ಮಂಗಳೂರು, ಎ.22: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಭವನಕ್ಕೆ ಎ.24ರಂದು ಸಂಜೆ 4ಕ್ಕೆ ಮಲ್ಲಿಕಟ್ಟೆಯಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೇರವೇರಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಎಂ.ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಸಚಿವರಾದ ಬಿ.ರಮಾನಾಥ ರೈ, ಶ್ರೀನಿವಾಸ ಪ್ರಸಾದ್, ವಿನಯ ಕುಮಾರ್ ಸೊರಕೆ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಶಾಸಕರಾದ ಜೆ.ಆರ್.ಲೋಬೊ, ವಸಂತ ಬಂಗೇರ, ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ ಭಾಗವಹಿಸಲ್ಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕನಸು ಹಾಗೂ ಪಕ್ಷದ ಇತರ ನಾಯಕರ ಆಶಯದಂತೆ ನಗರದ ಮಲ್ಲಿಕಟ್ಟೆ ಲಯನ್ಸ್ ಮಂದಿರದ ಬಳಿಯ 9 ಸೆಂಟ್ಸ್ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ಭವನವು ಕಚೇರಿ, ಸಭಾಂಗಣ, ಪತ್ರಿಕಾಗೋಷ್ಠಿ ಕೊಠಡಿಯನ್ನೊಳಗೊಂಡು ಸುಸಜ್ಜಿತವಾಗಿ ರೂಪುಗೊಳ್ಳಲಿದೆ ಎಂದು ಕೋಡಿಜಾಲ್ ತಿಳಿಸಿದರು.
ಪಕ್ಷದ ಮುಖಂಡರಾದ ಕೆ.ಶಶಿಧರ ಹೆಗ್ಡೆ, ನಾಗೇಂದ್ರಕುಮಾರ್, ಪದ್ಮನಾಭ ನರಿಂಗಾನ, ಧರಣೇಂದ್ರಕುಮಾರ್, ವಿಶ್ವಾಸ್ ಕುಮಾರ್ ದಾಸ್, ಟಿ.ಕೆ.ಸುಧೀರ್, ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.