ಕನ್ನಡ ವಾರ್ತೆಗಳು

ದೇವದಾಸ್ ಕಾಪಿಕಾಡ್ ನಿರ್ದೇಶನದ “ಚಂಡಿಕೋರಿ” ತುಳುಚಿತ್ರಕ್ಕೆ ಮಹೂರ್ತ

Pinterest LinkedIn Tumblr

candi_kori_film

ಮಂಗಳೂರು,ಎ.25 : ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಖ್ಯಾತ ನಾಟಕಕಾರ, ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಅವರ ಕತೆ, ಚಿತ್ರಕತೆ ಹಾಗೂ ನಿರ್ದೇಶನದ “ಚಂಡಿಕೋರಿ’ ತುಳು ಚಲನಚಿತ್ರಕ್ಕೆ ಶುಕ್ರವಾರ ನಗರದ ಶ್ರೀ ಶರವು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿತು. ಬೊಳ್ಳಿ ಮೂವೀಸ್‌ ಬ್ಯಾನರ್‌ನಲ್ಲಿ ಶರ್ಮಿಳಾ ಕಾಪಿಕಾಡ್‌ ಹಾಗೂ ಸಚಿನ್‌ ಸುಂದರ್‌ ಅವರ ನಿರ್ಮಾಪಕತ್ವದಲ್ಲಿ ನಿರ್ಮಾಣವಾಗಲಿರುವ “ಚಂಡಿಕೋರಿ’ ಸಂಪೂರ್ಣ ಮನೋರಂಜನ ಸಿನೆಮಾವಾಗಿದೆ. ಹಾಸ್ಯ, ವೈಚಾರಿಕತೆ, ಉತ್ತಮ ಸಂದೇಶಗಳ ಜತೆಗೆ ತುಳುನಾಡಿನ ಹಿರಿಮೆ ಗರಿಮೆ, ಸಂಸ್ಕಾರ ಸಾರುವ ಈ ಸಿನೆಮಾ ತುಳು ಚಿತ್ರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬರಲಿದೆ ಎಂದು ದೇವದಾಸ್‌ ಕಾಪಿಕಾಡ್‌ ವಿವರಿಸಿದರು.

ತುಳು ಸಿನೆಮಾ ರಂಗದ ಖ್ಯಾತನಾಮರು ತಾರಾಗಣದಲಿದ್ದಾರೆ. ಜತೆಗೆ ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ನಾಯಕನಾಗಿ ಅರ್ಜುನ್‌ ಕಾಪಿಕಾಡ್‌ ಹಾಗೂ ನಾಯಕಿಯಾಗಿ ಹೊಸಮುಖ ಕರೀಷ್ಮಾ ಅಮೀನ್‌ ನಟಿಸಲಿದ್ದಾರೆ. ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ಅರವಿಂದ ಬೋಳೂರು, ಗೋಪಿನಾಥ ಭಟ್‌, ಚೇತನ್‌ ರೈ ಮಾಣಿ, ಡಿ.ಎಸ್‌. ಬೋಳೂರು, ಸರೋಜಿನಿ ಶೆಟ್ಟಿ, ಶೋಭಾ ರೈ, ಸುಮಿತ್ರಾ ರೈ, ಮನೀಶಾ, ಸುಜಾತಾ, ತಿಮ್ಮಪ್ಪ ಕುಲಾಲ್‌, ಸುರೇಶ್‌ ಕುಲಾಲ್‌ ನಟಿಸಲಿದ್ದಾರೆ.

chandi_kori_FILM_2 chandi_kori_FILM_3

ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ಹಾಗೂ ಸಂಗೀತ ದೇವದಾಸ ಕಾಪಿಕಾಡ್‌ ಅವರದ್ದು. ಸಂಗೀತ ಸಂಯೋಜನೆ ಮಣಿಕಾಂತ್‌ ಕದ್ರಿ, ಕ್ಯಾಮೆರಾ ಪಿ.ಎಲ್‌. ರವಿ, ಸಂಕಲನ ಸುಜಿತ್‌ ನಾಯಕ್‌. ಚಂಡಿಕೋರಿ ಒಂದೇ ಹಂತದಲ್ಲಿ 30 ದಿನಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಮಂಗಳೂರಿನ ಸುಂದರ ಪ್ರಕೃತಿ ಸೊಬಗಿನ ನಡುವೆ ಪಡೀಲ್‌, ವೀರನಗರ, ಅತ್ತಾವರ, ಸುರತ್ಕಲ್‌ ಹಾಗೂ ಕೊಂಚಾಡಿಯಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಕಾಪಿಕಾಡ್‌ ತಿಳಿಸಿದರು.

chandi_kori_FILM_4 chandi_kori_FILM_5 chandi_kori_FILM_6 chandi_kori_FILM_8chandi_kori_FILM_7

 ಶರ್ಮಿಳಾ ಕಾಪಿಕಾಡ್‌, ಸಚಿನ್‌ ಸುಂದರ್‌, ಅರ್ಜುನ್‌ ಕಾಪಿಕಾಡ್‌, ಕರೀಷ್ಮಾ ಅಮೀನ್‌, ನವೀನ್‌ ಡಿ. ಪಡೀಲ್‌, ವೀರೇಂದ್ರ ಶೆಟ್ಟಿ ಕಾವೂರು, ಮಾಧವ ಬಗಂಬಿಲ, ಸುಂದರ್‌, ಪಿ.ಎಲ್‌. ರವಿ ಮೊದಲಾದವರು ಉಪಸ್ಥಿತರಿದ್ದರು. ನರೇಶ್‌ ಸಸಿಹಿತ್ಲು ನಿರೂಪಿಸಿದರು.

ಮನುಷ್ಯನ ತಾಳ್ಮೆಯನ್ನು ಎಂದೂ ಪರೀಕ್ಷೆ ಮಾಡಲು ಹೋಗಬೇಡಿ ಎಂಬುದು ಚಂಡಿಕೋರಿ ಚಿತ್ರದ ಮುಖ್ಯ ಸಂದೇಶ. ಉತ್ಕೃಷ್ಟ ಮಟ್ಟದ ಸಾಹಸ, ವಿಭಿನ್ನ ಶೈಲಿಯ 4 ಹಾಡುಗಳಿವೆ. ಮುಂದಿನ ಆಗಸ್ಟ್‌ನಲ್ಲಿ ತೆರೆಕಾಣಲಿರುವ ಈ ತುಳುಚಿತ್ರ ಅಭಿಮಾನಿಗಳ ಮನಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ದೇವದಾಸ್‌ ಕಾಪಿಕಾಡ್‌ ಹೇಳಿದರು.

Write A Comment