು. ಶತಮಾನಗಳ ಹಿಂದಿನಿಂದ ತಲೆಮಾರುಗಳನ್ನು ದಾಟಿ ಸೂತ್ರಧಾರಿಯ ತಾಳಕ್ಕೆ ತಕ್ಕಂತ ಇಂದಿಗೂ ಕುಣಿದು ಪ್ರೇಕ್ಷಕರಲ್ಲಿ ಬೆರಗು ಹುಟ್ಟಿಸುತ್ತಿದ್ದ ಗೊಂಬೆಗಳ ಬಗೆಗೆ ಯಾರಿಗೆ ಆಸಕ್ತಿ ಇಲ್ಲ ಹೇಳಿ. ಆ ಗೊಂಬೆಗಳಲ್ಲಿ ಕಲಾಜೀವಂತಿಕೆಯನ್ನು ತುಂಬುವ ಸೂತ್ರಧಾರಿಗಳ ಕಲಾವಂತಿಕೆಯ ಕಸುವನ್ನು ಹೆಚ್ಚಿಸಲು ಸಸೂತ್ರವಾದ ನೆಲೆ ಒದಗಿಸುವ ಕೆಲಸ ಗೊಂಬೆಯಾಟ ಅಕಾಡೆಮಿಯ ಮೂಲಕ ಸಾಕಾರಗೊಂಡಿದೆ.

Picture 085 Picture 085 Picture 071 Picture 078 Uppinakudru_Gombeyata_Akademy (8) Uppinakudru_Gombeyata_Akademy (5) Uppinakudru_Gombeyata_Akademy (6)

ಶ್ರೀ ಗಣೇಶ ಗೊಂಬೆಯಾಟ ಮಂಡಳಿ
ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಎಂಬ ಪುಟ್ಟ ದ್ವೀಪದಲ್ಲಿ ನೆಲೆನಿಂತ ಗೊಂಬೆಯಾಟಕ್ಕೆ ಸುಮಾರು 350 ವರ್ಷಗಳ ಇತಿಹಾಸವಿದೆ. ಲಕ್ಷ್ಮಣ ಕಾಮತ್, ನರಸಿಂಹ ಕಾಮತ್ ಹಾಗೂ ಮಂಜಪ್ಪ ಕಾಮತ್ ಸಹೋದರರಿಂದ ಪ್ರಾರಂಭಸಲ್ಪಟ್ಟ ಶ್ರೀ ಗಣೇಶ ಗೊಂಬೆಯಾಟ ಮಂಡಳಿಯು ಕಲಾ ಪ್ರಪಂಚದಲ್ಲಿ ಹೊಸ ಶಕೆಯ ಮರುಹುಟ್ಟಿಗೆ ನಾಂದಿಹಾಡಿತ್ತು. ಮುಂದೆ ಅದು ಲಕ್ಷ್ಮಣ ಕಾಮತರಿಂದ ವೆಂಕಟರಮಣ ಕಾಮತರಿಗೆ ಅವರಿಂದ ಮಗ ದೇವಣ್ಣ ಕಾಮತರಿಗೆ ಗೊಂಬೆಯಾಟ ಕಲೆ ಬಳುವಳಿಯಾಗಿ ಬಂತು. ಇವರ ಕಾಲದಲ್ಲಿ ಗೊಂಬೆಯಾಟ ಆರ್ಥಿಕ ಸಂಕಷ್ಟದ ನಡುವೆಯೂ ಗಟ್ಟಿಯಾಗಿ ನೆಲೆಗೊಂಡಿತ್ತು. ತಂದೆ ದೇವಣ್ಣ ಕಾಮತರೊಂದಿಗೆ ಗೊಂಬೆಗಳ ಸೂತ್ರ ಹಿಡಿದ ಕೊಗ್ಗ ಕಾಮತರು ಉಪ್ಪಿನಕುದ್ರು ಗೊಂಬೆಯಾಟವನ್ನು ವಿಶ್ವದ ಕಲಾರಂಗದಲ್ಲಿ ಗುರುತಿಸುವ ಕಾರ್ಯಕ್ಕೆ ಮುಂದಾದರು. ವಂಶಪಾರಂಪರ್ಯವಾಗಿ ಮುಂದವರಿದು ಆರು ತಲೆಮಾರುಗಳನ್ನು ಕಂಡಿರುವ ಈ ಪಾರಂಪರಿಕ ಜನಪದ ಕಲೆ ಗೊಂಬೆಯಾಟ ಶ್ರೀ ಗಣೇಶ ಗೊಂಬೆಯಾಟ ಮಂಡಳಿಯ ಹೆಸರಿನೊಂದಿಗೆ ಇಂದಿಗೂ ಕೊಗ್ಗ ಕಾಮತರ ಪುತ್ರ ಭಾಸ್ಕರ ಕಾಮತರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಈ ತಂಡದಲ್ಲಿ ದುಡಿಯುತ್ತಿರುವ ಎಲ್ಲಾ ಕಲಾವಿದರೂ ಗೊಂಬೆಯಾಟ ಕಲೆಯಷ್ಟು ಆರ್ಥಿಕವಾಗಿ ಶ್ರೀಮಂತರಲ್ಲ. ಆದರೆ ಎಂದಿಗೂ ಗೊಂಬೆಯಾಟವನ್ನು ದುಡ್ಡು ಮಾಡುವ ಕಸುಬನ್ನಾಗಿ ಕಂಡಿಲ್ಲ ಎಂಬುದು ವಿಶೇಷ.

ಭಾರತದ ವಿವಿಧ ರಾಜ್ಯಗಳಾದ ಅಸ್ಸಾಂ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಗೊಂಬೆಯಾಟ ಪರಂಪರೆ ಇದೆಯಾದರೂ ಕರ್ನಾಟಕದ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡದ ವಿಶಿಷ್ಟ ಕಲೆಗಾಗಿ ಗುರುತಿಸಿಕೊಂಡಿರುವ ಯಕ್ಷಗಾನದ ಪೂರ್ಣ ಪ್ರಮಾಣದ ಪ್ರಭಾವ ಇವರುವುದನ್ನು ಇವರ ಗೊಂಬೆಯಾಟದಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಯಕ್ಷ ವೇಷಧಾರಿಗಳಂತೆಯೇ ಗೊಂಬೆಗಳು ಅಲಂಕಾರಗೊಂಡಿರುತ್ತದೆ. ಪೌರಾಣಿಕ ಪ್ರಸಂಗಗಳನ್ನು ಹಿಮ್ಮೇಳದೊಂದಿಗೆ ಇಲ್ಲಿಯೂ ಆಡಲಾಗುತ್ತದೆ. ಯಕ್ಷಗಾನದ ಮೆರಗು, ತಂತ್ರಗಾರಿಕೆಯನ್ನು ಇಲ್ಲಿಯೂ ಬಳಸಲಾಗುತ್ತದೆ.

Uppinakudru_Gombeyata_Akademy (4) Uppinakudru_Gombeyata_Akademy (3) Uppinakudru_Gombeyata_Akademy (2) Uppinakudru_Gombeyata_Akademy (1)

(File Photo)

ಗೊಂಬೆಯಾಟದ ಉಳಿವಿಗಾಗಿ ಕೊಗ್ಗ ಕಾಮತರು ಆರಂಭಿಸಿದ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಮೆಮೋರಿಯಲ್ ಟ್ರಸ್ಟ್ ನ ಮೂಲಕ ಮುನ್ನಡೆಯುತ್ತಿರುವ ಗೊಂಬೆಯಾಟ ಮಂಡಳಿಯು ಕೊಗ್ಗ ಕಾಮತರಿಂದ ಆರಂಭಿಸಿ, ಭಾಸ್ಕರ ಕಾಮತರು ಸಾರಥ್ಯ ವಹಿಸಿಕೊಂಡಿರುವಾಗಲೂ ದೇಶ-ಸಾಗರಗಳನ್ನು ದಾಟಿ, ಕನ್ನಡ, ಹಿಂದಿ, ಕೊಂಕಣಿ, ಇಂಗ್ಲೀಷ ಭಾಷೆಯೊಂದಿಗೆ, ಇತ್ತಿಚಿಗೆ ಸಾಮಾಜಿಕ ಪ್ರಸಂಗ, ಪ್ರಾತ್ಯಕ್ಷಿಕೆಗಳೊಂದಿಗೆ ಹೆಚ್ಚು ಜನರನ್ನು ತಲುಪುವ ಮಾಧ್ಯಮವೆನಿಸಿಕೊಂಡಿದೆ.

ಗೊಂಬೆಯಾಟದ ಕಲಾವಿದರು:
ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಲ್ಲಿ ಗಣೇಶ್ ಕೊಗ್ಗ ಕಾಮತರೊಂದಿಗೆ ಭಾಗವತರಾಗಿ ಉಮೇಶ್ ಸುವರ್ಣ, ಮದ್ದಳೆಯಲ್ಲಿ ಮಹಾಬಲೇಶ್ವರ ಶೇಟ್, ಏರು ಮದ್ದಳೆಯಲ್ಲಿ ಚಂದ್ರಯ್ಯ ಆಚಾರ್, ಚಂಡೆಯಲ್ಲಿ ಕುಮಾರ ಮೊಗವೀರ, ಅರ್ಥಗಾರಿಕೆಯಲ್ಲಿ ನಾರಾಯಣ ಬಿಲ್ಲವ, ರಾಮ ಬಳೆಗಾರ, ಶಂಕರ ಬಿಲ್ಲವ, ಸೂತ್ರದಾರಿಗಳಾಗಿ ಮಂಜುನಾಥ ಮೈಪಾಡಿ, ವಿಠ್ಠಲ ಕಾಮತ್, ವೆಂಕಟರಮಣ ಬಿಡುವಾಳು, ಪ್ರಭಾಕರ ಆಚಾರ್, ರೋನಿ, ಭರತ್ ಮೈಪಾಡಿ ಶ್ರಮಿಸುತ್ತಿದ್ದಾರೆ.

Uppinakudru_Gombeyata_Akademy (7) Picture 024 Picture 018 Picture 021 Picture 026

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ:
ಬದುಕಿನ ಪ್ರಶ್ನೆ ಬಂದಾಗಲೆಲ್ಲಾ ಗೊಂಬೆಯಾಟದ ಕಲೆಯ ಉಳಿವಿನ ಪ್ರಶ್ನೆಯೂ ಎದ್ದಿತ್ತು. ಆದರೂ ವಂಶಪಾರಂಪರ್ಯವಾಗಿ ಬೆಳೆದು ಬಂದ ಈ ಕಲೆ ಮುಂದುವರಿಯಬೇಕು ಎಂಬುದು ಹೋರಾಟದ ಬದುಕು ನಡೆಸಿದ ಈ ಕಲಾವಿದರದ್ದಾಗಿತ್ತು. ಅದಕ್ಕಾಗಿಯೇ ಭಾಸ್ಕರ ಕೊಗ್ಗ ಕಾಮತ್ ಅವರಿಂದ ಗೊಂಬೆಯಾಟಕ್ಕೆ ಅಕಾಡೆಮಿ ರೂಪು ನೀಡುವ ಪ್ರಯತ್ನ ಮುಂದಾದರು. ತನ್ನ ಬ್ಯಾಂಕ್ ಉದ್ಯೋಗವನ್ನೂ ಬಿಟ್ಟು ಗೊಂಬೆಗಳೊಂದಿಗೆ ಬದುಕು ಕಟ್ಟಕೊಂಡಿದ್ದ ಭಾಸ್ಕರ್ ಅವರ ಕನಸುಗಳು ದೊಡ್ಡವೇ ಇದ್ದಿದ್ದರೂ ಅದಕ್ಕೆ ಆರ್ಥಿಕ ಬೆಂಬಲ ನೀಡುವವರು ಕಡಿಮೆಯಿದ್ದರು. ಈ ಹಿಂದೆ ಗೊಂಬೆಯಾಟವನ್ನು ಯಕ್ಷಗಾನ ಅಕಾಡೆಮಿಯೊಂದಿಗೆ ಸೇರಿಸುವ ಒಂದು ಪ್ರಯತ್ನ ನಡೆದಿತ್ತಾದರೂ ಅದು ಯಕ್ಷಗಾನಕ್ಕೆ ಮಾತ್ರ ಸಂಬಂಧಿಸಿದ ಪ್ರಕಾರವಲ್ಲ ಎಂಬುದನ್ನು ಮನವರಿಕೆ ಮಾಡಿ ಅದರಿಂದ ದೂರ ಸರಿದಿದ್ದರು. ಇಷ್ಟು ಬಿಟ್ಟರೇ ಸರಕಾರ, ವಿಶ್ವವಿದ್ಯಾನಿಲಯ, ಜನಪ್ರತಿನಿಧಿಗಳಿಂದ ಗೊಂಬೆಯಾಟವೂ ಒಂದು ಜನಪದೀಯ ಕಲಾ ಪ್ರಕಾರವೆಂದು ಗುರುತಿಸುವ ಕೆಲಸ ಆಗಿರಲಿಲ್ಲ.
ಹೀಗಿರುವಾಗಲೇ ಒಂದು ಅಕಾಡೆಮಿ ಸ್ಥಾಪಿಸುವ ಆಲೋಚನೆ  ಅವರಲ್ಲಿ ಮೂಡಿತ್ತು. ಅದರಂತೆ ಯೋಜನೆ ಸಿದ್ಧಗೊಂಡಾಗ ಅವರ ನೇರವಿಗೆ ಬಂದವರು ಸೆಂಚುರಿ ಬಿಲ್ಡರ್ಸ್ ನ ನಿರ್ದೇಶಕರಾದ ಡಾ| ದಯಾನಂದ ಪೈ ಹಾಗೂ ಇನ್ಫೋಸಿಸ್ ಫೌಂಡೇಶನ್ ನ ಡಾ ಸುಧಾಮೂರ್ತಿ. ಇವರಿಬ್ಬರ ಸಹಕಾರದಿಂದಾಗಿ ಒಂದು ಸುಂದರವಾದ ಅಕಾಡೆಮಿ ಕಟ್ಟಡ ಉಪ್ಪಿನಕುದ್ರು ಪರಿಸರದಲ್ಲಿ ಇಂದು ತಲೆ‌ಎತ್ತಿ ನಿಂತಿದೆ.

ಅಕಾಡೆಮಿಯ  ಕಾರ್ಯಕ್ರಮಗಳು:
ಗೊಂಬೆಗಳಿಗೆ ಜೀವ ತುಂಬುವ ಗೊಂಬೆಯಾಟದ ಕಲಾವಿದರಿಗೆ ಕ್ಷೇಮನಿಧಿಯನ್ನು ತೆಗೆದಿರಿಸುವುದರಿಂದ ಮೊದಲ್ಗೊಂಡು ಅಕಾಡೆಮಿಯ ಕಟ್ಟಡದಲ್ಲಿ ಪ್ರತಿ ತಿಂಗಳೂ ಜನಪದ ಯಕ್ಷಗಾನ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ಅಕಾಡೆಮಿಗೆ ಆಪ್ತರನ್ನಾಗಿಸುವುದು. ವಿವಿಧ ಊರು ಮತ್ತು ಶಾಲೆಗಳಲ್ಲಿ ಗೊಂಬೆಯಾಟ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿ ಈ ಕಲೆಯ ಬಗ್ಗೆ ಜಾಗೃತಿ ಮೂಡಿಸುವುದು. ಗೊಂಬೆಯಾಟ ಕಲೆಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಕಲಾಮಾಧ್ಯಮವಾಗಿ ರೂಪಿಸಲು ಶ್ರಮಿಸುವುದು. ಗೊಂಬೆಯಾಟದ ಬಗ್ಗೆ ಅರಿವು ಮೂಡಿಸಲು ಅದಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಆರಂಭಿಸುವುದು, ಪತ್ರಿಕೆಗಳನ್ನು ಹೊರತರುವುದು, ಗೊಂಬೆಯಾಟ ಅಕಾಡೆಮಿ ಕಟ್ಟಡದಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕಿಡುವು ಮುಂತಾದ ಮಹತ್ತರವಾದ ಯೋಜನೆಗಳು ಗಣೇಶ್ ಅವರ ಮುಂದಿದೆ.
ಬಹುಮುಖ್ಯವಾಗಿ ಗೊಂಬೆಯಾಟ ಅಕಾಡೆಮಿ ಕೇವಲ ಉಪ್ಪಿನಕುದ್ರು ಕಾಮತರ ಮನೆತನಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಅದು ದೇಶದ ವಿವಿಧ ರಾಜ್ಯಗಳಲ್ಲಿರುವ ವಿವಿಧ ಪ್ರಕಾರಗಳ ಗೊಂಬೆಯಾಟಗಳನ್ನು ಸಂಘಟಿಸಿ, ಅದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ನಾಂದಿ ಹಾಡಿದೆ ಎಂಬುದನ್ನು ಮನಗಾಣಬೇಕು.

ಸರಕಾರದ ನೆರವು ಬೇಕು:
ಉಪ್ಪಿನಕುದ್ರು ಶ್ರೀ ಗಣೇಶ ಗೊಂಬೆಯಾಟ ಮಂಡಳಿಯನ್ನಾಗಲಿ ಅದರಂತೆ ರಾಜ್ಯದ ಇತರ ಗೊಂಬೆಯಾಟ ಮಂಡಳಿಯನ್ನಾಗಲಿ ಒಂದು ಪ್ರಮುಖವಾದ ಕಲಾ ಪ್ರಕಾರ ಎಂಬ ನೆಲೆಯಲ್ಲಿ ಸರಕಾರ ಇಂದಿಗೂ ಪರಿಗಣಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧ್ಯಕ್ಷರು, ಆಧಿಕಾರಿಗಳಿಗೆ ಇದರ ಅರಿವೂ ಇದ್ದಂತಿಲ್ಲ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗೊಂಬೆಯಾಟ ಅಕಾಡೆಮಿಯ ಕಾರ್ಯವೈಖರಿಯನ್ನು ಈವರೆಗೆ ಪರಿಶೀಲಿಸದಿರುವುದು ಇದಕ್ಕೊಂದು ಸದ್ಯದ ನಿದರ್ಶನ. ಕಲಾತಂಡದಲ್ಲಿ ದುಡಿಯುವ ಕಲಾವಿದರಿಗೆ ಸೂಕ್ತ ಗೌರವಧನ, ಕಲೆಯನ್ನು ಉಳಿಸುವ ನಿಟ್ಟನಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮ ಇವೆಲ್ಲದರ ಬಗೆಗೂ ಸರಕಾರ ಚಿಂತಿಸಬೇಕಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಇದೊಂದು ಅಧ್ಯಯನದ ವಸ್ತುವಾಗಬೇಕಿದೆ.

Write A Comment