ಕನ್ನಡ ವಾರ್ತೆಗಳು

ಮಾಮ್ ವತಿಯಿಂದ ಮನೋಭಿನಂದನೆ – ವಿವಿ ಅಡ್ಜಂಕ್ಟ್ ಪ್ರೊಫೆಸರ್ ಆಗಿ ಎಂಪಿ ಆಯ್ಕೆ: ಪ್ರೊ.ಭೈರಪ್ಪ

Pinterest LinkedIn Tumblr

Maam_manobhinandana_1

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ’ ಕಾರ್ಯಕ್ರಮ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪ, ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆ ಪಕ್ವತೆಯನ್ನು ಪಡೆದಿರುವ ಮನೋಹರ ಪ್ರಸಾದ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಇವರ ಸೇವೆ ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಅವರನ್ನು ಅಡ್ಜಂಕ್ಟ್ ಫ್ರೊಫೆಸರ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ವಿವಿಯಲ್ಲಿ ಅಡ್ಜಂಕ್ಟ್ ಫ್ರೊಫೆಸರ್‌ಗಳನ್ನು ನೇಮಕ ಮಾಡುವ ಅವಕಾಶವಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಆಯ್ಕೆಯ ಕುರಿತು ಅಧಿಕೃತವಾಗಿ ಸೋಮವಾರವೇ ಮನೋಹರ್ ಪ್ರಸಾದ್‌ಗೆ ಪತ್ರ ರವಾನಿಸುವುದಾಗಿ ಕುಲಪತಿ ನುಡಿದರು.

Maam_manobhinandana_2 Maam_manobhinandana_3 Maam_manobhinandana_4

ನನ್ನ ಬದುಕಿನ ದೊಡ್ಡ ಭಾಗ್ಯ

ಮಾಮ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮನೋಹರ್ ಪ್ರಸಾದ್, ಈ ಗೌರವ ನನ್ನ ಬದುಕಿನ ಬಹುದೊಡ್ಡ ಭಾಗ್ಯ. ಇದರ ಮುಂದೆ ಯಾವ ಪ್ರಶಸ್ತಿಯೂ ಸರಿಸಾಟಿಯಾಗಲಾರದು. ಅದ್ದೂರಿ ರೀತಿಯಲ್ಲಿ ಆಯೋಜಿಸಿರುವ ಈ ಅಭಿನಂದಾ ಕಾರ್ಯಕ್ರಮಕ್ಕೆ ಮಾಮ್‌ಗೆ ಅಭಿನಂದನೆಗಳು ಎಂದರು.

ಇದೇ ಸಂದರ್ಭ ಅವರು ಮಾಮ್ ವತಿಯಿಂದ ಒದಗಿಸಲಾದ ರೂ. ಒಂದು ಲಕ್ಷ ಮೊತ್ತದ ಚೆಕ್‌ನಲ್ಲಿ ರೂ.೧ನ್ನು ಉಳಿಸಿಕೊಂಡು ರೂ.1 ಲಕ್ಷವನ್ನು ಮಾಮ್ ಚಟುವಟಿಕೆಗಳಿಗಾಗಿ ಹಿಂದಿರುಗಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಸುಧಾಕರ ಪೇಜಾವರ ಮುಂತಾದವರು ಅಭಿನಂದಿಸಿ ಮಾತನಾಡಿದರು.ತರಂಗದ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಪೈ ಅಭಿನಂದನಾ ಸಂಚಿಕೆ ಬಿಡುಗಡೆಗೊಳಿಸಿದರು.

ಉದಯವಾಣಿ ಸಂಸ್ಥೆಯ ಮುಖ್ಯಸ್ಥ ಸತೀಶ್ ಪೈ, ಸ್ಪೋರ್ಟ್ಸ್ ಪ್ರಮೋಟರ್‍ಸ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಅಣ್ಣಪ್ಪ ಪೈ, ಉದ್ಯಮಿ ಅಶೋಕ್ ಶೇಟ್, ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.

ಮಾಮ್ ಅಧ್ಯಕ್ಷ ವೇಣು ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಂಗನಿರ್ದೇಶಕ ನಾ.ದಾಮೋದರ ಶೆಟ್ಟಿ ಮತ್ತು ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Maam_manobhinandana_5

Maam_manobhinandana_6 Maam_manobhinandana_7

ಪದವಿ ಕಾಲೇಜುಗಳಲ್ಲಿ ಪಿ‌ಎಚ್‌ಡಿಗೆ ಮಾರ್ಗದರ್ಶನ

ಮನೋಭಿನಂದನೆಯ ಬಳಿಕ `ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿವಿ ಕೊಡುಗೆ’ ವಿಷಯದ ಕುರಿತಂತೆ ವಿಚಾರ ಸಂಕಿರಣ ನಡೆಯಿತು.ವಿಚಾರ ಸಂಕಿರಣದಲ್ಲಿ ಉಪಸಂಹಾರ ಮಾಡಿ ಮಾತನಾಡಿದ ಕುಲಪತಿ ಪ್ರೊ.ಕೆ.ಭೈರಪ್ಪ, ಇನ್ನು ಮುಂದೆ ಪದವಿ ಕಾಲೇಜುಗಳ ಪ್ರೊಫೆಸರ್‌ಗಳಿಗೂ ಪಿ‌ಎಚ್‌ಡಿಗೆ ಮಾರ್ಗದರ್ಶನ ಮಾಡುವ ಅವಕಾಶ ಕಲ್ಪಿಸಲಾಗುವುದು ಎಂದರು.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇನ್ನು ಮುಂದೆ ಗ್ರಾಮ ದತ್ತುಪಡೆದು ಅಧ್ಯಯನ ನಡೆಸಲು ಕೂಡ ಅವಕಾಶ ಕಲ್ಪಿಸಲಾಗುವುದು. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಸ್ಪಂದಿಸಲು ಸಾಧ್ಯವಿದೆ. ವಿವಿ ಸಮಗ್ರ ಅಭಿವೃದ್ಧಿಗೆ ತಜ್ಞರು, ಚಿಂತಕರ ಜತೆ ಸೇರಿ ಚರ್ಚಿಸಿ ರೂಪುರೇಶೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆ ನಿವೃತ್ತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ, ಸರ್ಕಾರ ವಿವಿಗೆ ನೇಮಕ ಮಾಡುವಂತೆ ಆಗಬಾರದು. ರಾಜಕಾರಣಿಗಳ ನಿಯಂತ್ರಣದಲ್ಲಿ ವಿವಿ ಇರಬಾರದು. ಗುಣಮಟ್ಟದ ಸೈಕ್ಷಣಿಕ ಸಂಸ್ಥೆಯಾಗಿ ವಿವಿ ಅಭಿವೃದ್ಧಿಯಾಗಬೇಕು ಎಂದರು.

ವಿವಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕಲಾ ವಿಭಾಗದ ಡೀನ್ ಪ್ರೊ.ಕೆ.ಚಿನ್ನಪ್ಪ ಗೌಡ ಮಾತನಾಡಿ,ವಿವಿ ಸ್ಥಾಪಕ ಸದಸ್ಯ ಪ್ರೊ.ಶ್ರೀಪತಿ ತಂತ್ರಿ, ಅಮುಕ್ತ್ ಅಧ್ಯಕ್ಷ ನೋರ್ಬರ್ಟ್ ಲೋಬೋ ಸಂಪನ್ಮೂಲ ವ್ಯಕ್ತಿಯಾಗಿದ್ದರು. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Write A Comment