ಕನ್ನಡ ವಾರ್ತೆಗಳು

ಕಲ್ಲಡ್ಕ ನರಹರಿ – ದಾಸಕೋಡಿ ಸಂಪರ್ಕದ ಬೈಪಾಸ್ ನಿರ್ಮಾಣಕ್ಕೆ ಸಮೀಕ್ಷೆ.

Pinterest LinkedIn Tumblr

kalladka_daskodi_road

ಬಂಟ್ವಾಳ,ಎ. 22:  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್-ಹಾಸನ ಚತುಷ್ಪಥ ರಸ್ತೆ ನಿರ್ಮಾಣ ಕಲ್ಲಡ್ಕ ಪೇಟೆ ಯಥಾಸ್ಥಿತಿ ಉದ್ದೇಶಿತ ಅಧಿಕಾರಿಗಳ ಮಟ್ಟದ ಮಹತ್ವದ ಸಭೆಯೊಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉಪಸ್ಥಿತಿಯಲ್ಲಿ ಮಂಗಳವಾರ ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ನಡೆದಿದೆ.

ಕಲ್ಲಡ್ಕ ನರಹರಿ ನಗರ-ದಾಸಕೋಡಿ 1.78 ಕಿ.ಮೀ ಬೈಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದ್ದು, ರಸ್ತೆ ಹಾದುಹೋಗುವ ಸ್ಥಳವನ್ನು ಸಾಧ್ಯವಾದಷ್ಟರ ಮಟ್ಟಿಗೆ ಸರಕಾರಿ ಜಮೀನಿನಲ್ಲಿ ಸರ್ವೆ ಸಮೀಕ್ಷೆ ಮಾಡಲು ಸಚಿವರು ಸೂಚಿಸಿದ್ದಾರೆ. ಈ ಹಿಂದೆ ಗೂಗಲ್ ಸರ್ವೆಯಂತೆ ಕಲ್ಲಡ್ಕದ ಖಾಸಗಿ ಪ್ರೌಢ ಶಾಲೆಯ ಜಮೀನಿನಲ್ಲಿ ಹಾದು ಹೋಗುವಂತೆ ನಕ್ಷೆ ತಯಾರಿಸಿದ್ದು, ಅದನ್ನು ಹೊರತು ಪಡಿಸಿ ಸರ್ವೆ ನಡೆಸುವಂತೆ ಸಚಿವರು ಮತ್ತು ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಲಾಖೆಯ ಸರ್ವೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಸೂಚಿಸಿದರು.

ಕನಿಷ್ಟ ಸಂಖ್ಯೆಯಲ್ಲಿ ಮನೆಗಳ ತೆರವು, ಅಂಗಡಿ ಮುಂಗಟ್ಟುಗಳ ತೆರವು, ಖಾಸಗಿ ಜಮೀನು ಸೇರ್ಪಡೆ ಬಗ್ಗೆ ಸರ್ವೆ ನಡೆಸುವಂತೆ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದೇ ಉದ್ದೇಶಕ್ಕೆ ಇನ್ನಷ್ಟು ದಿನ ತೆಗೆಯದಂತೆ ಸಚಿವರು ಸೂಚನೆ ನೀಡಿದರು. ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಯನಿರ್ವಾಹಕ ಇಂಜಿನಿಯರ್ ಸಿ. ನಟರಾಜ್, ಸಿಜಿಎಂ ರೆಡ್ಡಿ, ಫ್ರೋಜೆಕ್ಟ್ ಡೈರಕ್ಟರ್ ಎಂ. ಫೆರ್ನಾಂಡಿಸ್, ಭೂ ಸ್ವಾಧೀನ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಅಧಿಕಾರಿಗಳಾದ ಎ.ಪಿ. ಭಟ್, ಕಲ್ಲಡ್ಕ ಪ್ರದೇಶದ ಪ್ರಮುಖರಾದ ದಿನೇಶ್ ಶೆಣೈ, ತಿರುಮಲೇಶ್ವರ ಭಟ್, ಕೆ.ಪದ್ಮನಾಭ ರೈ, ಬಿ.ಕೆ. ಇದಿನಬ್ಬ, ಮಹಮ್ಮದ್ ಹನೀಫ್, ಕುಂಞ ಅಹಮ್ಮದ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಉಮೇಶ್ ಭಟ್ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.

Write A Comment