ಕನ್ನಡ ವಾರ್ತೆಗಳು

ಸರಕಾರಿ ನೌಕರರ ವಸತಿಗೃಹಗಳ ದುರಸ್ತಿ ಕರ್ಮಕಾಂಡ – ಲಕ್ಷಾಂತರ ರೂ.ಗಳ ಗೋಲ್‌ಮಾಲ್ – ತನಿಖೆಗೆ ಸರಕಾರಿ ನೌಕರರ ಸಂಘ ಆಗ್ರಹ

Pinterest LinkedIn Tumblr

Govt_quarters_golmal

ಮಂಗಳೂರು, ಎ.20: ಇಂದಿರಾ ಆವಾಸ್ ಯೋಜನೆ, ವಾಲ್ಮೀಕಿ-ಅಂಬೇಡ್ಕರ್ ಆವಾಸ್‌ಯೋಜನೆ ಸೇರಿದಂತೆ ಬಡವರು ಸೂರು ಕಟ್ಟಿಕೊಳ್ಳಲು ಸರಕಾರ ನೀಡುವ ಹಣವೇ ಒಂದರಿಂದ ಒಂದೂವರೆ ಲಕ್ಷ ರೂ. ಆದರೆ ಇಲ್ಲಿ ಸರಿಸುಮಾರು ಅಷ್ಟೇ ವಿಸ್ತಾರದ ಮನೆಯ ದುರಸ್ತಿಗಾಗಿ ಮೂರು ಲಕ್ಷ ರೂ. ಖರ್ಚು ಮಾಡಿದ ಲೆಕ್ಕ ತೋರಿಸಲಾಗುತ್ತಿದೆ. ಇದು ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಸರಕಾರಿ ನೌಕರರ ವಸತಿಗೃಹಗಳ ದುರಸ್ತಿ ಕರ್ಮಕಾಂಡ. ಇಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘ, ಇದರ ವಿರುದ್ಧ ಲೋಕಾಯುಕ್ತದ ಮೊರೆ ಹೋಗಲು ಚಿಂತಿಸುತ್ತಿದೆ.

ಮಂಗಳೂರು ನಗರದಲ್ಲಿರುವ ಸರಕಾರಿ ವಸತಿಗೃಹಗಳ ದುರಸ್ತಿಗೆ ಪ್ರತಿ ಮನೆಗೆ ಸರಾಸರಿ 3 ಲಕ್ಷ ರೂ.ಗಳ ವೆಚ್ಚ ತೋರಿಸಲಾಗುತ್ತಿದೆ. ಮಂಗಳೂರು ನಗರದಲ್ಲಿ ನಾದುರಸ್ತಿ ಯಲ್ಲಿರುವ ಸರಕಾರಿ ವಸತಿಗೃಹಗಳ ದುರಸ್ತಿ ಗಾಗಿ ಸರಕಾರ 20 ಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ಫೆಬ್ರವರಿಯಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದುವರೆಗೆ 206 ಮನೆಗಳ ದುರಸ್ತಿ ಮಾಡಿ 7.68 ಕೋಟಿ ರೂ. ವೆಚ್ಚ ತೋರಿಸಲಾಗಿದೆ. ಆದರೆ ಸರಕಾರ ಬಿಡುಗಡೆ ಮಾಡಿದ್ದು 20 ಕೋ ರೂ.ಗಳಾದರೆ, ಉಳಿದ 12.32 ಕೋಟಿ ರೂ. ಎಲ್ಲಿ ಹೋಯಿತು, ಅದನ್ನು ಯಾವುದಕ್ಕೆ ವಿನಿಯೋಗಿಸಲಾಗಿದೆ ಎನ್ನುವುದು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪ್ರಶ್ನೆಯಾಗಿದೆ. ಅಲ್ಲದೆ ಈ ದುಬಾರಿ ‘ದುರಸ್ತಿ’ ಕಾಮಗಾರಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗಳ ಮೂಗಿನ ನೇರದಲ್ಲೇ ಅವ್ಯವಹಾರಗಳು ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಸತ್ಯ ಬಯಲಿಗೆಳೆಯಲು ಇಲಾ ಖೆಯೇತರ ಸಂಸ್ಥೆಯಿಂದ ತನಿಖೆ ನಡೆಸಲೇ ಬೇಕಾಗಿದೆ ಎನ್ನುವುದು ಸರಕಾರಿ ನೌಕರರ ಸಂಘದ ಆಗ್ರಹವಾಗಿದೆ.

ಮನೆಗಳಲ್ಲಿದ್ದ ಸಮಸ್ಯೆಗಳೇನು…?

ಮಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 14 ಸಾವಿರ ಸರಕಾರಿ ನೌಕರ ರಿದ್ದಾರೆ. ಆದರೆ ಸರಕಾರಿ ವಸತಿಗೃಹಗಳಿ ರುವುದು 421. ಇವುಗಳಲ್ಲಿ 101 ಮನೆಗಳು ಮಾತ್ರ ಸುಸ್ಥಿತಿಯಲ್ಲಿದ್ದು, 256 ಮನೆಗಳು ನಾದುರಸ್ತಿಯಲ್ಲಿದ್ದವು. ಇದಲ್ಲದೆ 64 ವಸತಿ ಗೃಹಗಳು ವಾಸಕ್ಕೆ ಅಯೋಗ್ಯವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ಇಲ್ಲಿ ನಾದುರಸ್ತಿಯಲ್ಲಿರುವ 256 ಮನೆಗಳ ಛಾವಣಿಗಳು ಮಳೆಗಾಲದಲ್ಲಿ ಸೋರುತ್ತಿತ್ತು. ಕೆಲವು ಮನೆಗಳ ಬಾಗಿಲು ಗಳು ಕಿತ್ತು ಹೋಗಿದ್ದರೆ, ಇನ್ನು ಕೆಲವು ದಾರಂದಗಳು ಗೆದ್ದಲುಗಳಿಗೆ ಆಹಾರವಾಗಿ ದ್ದವು. ಕಿಟಕಿಗಳ ಗ್ರಿಲ್‌ಗಳು ತುಕ್ಕು ಹಿಡಿ ದಿದ್ದವು. ನೆಲಕ್ಕೆ ಹಾಕಿದ್ದ ಸಿಮೆಂಟ್ ಕಿತ್ತು ಹೋಗಿತ್ತು. ಮಳೆಗಾಲದಲ್ಲಿ ನೆಲ ತೇವಾಂ ಶದಿಂದ ಗಲೀಜಾಗುತ್ತಿತ್ತು. ಶೌಚಾಲಯಗಳ ಬೇಸಿನ್, ಬಾಗಿಲುಗಳು ಸಮರ್ಪಕವಾ ಗಿರಲಿಲ್ಲ. ಇಂತಹ ಸಮಸ್ಯೆಗಳ ನಡುವೆಯೇ ಬದುಕು ಸಾಗಿಸುತ್ತಿದ್ದ ಇಲ್ಲಿನ ಸರಕಾರಿ ನೌಕರರ ದುಃಸ್ಥಿತಿಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ವಿವರಿಸಿ ಸರಕಾರದ ಗಮನಸೆಳೆದಿದ್ದರು. ಅದರ ಪರಿಣಾಮ ಈ ವಸತಿಗೃಹಗಳ ದುರಸ್ತಿಗೆ ಸರಕಾರ 20 ಕೋ.ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎನ್ನುತ್ತಾರೆ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು. ಇದೀಗ ಈ ಮನೆಗಳ ದುರಸ್ತಿ ಕಾರ್ಯ ಭಾಗಶಃ ಪೂರ್ಣಗೊಂಡಿದೆ. ಲೋಕೋ ಪಯೋಗಿ ಇಲಾಖೆಯ ಪ್ರಕಾರ ಈ ಅನು ದಾನದಲ್ಲಿ ‘ಎ’ ಗ್ರೇಡ್‌ನ ಪ್ರತಿ ಮನೆಗಳ ದುರಸ್ತಿಗೆ 4 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಬಳಕೆಯಾಗಿದ್ದರೆ, ‘ಡಿ’ ಗ್ರೇಡ್‌ನ ವಸತಿಗೃಹಗಳ ದುರಸ್ತಿಗೆ ಸುಮಾರು 2.5 ಲಕ್ಷ ರೂ.ಗಳವರೆಗೆ ವೆಚ್ಚ ತಗುಲಿದೆ.

ಹೀಗಿದೆ ದುರಸ್ತಿಯ ವೈಖರಿ…

ನಗರದ ದೇರೇಬೈಲ್(ಉರ್ವಸ್ಟೋರ್ ಬಳಿ)ನಲ್ಲಿ 220, ಬೋಂದೆಲ್‌ನಲ್ಲಿ 123, ಹ್ಯಾಟ್‌ಹಿಲ್‌ನಲ್ಲಿ 35, ಕುಂಜತ್ತಬೈಲ್‌ನಲ್ಲಿ 35 ಹಾಗೂ ಪಾಂಡೇಶ್ವರದಲ್ಲಿ 8 ಸರಕಾರಿ ವಸತಿಗೃಹಗಳಿವೆ. ಈ ಪೈಕಿ ದೇರೇಬೈಲ್‌ನ 162, ಬೋಂದೆಲ್‌ನ 30, ಹ್ಯಾಟ್‌ಹಿಲ್‌ನ 4 ಹಾಗೂ ಪಾಂಡೇಶ್ವರದ ಎಲ್ಲಾ 8 ಗೃಹಗಳು ಸೇರಿ ಒಟ್ಟು 206 ವಸತಿಗೃಹಗಳ ದುರಸ್ತಿಗೆ ಅನುದಾನ ಮಂಜೂರಾಗಿವೆ. ಈ ಮನೆಗಳ ಪೈಕಿ ‘ಎ’ ಗ್ರೇಡ್‌ನ ಪ್ರತಿ ವಸತಿಗೃಹಗಳು 800ರಿಂದ 900 ಚದರ ಅಡಿ ವಿಸ್ತೀರ್ಣವಿದ್ದರೆ, ‘ಡಿ’ ಗ್ರೇಡ್‌ನ ಗೃಹಗಳು 400ರಿಂದ 500 ಚದರ ಅಡಿ ವಿಸ್ತೀರ್ಣದವುಗಳು. ಈ ಮನೆಗಳಲ್ಲಿ ಒಂದಷ್ಟು ದುರಸ್ತಿ ಕಾರ್ಯಗಳು ನಡೆ ದಿವೆ. ನೆಲಕ್ಕೆ ವಿಟ್ರಿೈಡ್ ಟೈಲ್ಸ್ ಹಾಕಲಾಗಿದೆ. ಪ್ರಸ್ತುತ ಮಾರುಕಟ್ಟೆ ದರದ ಅನ್ವಯ ಇದಕ್ಕೆ ಸುಮಾರು 50 ಸಾವಿರ ರೂ. ವೆಚ್ಚ ತಗಲಬಹುದು.

ಮುರಿದು ಹೋಗಿರುವ ಬಾಗಿಲುಗಳ ಬದಲು ಹೊಸತನ್ನು ಜೋಡಿ ಸಲಾಗಿದ್ದು, ಇದಕ್ಕೆ 5 ಸಾವಿರ ರೂ.ನಿಂದ 8 ಸಾವಿರ ರೂ. ವರೆಗೆ ವೆಚ್ಚವಾಗಿರಬಹುದು. ಕೆಲವು ಮನಗೆಳಲ್ಲಿ ಹಳೆಯ ಬಾಗಿಲುಗಳನ್ನೇ ದುರಸ್ತಿಗೊಳಿಸಲಾಗಿದೆ. ಅಗತ್ಯವಿದ್ದೆಡೆ ಬಾಗಿಲ ಚೌಕಟ್ಟು (ದಾರಂದ)ಗಳನ್ನು ಬದ ಲಾಯಿಸಲಾಗಿದ್ದು, ಇದಕ್ಕೆ ಸುಮಾರು 3 ಸಾವಿರ ರೂ., ಕಿಟಕಿಗಳ ಗ್ರಿಲ್‌ಗಳನ್ನು ಬದಲಾಯಿಸಲಾಗಿದ್ದು, ಇದಕ್ಕೆ 2 ಸಾವಿರ ರೂ. ವೆಚ್ಚವಾಗಿರಬಹುದು. ಅಡುಗೆ ಕೋಣೆಯಲ್ಲಿ ಅಂದಾಜು 3 ಸಾವಿರ ರೂ. ವೌಲ್ಯದ ಸಿಂಕ್ ಅಳವಡಿಸಲಾಗಿದೆ. ಹಾಗೂ ಶೌಚಾಲಯವನ್ನು ಒಂದಷ್ಟು ಸರಿಪಡಿಸಲಾಗಿದೆ. ಇದರ ಜೊತೆಗೆ ಮನೆಗೆ ಸುಣ್ಣಬಣ್ಣ ಬಳಿಯಲಾಗಿದೆ. ಕೆಲವು ಮನೆಗಳಿಗೆ ಡಿಸ್ಟೆಂಪರ್ ಬಳಸಿದ್ದರೆ, ಇನ್ನು ಕೆಲವು ಮನೆಗಳ ಗೋಡೆಗಳಿಗೆ ಬರೀ ಸುಣ್ಣ ಬಳಿಯಲಾಗಿದೆ. ಗೋಡೆಯ ಬಣ್ಣ ಬಟ್ಟೆಬರೆಗಳ ಮೇಲೆಲ್ಲ ಮೆತ್ತಿಕೊಳ್ಳುತ್ತದೆ. ಸಾಲಾಗಿರುವ ಈ ಮನೆಗಳಿಗೆ ಕಂಪೌಂಡ್ ಗೋಡೆಯನ್ನು ನಿರ್ಮಿಸಲಾಗಿದೆ. ಇವೆಲ್ಲ ದಕ್ಕೂ ತಗಲಬಹುದಾದ ವೆಚ್ಚವನ್ನು ಲೆಕ್ಕ ಹಾಕಿದರೆ ಪ್ರತಿ ಮನೆಯ ದುರಸ್ತಿ ವೆಚ್ಚ 1.25 ಲಕ್ಷ ರೂ.ಗಿಂತ ಹೆಚ್ಚಾಗದು. ಆದರೆ ಒಂದು ಲಕ್ಷ ರೂ. ಕೂಡಾ ವಿನಿಯೋಗ ಆಗಿಲ್ಲ ಎಂದು ಸರಕಾರಿ ನೌಕರರ ಸಂಘ ಆರೋಪಿಸುತ್ತಿದೆ.

ಅಸಮರ್ಪಕ ದುರಸ್ತಿಯ ಆರೋಪ
ದುರಸ್ತಿಗಾಗಿ ಸರಕಾರ 3 ಲಕ್ಷ ರೂ. ಬಿಡುಗಡೆಗೊಳಿಸಿದ್ದರೂ ಸಮರ್ಪಕವಾಗಿ ದುರಸ್ತಿ ಕಾರ್ಯಗಳು ನಡೆದಿಲ್ಲ ಎಂದು ಈ ವಸತಿ ನಿಲಯಗಳಲ್ಲಿ ವಾಸಿಸುವವರ ಆರೋಪ. ಛಾವಣಿ ದುರಸ್ತಿಯ ನೆಪದಲ್ಲಿ ಹಳೆಯ ಹೆಂಚುಗಳನ್ನೇ ಸ್ವಚ್ಛ ಮಾಡಿ ಮರು ಹೊದಿಸಲಾಗಿದೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಂತಿದ್ದು, ಛಾವಣಿ ಮತ್ತೆ ಸೋರತೊಡಗಿದೆ ಎಂದು ಕೆಲವು ಮನೆಗಳಲ್ಲಿ ಮಹಿಳೆಯರು ದೂರಿ ಕೊಂಡಿದ್ದಾರೆ. ಕೆಲವು ಮನೆಗಳ ವರಾಂಡಗಳು ಮಾತ್ರ ಕಾಂಕ್ರಿಟ್ ಛಾವಣಿಗಳನ್ನು ಹೊಂದಿದ್ದು, ಅವು ಸೋರಿಕೆ ಸಮಸ್ಯೆಯನ್ನು ಎದುರಿಸುತ್ತಿವೆ. ಸೋರಿಕೆಯಿಂದಾಗಿ ಸಾರಣೆ (ಪ್ಲಾಸ್ಟರ್) ಕಿತ್ತುಹೋಗಿದೆ. ಸೋರಿಕೆ ತಡೆಯಲು ಛಾವಣಿಯ ಮೇಲ್ಭಾಗದ ದುರಸ್ತಿ ಬದಲು ಛಾವಣಿ ಒಳಭಾಗದಲ್ಲಿ ಸಿಮೆಂಟ್ ಹಾಕಲಾಗಿದೆ. ಈ ರೀತಿ ಸಿಮೆಂಟ್ ಕಿತ್ತುಹೋಗಿರುವ ಕಡೆಗಳಲೆಲ್ಲಾ ಸಿಮೆಂಟ್ ತಿಪ್ಪೆ ಸಾರಲಾಗಿದೆ. ಸೋರಿಕೆ ಮೂಲವನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಕಲ್ಪಿಸಿಲ್ಲ. ಇದರಿಂದಾಗಿ ಇತ್ತೀಚೆಗೆ ಸುರಿದ ಸಣ್ಣ ಮಳೆಗೇ ಛಾವಣಿಯಲ್ಲಿ ಮತ್ತೆ ಸೋರಿಕೆ ಕಂಡುಬಂದಿದೆ. ಈ ಬಗ್ಗೆ ದುರಸ್ತಿ ಕಾಮಗಾರಿ ಗುತ್ತಿಗೆದಾರರನ್ನು ಕೇಳಿದರೆ ಅದಕ್ಕೆಲ್ಲ ಪರಿಹಾರ ಕಲ್ಪಿಸುತ್ತೇವೆ ಎಂದು ಭರವಸೆಯಷ್ಟೇ ನೀಡುತ್ತಾರೆ ಎಂಬುದು ಮನೆಯವರ ಅಳಲು.

ಸಾಮಾನ್ಯವಾಗಿ ಛಾವಣಿಯ ಎರಡು ಮಾಡುಗಳು ಸೇರುವಲ್ಲಿ ನೀರು ಹರಿದು ಹೋಗಲು ತಗಡಿನ ಶೀಟು ಅಥವಾ ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಕೆ ಮಾಡಬೇಕಿತ್ತು. ಆದರೆ ಮರದ ಹಲಗೆಗಳನ್ನು ಉಪಯೋಗಿಸಿ ಅದರ ಒಳಭಾಗಕ್ಕೆ ಬರೀ ಪ್ಲಾಸ್ಟಿಕ್ ಹಾಳೆ ಬಳಸಲಾಗಿದೆ ಎಂದು ನಿವಾಸಿಗಳು ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ.

ದುರಸ್ತಿ ಕೆಲಸ ಆರಂಭಿಸಿ ಮೂರು ತಿಂಗಳುಗಳು ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ದುರಸ್ತಿಗಾಗಿ ಮನೆ ಬಿಟ್ಟವರು ಸಂಕಟಪಡುತ್ತಿದ್ದರೆ, ಇನ್ನೂ ಒಂದು ವಾರದಲ್ಲಿ ಕಾಮಗಾರಿ ಮುಗಿ ಸುವುದಾಗಿ ಭರವಸೆ ನೀಡುತ್ತಲೇ ಇದ್ದಾರೆ ಗುತ್ತಿಗೆದಾರರು. ಅಲ್ಲದೇ ಯಾವುದೇ ಮನೆಯ ದುರಸ್ತಿಯನ್ನು ಸಂಪೂರ್ಣವಾಗಿ ಮುಗಿಸಿಲ್ಲ. ಎಲ್ಲಾ ಮನೆಗಳಲ್ಲೂ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಬಾಕಿ ಉಳಿಸಿ ಹೋಗಲಾಗಿದೆ. ಕೇಳಿದರೆ ‘ಕೊನೆಗೆ’ ಸರಿಪಡಿಸುತ್ತೇವೆ ಎಂಬ ರೆಡಿಮೇಡ್ ಉತ್ತರವನ್ನು ಗುತ್ತಿಗೆದಾರರು ನೀಡುತ್ತಾರೆ ಎಂಬುದು ನಿವಾಸಿಗಳು ದೂರು. ಒಟ್ಟಾರೆ ಈ ದುರಸ್ತಿ ಕಾಮಗಾರಿಗೆ ಕೋಟ್ಯಂತರ ರೂ. ಬಿಡುಗಡೆಯಾಗಿದೆ ಎಂಬ ಆರೋಪ ಒಂದೆಡೆಯಾದರೆ, ಪ್ರತಿ ಮನೆಗೆ 3 ಲಕ್ಷ ರೂ. ಬಳಕೆ ಆಗಿಲ್ಲ ಎಂಬ ಆರೋಪ ಕೂಡಾ ಇದೆ. ಈ ಬಗ್ಗೆ ಸಮಗ್ರ ತನಿಖೆಗೆ ಸರಕಾರಿ ನೌಕರರ ಸಂಘ ಆಗ್ರಹಿಸುತ್ತಿದೆ.

ಅಂಗಳದ ನೀರು ಹರಿಯಲು 1 ಅಡಿ ಎತ್ತರದಲ್ಲಿ ಕೊಳವೆ!

ಬೋಂದೇಲ್ ಬಳಿಯಿರುವ ಸರಕಾರಿ ವಸತಿಗೃಹಗಳಿಗೆ ಕಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಇದೆಷ್ಟು ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿವೆೆ ಎಂದರೆ ಮನೆ ಆವರಣದಿಂದ ಮಳೆ ನೀರು ಹೊರಗೆ ಹರಿದು ಹೋಗಲು ಕಂಪೌಂಡ್ ಗೋಡೆಗೆ ಇರಿಸಲಾಗಿರುವ ಕೊಳವೆಗಳು ಅಂಗಳದಿಂದ ಸುಮಾರು ಒಂದು ಅಡಿ ಎತ್ತರದಲ್ಲಿವೆ!. ನೆರೆ ಬಂದಲ್ಲಿ ಮಾತ್ರ ಇದರಲ್ಲಿ ನೀರು ಹರಿಯಲು ಸಾಧ್ಯ. ಇದು ಒಂದು ಮನೆಯ ಸಮಸ್ಯೆಯಲ್ಲ. ಎಲ್ಲಾ ಮನೆಗಳ ಆವರಣದಲ್ಲೂ ಇದೇ ರೀತಿಯಾಗಿ ಕೊಳವೆ ಅಳವಡಿಸಲಾಗಿದೆ.

ಮನಪಾ ವ್ಯಾಪ್ತಿಯಲ್ಲಿನ ಸರಕಾರಿ ವಸತಿಗೃಹಗಳ ದುರಸ್ತಿಗೆ 7.68 ಕೋ.ರೂ. ಮಾತ್ರ ಬಿಡುಗಡೆಯಾಗಿದೆ. ಈ ಅನುದಾನದ ಸದ್ವಿನಿಯೋಗ ಆಗಿದ್ದು, ಇದರಲ್ಲಿ ಅಕ್ರಮ ನಡೆದಿಲ್ಲ. ದುರಸ್ತಿ ಕಾಮಗಾರಿ ಇನ್ನೂ ಸಂಪೂರ್ಣ ಗೊಂಡಿಲ್ಲ. ಕಾಮಗಾರಿ ತೀರ ವಿಳಂಬಗೊಂಡಿರುವುದರಿಂದ ಅಕ್ರಮದ ಆರೋಪ ಕೇಳಿಬರುತ್ತಿದೆ. ಆರೋಪದಲ್ಲಿ ಹುರುಳಿಲ್ಲ. -ಎಚ್.ಎಂ.ಹರೀಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನ.1ನೆ ವಿಭಾಗ ಉಪವಿಭಾಗ, ಲೋಕೋಪಯೋಗಿ ಇಲಾಖೆ ಮಂಗಳೂರು.

ವಸತಿಗೃಹಗಳ ದುಃಸ್ಥಿತಿಯ ಕುರಿತಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಅನು ದಾನ ಮಂಜೂರುಗೊಳಿಸಿದ್ದೇನೆ. ದುರಸ್ತಿ ಕಾರ್ಯಗಳು ಮುಕ್ತಾಯದ ಹಂತ ತಲುಪಿವೆ. ಬಿಡುಗಡೆಯಾಗಿರುವ ಎಲ್ಲ ಅನುದಾನದ ಸದ್ವಿನಿ ಯೋಗ ಆಗಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಅವ್ಯವಹಾರ ನಡೆದಿದ್ದರೆ ಆ ಬಗ್ಗೆ ಸಮಗ್ರ ತನಿಖೆಗೆ ಸೂಚಿಸುತ್ತೇನೆ. ಅಲ್ಲದೇ ಇನ್ನೊಮ್ಮೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತೇನೆ. -ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯರು.

ವರದಿ :ಎಂ.ಹನೀಫ್ ಅನಿಲಕಟ್ಟೆ |  ಕೃಪೆ :  ವಾಭಾ

Write A Comment