ಸೈಯದ್ ಅಬ್ದುಲ್ ಬಾಶುರವರ ’ಮನೆಗೊಂದು ಹಸು’ ಕಾರ್ಯಕ್ರಮ: ನೂರು ಫಲಾನುಭವಿಗಳಿಗೆ ಹಸು
ಕುಂದಾಪುರ: ಶಿರೂರು ಗ್ರಾಮವನ್ನು ಸಂಸದರ ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಬಹುದಾದ ಅನುದಾನದ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅಳವಡಿಸಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ತಯಾರಿಸಲಾಗುವುದು. ಹಿಂದುಳಿದ ಗ್ರಾಮವೆಂಬ ಹಣೆಪಟ್ಟಿ ಹೊಂದಿರುವ ಈ ಶಿರೂರನ್ನು ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯ ಮೂಲಕ ಸೈಯದ್ ಅಬ್ದುಲ್ ಬಾಶುರವರ ರಾಷ್ಟ್ರ ಮಟ್ಟಕ್ಕೆ ಗುರುತಿಸಲ್ಪಟ್ಟವರು. ಗ್ರಾಮಕ್ಕೆ ನಿರಂತರವಾಗಿ ಕುಡಿಯುವ ನೀರನ್ನು ಒದಗಿಸುವ ಮೂಲಕ ಗ್ರಾಮಾಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ಬಾಶಾರಂಥವರ ಸಹಭಾಗಿತ್ವದಲ್ಲಿ ಶಿರೂರನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಅವರು ಶಿರೂರು ಗ್ರಾಮವನ್ನು ಶಿರೂರು ಗ್ರಾಮವನ್ನು ಆಯ್ಕೆ ಮಾಡಿದ್ದು ಆ ಪ್ರಯುಕ್ತ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಶಿರೂರು ಗ್ರೀನ್ ವ್ಯಾಲಿ ಶಾಲೆಯ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಪಡಿತರದಿಂದ ಈ ಗ್ರಾಮದಲ್ಲಿ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬರು ಸ್ವಾವಲಂಬಿಗಳಾಗಬೇಕು ಎನ್ನುವ ನೆಲೆಯಲ್ಲಿ ಸೈಯದ್ ಅಬ್ದುಲ್ ಬಾಶುರವರು ಮನೆಗೊಂದು ಉಚಿತ ದನ ಕೊಡುವ ತೀರ್ಮಾನ ಮಾಡಿದ್ದಾರೆ. ಹೀಗೆ ಬೇರೆ ಬೇರೆ ಯೋಜನೆಗಳನ್ನು ಇಲ್ಲಿ ಅನುಷ್ಠಾನಿಸುವ ಮೂಲಕ ದೇಶದಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದರು.
33 ಲಕ್ಷ ರೂಪಾಯಿ ವೆಚ್ಚದಲ್ಲಿ ಪೇಟೆಕೇರಿ ರಸ್ತೆಯ ರೈಲ್ವೆ ಸೇತುವೆ ಕಳಗಡೆ ಸಂಪರ್ಕ ಸೇತುವೆ ಉದ್ಘಾಟನೆ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಪೇಟೆಕೆರೆ ರಸ್ತೆ ಅಭಿವೃದ್ಧಿ, 5 ಕೋಟಿ ವೆಚ್ಚದಲ್ಲಿ ದೊಂಬೆಯಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ, 94 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ 33 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನ ಹೀಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಇವತ್ತು ಯೋಜನೆಗಳು ಚಾಲನೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ ಖಾದರ್, ಬಂದರು ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಕಾನೂನು ಮತ್ತು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಶಾಸಕ ಕೆ.ಗೋಪಾಲ ಪೂಜಾರಿ, ಗ್ರೀನ್ ವ್ಯಾಲಿ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಸೈಯದ್ ಅಬ್ದುಲ್ ಬಾಶು, ಬ್ಲೋಸಂ ಫೆರ್ನಾಡೀಸ್, ಮಾಜಿ ಶಾಸಕ ಬಸವರಾಜು, ತಾ.ಪಂ ಸದಸ್ಯ ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.