ಕನ್ನಡ ವಾರ್ತೆಗಳು

ಎಂಆರ್‌ಪಿಎಲ್ ಕೋಕ್, ಸಲ್ಫರ್ ಘಟಕದಿಂದ ಸ್ಥಳಿಯರಿಗೆ ಸಮಸೈ : ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಮುಂದುವರಿದ ಹೋರಾಟ

Pinterest LinkedIn Tumblr

Mrpl_Jokatte_Protest

ಮಂಗಳೂರು, ಎ.21: ಎಂಆರ್‌ಪಿಎಲ್‌ನ ತೃತೀಯ ವಿಸ್ತರಣಾ ಹಂತದ ಕೋಕ್ ಸಲ್ಫರ್ ಘಟಕದಿಂದ ಆಗುತ್ತಿರುವ ತೊಂದರೆಯ ವಿರುದ್ಧ ಹೋರಾಟವನ್ನು ಮುಂದುವರಿಸಿರುವ ಜೋಕಟ್ಟೆ ನಾಗರಿಕರು ಇದೀಗ, ಘಟಕಗಳ ಅನುಮತಿಯನ್ನು ನವೀಕರಿಸಿದ್ದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ್ದಾರೆ.

ಕೋಕ್, ಸಲ್ಫರ್ ಘಟಕಗಳನ್ನು ಮುಚ್ಚಲು ಆಗ್ರಹಿಸಿ ಬೈಕಂಪಾಡಿಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಎದುರು ಸೋಮವಾರ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ಈ ಎಚ್ಚರಿಕೆ ನೀಡಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್, ನಿಯಮ ಉಲ್ಲಂಘಿಸಿ ಘಟಕಗಳು ಕಾರ್ಯಾಚರಿಸುತ್ತಿರುವುದಲ್ಲದೆ, ಸ್ಥಳೀಯ ಜನರ ಜೀವನವನ್ನೇ ಹಾಳುಗೈದಿರುವ ಘಟಕಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಸಮಾರಂಭಗಳ ಸಂದರ್ಭ ಅಥವಾ ನಿಯಮಿತ ಕಾಲಕ್ಕೆ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಉಪಯೋಗಿಸುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ದಿನದ 24 ಗಂಟೆಯೂ ಶಬ್ದಮಾಲಿನ್ಯ, ವಾಯು ಮಾಲಿನ್ಯಕ್ಕೆ ಕಾರಣ ವಾಗುತ್ತಿರುವ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಇಲ್ಲದ ಅಧಿಕಾರ ಯಾವುದಕ್ಕಾಗಿ ಎಂದು ಅವರು ಜಿಲ್ಲಾಡಳಿತ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೈದರು.

ಎಂಆರ್‌ಪಿಎಲ್ ಕೋಕ್ ಮತ್ತು ಸಲ್ಫರ್ ಘಟಕಗಳ ಕಾರ್ಯಾಚರಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಒಂದು ವರ್ಷದ ಅನುಮತಿ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ಅದನ್ನು ನವೀಕರಿಸಬಾರದು. ಒಂದು ವೇಳೆ ನವೀಕರಿಸಿದರೆ ಪರಿಸರ ಮಾಲಿನ್ಯ ಮಂಡಳಿಗೇ ಬೀಗ ಜಡಿಯುವ ಕೆಲಸ ಮಾಡಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ನಾಯಕರಾದ ಅಬೂಬಕರ್ ಬಾವ, ಮೊಯ್ದಿನ್ ಶರೀಫ್, ಮೋಹನ್ ಕಳವಾರು, ಯಮುನಾ, ಭವಾನಿ, ಮಯ್ಯದ್ದಿ, ಹಕೀಂ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮೊದಲಾದವರು ಭಾಗವಹಿಸಿದ್ದರು. ಇಮ್ತಿಯಾಝ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.

Write A Comment